ಬೆಂಗಳೂರು: ಜೆಡಿಎಸ್ ಜತೆ ಸೇರಲ್ಲ. ಅವರ ಜೊತೆ ಸೇರಿ ಅನುಭಿವಿಸಿದ್ದು ಸಾಕು ಎಂದಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಟ್ವಿಟ್ಟರ್ ಮೂಲಕ ವಾಗ್ಧಾಳಿ ನಡೆಸಿರುವ ಜೆಡಿಎಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಸಿದ್ದರಾಮಯ್ಯನವರೇ ಯಾರ ಸಹವಾಸದಿಂದ ಯಾರು ಕೆಟ್ಟರು? ಯಾರು ಯಾರಿಗೆ ಕೇಡು ಬಗೆದರು? ಎಂದು ಆತ್ಮವಂಚನೆ ಇಲ್ಲದೇ ಹೇಳುವಿರಾ? ಎಂದು ಪ್ರಶ್ನಿಸಿದ್ದಾರೆ.


COMMERCIAL BREAK
SCROLL TO CONTINUE READING

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಹೆಚ್‌ಡಿಕೆ, ಉಪ ಚುನಾವಣೆಯಲ್ಲಿ ಕಾಂಗ್ರೆಸ್ 15 ಸ್ಥಾನ ಗೆದ್ದರೆ ಬಿಎಸ್ವೈ ರಾಜೀನಾಮೆ ನೀಡಬೇಕು. ನಂತರ ನೇರವಾಗಿ ಚುನಾವಣೆಗೆ ಹೋಗುತ್ತೇವೆ. ಜೆಡಿಎಸ್ ಜತೆ ಸೇರಲ್ಲ. ಅವರ ಜೊತೆ ಸೇರಿ ಅನುಭಿವಿಸಿದ್ದು ಸಾಕು ಎಂದಿದ್ದಾರೆ ಸಿದ್ದರಾಮಯ್ಯ. ಸಿದ್ದರಾಮಯ್ಯನವರೇ ಯಾರ ಸಹವಾಸದಿಂದ ಯಾರು ಕೆಟ್ಟರು? ಯಾರು ಯಾರಿಗೆ ಕೇಡು ಬಗೆದರು? ಎಂದು ಆತ್ಮವಂಚನೆ ಇಲ್ಲದೇ ಹೇಳುವಿರಾ? ಎಂದು ಸವಾಲು ಹಾಕಿದ್ದಾರೆ.



ನಮ್ಮ ಸಹವಾಸ ಮಾಡಿ ಎಂದು ಸಿದ್ದರಾಮಯ್ಯನವರನ್ನು ಬೇಡಿದ್ದು ಯಾರು. ಅವರ ಮನೆ ಬಾಗಿಲಿಗೆ ಹೋಗಿದ್ದು ಯಾರು? ಸಹಕಾರ(?) ಕೊಟ್ಟವರು ಯಾರು? ಪಕೃತಿ ಚಿಕಿತ್ಸೆಯಲ್ಲಿ ಕೂತು ಕತ್ತಿ ಮಸೆದಿದ್ದು ಯಾರು? ದಿನಕ್ಕೊಬ್ಬರ ಮೂಲಕ ನನ್ನನ್ನು ಟೀಕಿಸಿದ್ದು ಯಾರು?  ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.


ಲೋಕಸಭೆ ಚುನಾವಣೆಯಲ್ಲಿ ನೀವು ಕೊಟ್ಟ ಸಹಕಾರ ಎಂಥದ್ದು? ಸರ್ಕಾರ ಬೀಳಿಸಿದ ಶಾಸಕರ ಎದೆ ಬಗೆದರೆ ಅಲ್ಲಿ ಕಾಣುತ್ತಿದ್ದವರು ಯಾರು? ಈ "ಯಾರು''ಎಂಬ ಪ್ರಶ್ನೆಗೆ ನೀವು ಪ್ರಾಮಾಣಿಕವಾಗಿ ಉತ್ತರಿಸುವಿರಾ? ನೀವು ಕೊಟ್ಟ ಸಹಕಾರಕ್ಕೆ, ಬೆಂಬಲಕ್ಕೆ ನಾನು ಋಣಿ. ಈ ಜನ್ಮದಲ್ಲಿ‌ ನಾನು ಮರೆಯಲಾರೆ. ನಿಮ್ಮ ಸಹವಾಸ ನಮಗೂ ಬೇಡ ಸಿದ್ದರಾಮಯ್ಯನವರೇ... ಎಂದು ತಿರುಗೇಟು ನೀಡಿದ್ದಾರೆ.