ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರಕಾರ ರೈತರಿಗೆ ಬರ ಪರಿಹಾರ ನೀಡುವಲ್ಲಿ ಮೀನಾಮೇಷ ಎಣಿಸುತ್ತಿದೆ. ಆದರೆ ʼರಾಜಕೀಯ ಗಂಜಿ ಕೇಂದ್ರʼಗಳನ್ನು ಯಥೇಚ್ಚವಾಗಿ ಸೃಷ್ಟಿ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ರಾಜ್ಯ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.ಬರದ ನಡುವೆಯೂ ಮೂವರು ಹಿರಿಯ ಶಾಸಕರಿಗೆ ಸಂಪುಟ ದರ್ಜೆ ಭಾಗ್ಯ ಕರುಣಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕ್ರಮವನ್ನು ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು; ಈ ಸರಕಾರ ರೈತರನ್ನು ಬಹಳ ಕೇವಲವಾಗಿ ನಡೆಸಿಕೊಳ್ಳುತ್ತಿದೆ. ಆದರೆ, ಅಧಿಕಾರನ್ನು ಭರ್ಜರಿಯಾಗಿ ಅನುಭವಿಸುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.ಸಲಹೆಗಾರರನ್ನು ನೇಮಕ ಮಾಡಿಕೊಂಡಿರುವ ಸಿಎಂಗೆ ಹ್ಯಾಟ್ಸಾಫ್ ಎಂದ ಹೆಚ್ಡಿಕೆ ಅವರು; ಸಿಎಂ ಅವರು ಬಿ.ಆರ್.ಪಾಟೀಲ್ ಅವರನ್ನು ಸಲಹೆಗಾರರನ್ನಾಗಿ ನೆಮಕ ಮಾಡಿಕೊಂಡಿದ್ದಾರೆ. ಬಸವರಾಜ ರಾಯರೆಡ್ಡಿ ಅವರಿಗೆ ಆರ್ಥಿಕ ಸಲಹೆಗಾರರು ಎಂದು ಮಾಡಿ ಸಂಪುಟ ದರ್ಜೆ ನೀಡಿದ್ದಾರೆ. ಹಾಗೆಯೇ, ರಾಜ್ಯದ 3ನೇ ಆಡಳಿತ ಸುಧಾರಣಾ ಆಯೋಗಕ್ಕೆ ಆರ್.ವಿ.ದೇಶಪಾಂಡೆ ಅವರಿಗೆ ಅವಕಾಶ ನೀಡಿ ಅವರಿಗೂ ಸಂಪುಟ ದರ್ಜೆ ಕೊಟ್ಟಿದ್ದಾರೆ ಎಂದು ಕಿಡಿಕಾರಿದರು.


ಇದನ್ನೂ ಓದಿ- Viral Video: ರೀಲ್ಸ್‌ಗಾಗಿ ಸಂಚಾರ ದಟ್ಟಣೆಯ ರಸ್ತೆಯಲ್ಲಿ ಯುವತಿಯ ಹುಚ್ಚಾಟ!


ಆತನ್ಯಾರೋ ಚುನಾವಣೆ ಮತ್ತು ಗ್ಯಾರಂಟಿ ತಂತ್ರಗಾರಿಕೆ ಮಾಡಿದ ಎಂದು ಆತನಿಗೂ ಸಲಹೆಗಾರ ಹುದ್ದೆ ಕೊಟ್ಟು ಸಂಪುಟ ದರ್ಜೆ ಕರುಣಿಸಿದ್ದಾರೆ. ಇನ್ನೊಬ್ಬರನ್ನು ಮಾಧ್ಯಮ ಸಲಹೆಗಾರ ಅಂತ ಮಾಡಿಕೊಂಡು ಅವರಿಗೂ ಸಂಪುಟ ದರ್ಜೆ ನೀಡಿದ್ದಾರೆ. ಹೀಗೆ ಸುತ್ತಲೂ ಸಲಹೆಗಾರರು, ಕಾರ್ಯದರ್ಶಿಗಳನ್ನು ಇಟ್ಟುಕೊಟಂಡು ಜನರ ತೆರಿಗೆ ದುಡ್ಡಿನಲ್ಲಿ ಗೂಟದ ಕಾರು, ಸರಕಾರಿ ಕಚೇರಿ, ಸಿಬ್ಬಂದಿ ನೀಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿಗಳು ಕಿಡಿಕಾರಿದರು. 


