ಬೆಂಗಳೂರು: ಸೆಪ್ಟೆಂಬರ್ 1ರಿಂದಲೇ ಪದವಿ ಕಾಲೇಜುಗಳ ಶೈಕ್ಷಣಿಕ ವರ್ಷವನ್ನು ಆನ್ ಲೈನ್ ಮೂಲಕವೇ ಪೂರ್ಣ ಪ್ರಮಾಣದಲ್ಲಿ ಆರಂಭ ಮಾಡಲಾಗುತ್ತಿದ್ದು, ಅಕ್ಟೋಬರ್ ನಿಂದ ನೇರ (ಆಫ್‌ಲೈನ್) ತರಗತಿಗಳು ಶುರುವಾಗಲಿವೆ ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ  ಡಾ. ಸಿ.ಎನ್. ಅಶ್ವತ್ಥನಾರಾಯಣ (Dr CN Ashwathnarayana) ಪ್ರಕಟಿಸಿದರು.


COMMERCIAL BREAK
SCROLL TO CONTINUE READING

ಬೆಂಗಳೂರಿನ ಸುಬ್ರಹ್ಮಣ್ಯ ನಗರದ ವಾರ್ಡ್ ಸಂಖ್ಯೆ 66ರಲ್ಲಿ ಮಂಗಳವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಕೇಂದ್ರ ಸರಕಾರದಿಂದ ನೇರವಾಗಿ ತರಗತಿಗಳನ್ನು ಆರಂಭ ಮಾಡುವುದರ ಬಗ್ಗೆ ಮಾರ್ಗಸೂಚಿ ಬರಬೇಕಿದೆ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಕೆಲ ಪದವಿ ಪರೀಕ್ಷೆಗಳು ನಡೆಯಲಿವೆ. ಹೀಗಾಗಿ ಸರಕಾರವೂ ಮುಂದಿನ ತಿಂಗಳಿಂದ  ಅನ್ ಲೈನ್ ಮೂಲಕವೇ ಎಲ್ಲ ಶೈಕ್ಷಣಿಕ ಚಟುವಟಿಕೆಗಳಿಗೆ ಪೂರ್ಣ ಪ್ರಮಾಣದಲ್ಲಿ ಚಾಲನೆ ನೀಡಲು ನಿರ್ಧರಿಸಿದೆ. ಜತೆಗೆ, ಅಕ್ಟೋಬರ್ ತಿಂಗಳಿಂದಲೇ ಎಲ್ಲ ಕಾಲೇಜುಗಳನ್ನು ಆರಂಭಿಸಲಾಗುವುದು. ವಿದ್ಯಾರ್ಥಿಗಳು ಕೂಡ ತರಗತಿಗಳಿಗೆ ಹಾಜರಾಗಬೇಕಾಗುತ್ತದೆ ಎಂದರು.


ಆನ್‌ಲೈನ್ ತರಗತಿ: ಕೊರೊನಾ ಸಂಕಷ್ಟದಲ್ಲಿ ಶಿಕ್ಷಣವೂ ಇಲ್ಲದೇ ಅತಂತ್ರರಾದ ಸ್ಲಂ ಮಕ್ಕಳು


ತರಗತಿಗಳನ್ನು ಆರಂಭಿಸುವ ಬಗ್ಗೆ ಈಗಾಗಲೇ ಯುಜಿಸಿ (UGC) ಮಾರ್ಗಸೂಚಿಯಂತೆ ರಾಜ್ಯ ಸರಕಾರ ಎಲ್ಲ ರೀತಿಯ ಪೂರ್ವಭಾವಿ ಸಿದ್ಧತೆಗಳನ್ನು ಮಾಡಿಕೊಂಡಿದೆ. ಕೇಂದ್ರ ಸರಕಾರದ ಆದೇಶ ಬರುತ್ತಿದ್ದಂತೆಯೇ ಈ ನಿಟ್ಟಿನಲ್ಲಿ ರಾಜ್ಯವು ಕಾರ್ಯೋನ್ಮುಖವಾಗಲಿದೆ ಎಂದು ಉಪ ಮುಖ್ಯಮಂತ್ರಿ ಹೇಳಿದರು.


ಅಂತಿಮ ವರ್ಷದ ಪರೀಕ್ಷೆ:
ಶೈಕ್ಷಣಿಕ ವರ್ಷದ ಆರಂಭದ ಜತೆಯಲ್ಲಿಯೇ ಅಂತಿಮ ವರ್ಷದಲ್ಲಿರುವ ಎಲ್ಲ ಪದವಿ (Degree), ಡಿಪ್ಲೊಮಾ ಮತ್ತು ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಜತೆಗೆ, ಬ್ಯಾಕ್ ಲಾಗ್ ಉಳಿಸಿಕೊಂಡಿರುವ ವಿದ್ಯಾರ್ಥಿಗಳಿಗೂ ಪರೀಕ್ಷೆ ನಡೆಸಲಾಗುವುದು. ಯಾವುದೇ ವಿದ್ಯಾರ್ಥಿಗಳ ಭವಿಷ್ಯಕ್ಕೆ ಧಕ್ಕೆ ಉಂಟಾಗಬಾರದು ಎಂಬ ಕಾರಣಕ್ಕೆ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಡಿಸಿಎಂ ಹೇಳಿದರು.


ನೀಟ್ ಪರೀಕ್ಷೆಗೆ ಅಡ್ಡಿ ಬೇಡ:
ಸರಕಾರವು ರಾಜ್ಯದಲ್ಲಿ 1.94 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಯಶಸ್ವಿಯಾಗಿ ಸಿಇಟಿ ಪರೀಕ್ಷೆ ಬರೆದಿದೆ. ಅದರಲ್ಲೂ 63 ಮಂದಿ ಕೋವಿಡ್ ಪಾಸಿಟೀವ್ ವಿದ್ಯಾರ್ಥಿಗಳು ಕೂಡ ಆತ್ಮಸ್ಥೈರ್ಯದಿಂದ ಪರೀಕ್ಷೆ ಬರೆದು ಉತ್ತಮ ರಾಂಕ್ ಪಡೆದಿದ್ದಾರೆ. ವಾಸ್ತವ ಹೀಗಿರಬೇಕಾದರೆ ಕೆಲವರು ನೀಟ್ ಪರೀಕ್ಷೆ ಯಾಕೆ ಬೇಡ ಅನ್ನುತ್ತಿದ್ದಾರೋ ಗೊತ್ತಿಲ್ಲ. ಅಂಥವರಿಗೆ ಒಂದು ಕಿವಿಮಾತು ಹೇಳಲು ಇಷ್ಟಪಡುತ್ತೇನೆ, ಯಾರೂ ಕೂಡ ಮಕ್ಕಳ ಭವಿಷ್ಯದ ಜತೆ ಚೆಲ್ಲಾಟ ಆಡಬಾರದು. ಇದರ ಹಿಂದೆ ಏನೋ ಹುನ್ನಾರ ಇದ್ದಹಾಗಿದೆ, ಮೆರಿಟ್ ಮೂಲಕ ಸೀಟು ಸಿಗಬಾರದು, ವ್ಯವಸ್ಥಿತವಾಗಿ ಸೀಟು ಹಂಚಿಕೆಯಾಗಬಾರದು ದುರುದ್ದೇಶ ಇದ್ದಂತೆ ಕಾಣುತ್ತಿದೆ.


 ಯಾವುದೊ ಕಾಣದ ಕೈಗಳು ಇದರ ಹಿಂದಿವೆ. ಕೆಲ ಪಟ್ಟಭದ್ರ ಹಿತಾಸಕ್ತಿಗಳು ಮೊದಲಿನಿಂದಲೂ ನೀಟ್ ಪರೀಕ್ಷೆಗೆ ಅಡ್ಡಿಪಡಿಸಲು ಯತ್ನಿಸುತ್ತಲೇ ಇವೆ. ಇದರ ಹಿಂದೆ ದೊಡ್ಡ ಜಾಲವೇ ಇದೆ. ಹಲವಾರು ವರ್ಷಗಳಿಂದ ಈ ದುಷ್ಪ್ರಯತ್ನಗಳನ್ನು ಮಾಡುತ್ತಾ ಬರಲಾಗುತ್ತಿದೆ. ಆದರೆ, ಆವರ ಉದ್ದೇಶ ಈಡೇರುತ್ತಿಲ್ಲ. ಹಾಗೆ ನೋಡಿದರೆ, ನೀಟ್ ಪರೀಕ್ಷೆ ಅತ್ಯುತ್ತಮವಾಗಿದೆ. ಒಂದು ಪರೀಕ್ಷೆ ಮೂಲಕ ದೇಶ ವಿವಿಧೆಡೆ ಪ್ರವೇಶಾತಿ ಪಡೆಯುವ ಪದ್ಧತಿ ಇದಾಗಿದೆ. ಈ ಪರೀಕ್ಷೆ ಆಗಲೇಬೇಕಿದೆ ಎಂದು ಡಾ. ಅಶ್ವತ್ಥನಾರಾಯಣ ಒತ್ತಿ ಹೇಳಿದರು.


ನೀಟ್ ವಿರೋಧ ಮಾಡುತ್ತಿರುವವರಿಗೆ ಖಂಡಿತವಾಗಿಯೂ ದುರುದ್ದೇಶವಿದೆ. ಆದರೆ ರಾಜ್ಯ ಸರಕಾರ ಈ ಪರೀಕ್ಷೆಗೆ ಬೇಕಾದ ಎಲ್ಲ ಸಹಕಾರ ನೀಡುತ್ತದೆ ಹಾಗೂ ನಾವೂ ಪರೀಕ್ಷೆಗೆ ಸನ್ನದ್ಧರಾಗಿದ್ದೇವೆ ಎಂದು ಅವರು ಸ್ಪಷ್ಟವಾಗಿ ಹೇಳಿದರು. ಬಿಬಿಎಂಪಿ ಸದಸ್ಯ ಮಂಜುನಾಥ್ ಸೇರಿದಂತೆ ಪಾಲಿಕೆಯ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.