ಬೆಳಗಾವಿ: ಬಾಣಂತಿಯರ ಸಾವಿನ ವಿಚಾರವನ್ನ ಮುಂದಿಟ್ಟುಕೊಂಡು ಬಿಜೆಪಿ ಶಾಸಕ ಅಶ್ವತ್ ನಾರಾಯಣ್ ಆರೋಗ್ಯ ಇಲಾಖೆಯ ಬಗ್ಗೆ ಸುಳ್ಳುಗಳನ್ನ ಸದನದಲ್ಲಿ ಹೇಳುವುದು ಸರಿಯಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಬೆಳಗಾವಿಯ ಸುವರ್ಣ ಸೌಧದಲ್ಲಿ ಇಂದು ವಿಧಾನ ಸಭೆ ಕಲಾಪದಲ್ಲಿ ಬಾಣಂತಿಯರ ಸಾವುಗಳ ಕುರಿತು ನೈಜ ವಿಚಾರಗಳನ್ನ ಸದನದ ಮುಂದಿಟ್ಟ ಸಚಿವರು, ಇಲಾಖೆಯ ಕಾರ್ಯಪ್ರಗತಿ ಬಗ್ಗೆ ಸಂಕ್ಷಿಪ್ತವಾಗಿ ಮಾಹಿತಿ ನೀಡಿದರು. ಬಾಣಂತಿಯರ ಸಾವಿನ ಪ್ರಕರಣ ವಿಚಾರದಲ್ಲಿ ನ್ಯಾಯಾಂಗ ತನಿಖೆಗೆ ವಹಿಸಲು ಸಿಎಂ ಜೊತೆ ಮಾತನಾಡುವುದಾಗಿ ಸದನಕ್ಕೆ ಸ್ಪಷ್ಟಪಡಿಸಿದ ಗುಂಡೂರಾವ್ ಈ ವಿಚಾರದಲ್ಲಿ ನಾವು ಯಾವುದನ್ನು ಮುಚ್ಚಿಡುವ ಉದ್ದೇಶ ಹೊಂದಿಲ್ಲ ಎಂದರು. ಅಲ್ಲದೇ ಆರೋಗ್ಯ ಇಲಾಖೆಯ ಬಗ್ಗೆ ಬಿಜೆಪಿ ಶಾಸಕ ಅಶ್ವತ್ ನಾರಾಯಣ್ ಅವರು ಸದನದಲ್ಲಿ ಹೇಳಿದ ಹೇಳಿಕೆಗಳು ಹಸಿ ಸುಳ್ಳು ಎಂದು ತಳ್ಳಿಹಾಕಿದರು.‌


COMMERCIAL BREAK
SCROLL TO CONTINUE READING

ಸದನದಲ್ಲಿ ಅಶ್ವತ್ ನಾರಾಯಣ್ ಅವರು ಪ್ರಸ್ತಾಪಿಸಿದ ವಿಚಾರಗಳಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್  ಉತ್ತರ 


ಅಶ್ವತ್ ನಾರಾಯಣ್ : 108 ಅಂಬ್ಯುಲೆನ್ಸ್ ಗಳಲ್ಲಿ ಜಿ.ಪಿ.ಎಸ್ ವ್ಯವಸ್ಥೆಯಿಲ್ಲ.. 


ದಿನೇಶ್ ಗುಂಡೂರಾವ್ : ಹಿಂದಿನ ಸರ್ಕಾರದ ಅವಧಿಯಲ್ಲಿ 108 ಅಂಬ್ಯುಲೆನ್ಸ್ ಗಳಲ್ಲಿ ಜಿಪಿಎಸ್ ಇರಲಿಲ್ಲ. ನಾವು ಅಧಿಕಾರಕ್ಕೆ ಬಂದ ಬಳಿಕ ಅಂಬ್ಯುಲೆನ್ಸ್ ಗಳಿಗೆ ಜಿ.ಪಿ.ಎಸ್ ತಂತ್ರಜ್ಞಾನ ಅಳವಡಿಸಲಾಗಿದೆ. 


ಅಶ್ವತ್ ನಾರಾತಣ್ : ಆರೋಗ್ಯ ಇಲಾಖೆಯಲ್ಲಿ NHM ಅಡಿಯಲ್ಲಿ ಶೇ 25 ರಷ್ಟು ಅನುದಾನ ಮಾತ್ರ ಖರ್ಚಾಗಿದೆ


ದಿನೇಶ್ ಗುಂಡೂರಾವ್ : 2021- 22 ರಲ್ಲಿ NHM ನಲ್ಲಿ ಶೇ 61 ರಷ್ಟು ಖರ್ಚಾಗಿತ್ತು. 22-23 ರಲ್ಲಿ ಶೇ 73 ರಷ್ಟು ಹಾಗೂ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕಳೆದ ಸಾಲಿನಲ್ಲಿ ಶೇ 84.57 ರಷ್ಟು ಅನುದಾನ ಖರ್ಚು ಮಾಡಲಾಗಿದೆ. ಆರೋಗ್ಯ ಇಲಾಖೆಗೆ ಬರುವ ