ಮೆಟ್ರೋ ರೈಲಿನಲ್ಲಿ ಕಾಲೇಜು ವಿದ್ಯಾರ್ಥಿನಿಗೆ ಕಿರುಕುಳ
ನಮ್ಮ ಮೆಟ್ರೋ .. ಮಹಿಳೆಯರಿಗೆ ಸುರಕ್ಷಿತ ಅಲ್ಲವೇ.?
ಬೆಂಗಳೂರು: ಬೆಂಗಳೂರಿನ ಮೆಟ್ರೋ ರೈಲಿನಲ್ಲಿ ಕಾಲೇಜು ವಿದ್ಯಾರ್ಥಿನಿಗೆ ಕಿರುಕುಳ ನೀಡಲಾಗಿದೆ. ನಗರದ ಎಂ.ಜಿ. ರಸ್ತೆಯ ಮೆಟ್ರೋ ನಿಲ್ದಾಣದಿಂದ ವಿಜಯನಗರ ಮೆಟ್ರೋ ಸ್ಟೇಷನ್ ವರೆಗೆ ಯುವತಿಗೆ ಪುಂಡ ಯುವಕರ ಗುಂಪಿನಿಂದ ಕಿರುಕುಳ ನೀಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇದರಿಂದ ನಮ್ಮ ಮೆಟ್ರೋ ಮಹಿಳೆಯರಿಗೆ ಸುರಕ್ಷಿತ ಅಲ್ಲವೇ...? ಎಂಬ ಅನುಮಾನ ಮೂಡಿದೆ.
ಎಂ.ಜಿ. ರಸ್ತೆಯ ನಿಲ್ದಾಣದಲ್ಲಿ ಮೆಟ್ರೋ ಹತ್ತಿದ್ದ ಕಾಲೇಜು ವಿದ್ಯಾರ್ಥಿನಿಗೆ ಯುವಕರ ಗುಂಪೊಂದು ಆಕೆಯನ್ನು ರೇಗಿಸುತ್ತಾ, ಅಸಭ್ಯವಾಗಿ ಮಾತಾಡಿ ಫಾಲೋ ಮಾಡಿದ ಘಟನೆ ಕಳೆದ ಮಂಗಳವಾರ ರಾತ್ರಿ ಸುಮಾರು 8 ಗಂಟೆಗೆ ನಡೆದಿದೆ.
ಪೋಲಿ ಯುವಕರ ಕಾಟದಿಂದ ಹೆದರಿದ್ದ ಯುವತಿ ಪ್ರಯಾಣ ಮುಗಿದ ಮೇಲೆ ಮೆಟ್ರೋ ಸೆಕ್ಯುರಿಟಿ ಮಹಿಳಾ ಸಿಬ್ಬಂದಿಗೆ ಮಾಹಿತಿ ನೀಡಿದ್ದಾಳೆ. ಬಳಿಕ ಹೊಯ್ಸಳ ಜೀಪ್ ಕರೆಸಿ ವಿಜಯನಗರ ಪೊಲೀಸ್ ಠಾಣೆಗೆ ಕರೆದೋಯ್ದ ವಿಜಯನಗರ ಪೊಲೀಸರು ಘಟನೆ ಬಗ್ಗೆ ಮಾಹಿತಿ ಪಡೆದಿದ್ದಾರೆ. ಆದರೆ, ದೂರು ನೀಡಲು ಯುವತಿ ನಿರಾಕರಿಸಿದ್ದು, ಬಳಿಕ ವಿಜಯನಗರ ಪೊಲೀಸರು ಘಟನೆ ಬಗ್ಗೆ ಮೆಟ್ರೋ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ ಎಂದು ತಿಳಿದುಬಂದಿದೆ.