ಉನ್ನತ ಶಿಕ್ಷಣ ಖಾತೆಗೆ `ಸೈ` ಎಂದ ಜಿಟಿಡಿ
ಕೊನೆಗೂ ಉನ್ನತ ಶಿಕ್ಷಣ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಜಿ.ಟಿ. ದೇವೇಗೌಡ
ಬೆಂಗಳೂರು: ಖಾತೆ ಹಂಚಿಕೆ ಬಳಿಕ ಉನ್ನತ ಶಿಕ್ಷಣ ಖಾತೆಯನ್ನು ಪಡೆಯಲು ಹಿಂದೇಟು ಹಾಕಿದ್ದ ಸಚಿವ ಜಿ.ಟಿ. ದೇವೇಗೌಡ ಇಂದು ಕೊನೆಗೂ ಉನ್ನತ ಶಿಕ್ಷಣ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ನಿನ್ನೆಯಷ್ಟೇ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಹಾಗೂ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಜಿ.ಟಿ. ದೇವೇಗೌಡರ ಮನವೊಲಿಸಿದ ಬೆನ್ನಲ್ಲೇ ಇಂದು ವಿಧಾನಸೌಧದ ಮೂರನೇ ಮಹಡಿಯ ತಮ್ಮ ಕೊಠಡಿ ಸಂಖ್ಯೆ 344ರಲ್ಲಿ ಪೂಜೆ ನೆರವೇರಿಸಿ ಅಧಿಕೃತವಾಗಿ ಖಾತೆಯ ಜವಾಬ್ದಾರಿ ವಹಿಸಿಕೊಂಡರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಿಟಿಡಿ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನಾನು ಸಮರ್ಥವಾಗಿ ಈ ಖಾತೆ ಕಾರ್ಯನಿರ್ವಹಿಸುತ್ತೇನೆ ಎಂದು ನನ್ನ ಮೇಲೆ ಅಪಾರ ನಂಬಿಕೆ ಇಟ್ಟು ನನಗೆ ಈ ಖಾತೆಯನ್ನು ನೀಡಿದ್ದಾರೆ. ಈ ಕಾರ್ಯವನ್ನು ಪ್ರಾಮಾಣಿಕವಾಗಿ, ಯಶಸ್ವಿಯಾಗಿ ನಿರ್ವಹಿಸಿ ಗುಣಾತ್ಮಕ ಬದಲಾವಣೆ ತರಲು ಪ್ರಯತ್ನಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಅಲ್ಲದೆ ಉನ್ನತ ಶಿಕ್ಷಣ ಸೌಲಭ್ಯವನ್ನ ಹಳ್ಳಿಗಳಿಗೂ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಎಂದರು.
ಇದೇ ವೇಳೆ ಪ್ರೊ.ಕೆ.ಎಸ್. ರಂಗಪ್ಪ ಅವರನ್ನು ಸಲಹೆಗಾರರನ್ನಾಗಿ ನೇಮಿಸಿಕೊಳ್ಳುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಜಿಟಿಡಿ, ರಂಗಪ್ಪ ಅವರು ನನ್ನನ್ನು ಸಲಹೆಗಾರರನ್ನಾಗಿ ನೇಮಿಸಿಕೊಳ್ಳಿ ಎಂದು ಅವರು ಕೇಳಿಲ್ಲ. ಅಲ್ಲದೆ ಮುಖ್ಯಮಂತ್ರಿ ಅವರು ಸಹ ರಂಗಪ್ಪ ಅವರನ್ನು ಸಲಹೆಗಾರರನ್ನಾಗಿ ನೇಮಿಸಿಕೊಳ್ಳಿ ಎಂದು ತಿಳಿಸಿಲ್ಲ. ಪ್ರೊ. ರಂಗಪ್ಪ ಉತ್ತಮ ತಜ್ಞರು. ಅಲ್ಲದೆ ರಾಜ್ಯದಲ್ಲಿ ಅವರಂತೆ ಹಲವಾರು ಮಂದಿ ತಜ್ಞರಿದ್ದಾರೆ. ಎಲ್ಲರ ಸಲಹೆ ಪಡೆದು ಈ ಬಗ್ಗೆ ತೀರ್ಮಾನಿಸುವುದಾಗಿ ತಿಳಿಸಿದರು.