ದಾಖಲೆ 14 ಬಜೆಟ್‌ ಮಂಡಿಸಿದವರಿಗೆ ಸಲಹೆಗಾರರಾ!?


ನಾಡು ಕೊಳ್ಳೆ ಹೋಗುತ್ತಿದ್ದರೂ ಈ ಸರಕಾರದಲ್ಲಿ ಅಧಿಕಾರ ಲಾಲಸೆಗೇನೂ ಕೊರತೆ ಇಲ್ಲ. 14 ಬಜೆಟ್ʼಗಳನ್ನು ಮಂಡಿಸಿ ದಾಖಲೆ ಮಾಡಿದವರು ತಮಗೆ ಆರ್ಥಿಕ ಸಲಹೆಗಾರರನ್ನು ನೇಮಕ ಮಾಡಿಕೊಂಡಿದ್ದಾರೆ ಎಂದು ಶಾಸಕ ಬಸವರಾಜ ರಾಯರೆಡ್ಡಿ ಅವರನ್ನು ಸಿಎಂ ಆರ್ಥಿಕ ಸಲಹೆಗಾರರನ್ನಾಗಿ ನೇಮಕ ಮಾಡಿರುವ ಕ್ರಮವನ್ನು ಕಠಿಣ ಶಬ್ದಗಳಲ್ಲಿ ಟೀಕಿಸಿದರು ಕುಮಾರಸ್ವಾಮಿ ಅವರು.


ಅವರೇ ವಿಶ್ವ ವಿಖ್ಯಾತ ಆರ್ಥಿಕ ತಜ್ಞರು. ಹಣಕಾಸು ಸಚಿವರಾಗಿ ಅನೇಕ ಸಿಎಂಗಳ ಜತೆ ಕೆಲಸ ಮಾಡಿದವರು. ಡಿಸಿಎಂ, ಸಿಎಂ ಹಾಗೂ ಪ್ರತಿಪಕ್ಷ ನಾಯಕರಾಗಿದ್ದವರು. ಅವರು ಆರ್ಥಿಕ ಸಲಹೆಗಾರರನ್ನು ನೇಮಕ ಮಾಡಿಕೊಂಡಿದ್ದಾರೆ ಎಂದರೆ ಅಚ್ಚರಿ ಆಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಟಾಂಗ್ ನೀಡಿದರು.


ಇನ್ನು, ಆರ್.ವಿ.ದೇಶಪಾಂಡೆ ಅವರು 25 ವರ್ಷಗಳ ಕಾಲ ಮಂತ್ರಿ ಆಗಿದ್ದವರು. ವಿವಿಧ ಸಿಎಂಗಳ ಜತೆ ಹತ್ತಾರು ಇಲಾಖೆಗಳಲ್ಲಿ ಕೆಲಸ ಮಾಡಿದ್ದವರು. ಬಹಳ ಹಿರಿಯರು. ಈಗ ಅವರನ್ನು ಮೂರನೇ ಆಡಳತ ಸುಧಾರಣಾ ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು. 


ಹಿಂದೆ ಹಾರನಹಳ್ಳಿ ರಾಮಸ್ವಾಮಿ, ನಿವೃತ್ತ ಐಎಎಸ್ ಅಧಿಕಾರಿ ವಿಜಯಭಾಸ್ಕರ್ ಅವರುಗಳು ಇದೇ ಆಯೋಗದ ಅಧ್ಯಕ್ಷರಾಗಿ ಕೆಲಸ ಮಾಡಿ ಆಡಳಿತ ಸುಧಾರಣೆಗೆ ತಲಾ ಒಂದೊಂದು ವರದಿ ನೀಡಿದ್ದಾರೆ. ಆ ವರದಿಗಳು ಏನಾಗಿವೆ? ಆ ವರದಿಗಳ ಸಲಹೆಗಳನ್ನ ಸ್ವೀಕಾರ ಮಾಡಿ ಎಷ್ಟು ಆಡಳಿತ ಸುಧಾರಣೆ ಮಾಡಿದ್ದೀರಾ? ಎಂಬುದನ್ನು ಜನರಿಗೆ ತಿಳಿಸಲಿ ಎಂದು ಮಾಜಿ ಮುಖ್ಯಮಂತ್ರಿಗಳು ಒತ್ತಾಯ ಮಾಡಿದರು.


ವಿಧಾನಸೌಧದಲ್ಲಿ ವರ್ಗಾವಣೆ ದಂಧೆ ಮಾಡಿಕೊಂಡು ಏನು ಆಡಳಿತ ಸುಧಾರಣೆ ಮಾಡುತ್ತಾರೆ ಇವರು? ಮೇಯುವುದಕ್ಕೆ ಎಲ್ಲರಿಗೂ ಮುಕ್ತ ಅವಕಾಶ ಕೊಟ್ಟಿದ್ದಾರೆ. ಬಿ.ಆರ್‌‌.ಪಾಟೀಲ್ ಅವರನ್ನು ಸಿಎಂ ತಮ್ಮ ಸಲಹೆಗಾರರನ್ನಾಗಿ ನೇಮಕ ಮಾಡಿಕೊಂಡಿದ್ದಾರೆ. ಸಿಎಂಗಿಂತ ಸಲಹೆಗಾರ ಬೇಕಾ? ಅಹಿಂದ ಐಕಾನ್ ಅವರು. ಖರ್ಗೆಯರನ್ನೇ ದೆಹಲಿಗೆ ಎತ್ತಿಹಾಕಿದ ರಾಜಕೀಯ ಅನುಭವ ಅವರದ್ದು. ಅಂಥವರಿಗಿಂತ ಹೆಚ್ಚು ಅನುಭವ ಬಿ.ಆರ್.ಪಾಟೀಲ್ ಅವರಿಗೆ ಇದೆಯಾ? ಎಂದು ಲೇವಡಿ ಮಾಡಿದರು. 


2009ರ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಎಲ್ಲಾ ಕ್ಷೇತ್ರಗಳಲ್ಲಿಯೂ ಸೋತಿತ್ತು. ಅಂತಹ ಹೀನಾಯ ಸೋಲಿಗೆ ಕಾರಣರಾದ ನಾಯಕನಿಗೆ ಸಲಹೆಗಾರರ ಅಗತ್ಯ ಇದೆಯಾ? ದೇವರಾಜು ಅರಸು ನಂತರ ಎರಡು ಬಾರಿ ಸಿಎಂ, ವಿರೋಧ ಪಕ್ಷದ ನಾಯಕರಾಗಿ, ಡಿಸಿಎಂ ಆಗಿ ಅನುಭವ ಪಡೆದಿರುವ ಸಿದ್ದರಾಮಯ್ಯ ಅವರೇ ಬಿ.ಆರ್.ಪಾಟೀಲ್ ಅವರರಿಂದ ಪಡೆಯುವ ಸಲಹೆಯಾದರೂ ಇರುತ್ತದಾ? ಇದೆಂಥಾ ವಿಪರ್ಯಾಸ? ಎಂದು ಅವರು ತೀಕ್ಷ್ಣವಾಗಿ ಪ್ರಶ್ನಿಸಿದರು.


ಇದನ್ನೂ ಓದಿ- Baba Vanga: 2024ರಲ್ಲಿ ಇಡೀ ಜಗತ್ತಿಗೆ ಎದುರಾಗಲಿದೆ ದೊಡ್ಡ ಸಂಕಷ್ಟ! ಬಾಬಾ ವಂಗಾ ಭವಿಷ್ಯವೇನು?


2 ಸಾವಿರ ರೂಪಾಯಿ ಪರಿಹಾರ ಕೊಡಲು ಮೀನಾಮೇಷ


ಈ ಸರಕಾರ ಏನು ಮಾಡುತ್ತಿದೆ? ಕೆಲ ಸಚಿವರು ರೈತರ ಬಗ್ಗೆ ಏನೆಲ್ಲಾ ಮಾತನಾಡುತ್ತಿದ್ದಾರೆ ಎನ್ನುವುದು ನನಗೆ ಗೊತ್ತಿದೆ. ಅನ್ನ ಬೆಳೆದುಕೊಡುವ ರೈತರ ಬಗ್ಗೆ ಇಷ್ಟು ನಿರ್ದಯವಾಗಿ ಸರಕಾರ ವರ್ತಿಸಬಾರದು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.


ಫ್ರೂಟ್ ತಂತ್ರಾಂಶದ ಮೂಲಕ ರೈತರಿಗೆ 2 ಸಾವಿರ ರೂಪಾಯಿ ಪರಿಹಾರ ಕೊಡುತ್ತೇವೆ ಎಂದು ಸರ್ಕಾರ ಹೇಳಿತ್ತು. ಅದರೆ ಇಲ್ಲಿಯವರೆಗೆ ರೈತರಿಗೆ ಬಿಡಿಗಾಸನ್ನೂ ಕೊಟ್ಟಿಲ್ಲ. ಇದು ಸರ್ಕಾರದ ಏಳು ತಿಂಗಳ ಸಾಧನೆ. ನುಡಿದಂತೆ ನಡೆಯುತ್ತೇವೆ ಎಂದು ಬಡಾಯಿ ಕೊಚ್ಚಿಕೊಂಡವರು ಇವರು. ನುಡಿದಂತೆ ನಡೆಯುವುದು ಎಂದರೆ ಹೀಗೆನಾ ಎಂದು ಅವರು ಸರಕಾರದ ಮೇಲೆ ತೀವ್ರ ಪ್ರಹಾರ ನಡೆಸಿದರು.


ಕೆಲ ದಿನಗಳ ಹಿಂದೆ ಹೋಗಿ ಪ್ರಧಾನಿಗಳು ಸೇರಿದಂತೆ ಕೇಂದ್ರದ ವಿವಿಧ ನಾಯಕರನ್ನು ಸಿಎಂ, ಡಿಸಿಎಂ ಮತ್ತು ಸಚಿವರು ಭೇಟಿ ಮಾಡಿದ್ದರು. ಕೇಂದ್ರವೂ ಕೂಡ ವರದಿಯನ್ನು ಸಿದ್ಧ ಮಾಡಿಕೊಂಡಿದೆ. NDRF ಅಡಿ ಹಣ ಶೀಘ್ರವೇ ಬಿಡುಗಡೆ ಆಗಬಹುದು. ಆದರೆ, ರಾಜ್ಯದಲ್ಲಿಯೂ ಸರಕಾರ ಎನ್ನುವುದು ಇದೆಯಲ್ಲ. ಕೇಂದ್ರದಿಂದ ಹಣ ಬರುವುದರೊಳಗೆ ರೈತರಿಗೆ ತಾನೇ ಹೇಳಿದಂತೆ 2 ಸಾವಿರ ರೂಪಾಯಿ ಕೊಡಬಹುದಿತ್ತು. ಯಾಕೆ ಈ ಹಣವನ್ನು ಕೊಡಲಿಲ್ಲ? ಎಂದು ಕುಮಾರಸ್ವಾಮಿ ಅವರು ಖಾರವಾಗಿ ಪ್ರಶ್ನಿಸಿದರು.


ರೈತರು ಕಷ್ಟದಲ್ಲಿದ್ದರೆ, ಇವರು ಮೂವರು ಡಿಸಿಎಂಗಳ ಗುಂಗಿನಲ್ಲಿ ಇದ್ದಾರೆ!


ರಾಜ್ಯದಲ್ಲಿ ಇಂಥ ಭೀಕರ ಬರದ ಪರಿಸ್ಥಿತಿ ಇದ್ದರೂ ಇವರ ಮೋಜು ಮಸ್ತಿ ಏನು ಕಡಿಮೆ ಆಗಿಲ್ಲ. ಈಗಾಗಲೇ ರೈತರ ಆತ್ಮಹತ್ಯೆಗಳು ಆರಂಭವಾಗಿದೆ. ಬೆಳೆ ಉಳಿಸಿಕೊಳ್ಳಲು ನಾರಾಯಣಪುರ ಡ್ಯಾಮ್ ಬಳಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಈ ಸರಕಾರಕ್ಕೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ರಾಜಕೀಯದ ಚಿಂತೆ. ಇವರು ಮೂವರು ಡಿಸಿಎಂಗಳನ್ನು ಮಾಡುವ ಗುಂಗಿನಲ್ಲಿ ಇದ್ದಾರೆ ಎಂದು ಕುಮಾರಸ್ವಾಮಿ ತರಾಟೆಗೆ ತೆಗೆದುಕೊಂಡರು.


ಮಾಧ್ಯಮಗೋಷ್ಠಿಯಲ್ಲಿ ಜೆಡಿಎಸ್‌ ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್‌ ಗೌಡ, ವಿಧಾನ ಪರಿಷತ್‌ ಮಾಜಿ ಸದಸ್ಯ ಚೌಡರೆಡ್ಡಿ ತೂಪಲ್ಲಿ, ಹಿರಿಯ ಮುಖಂಡ ಕೆ.ಟಿ.ಶಾಂತಕುಮಾರ್‌ ಉಪಸ್ಥಿರಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.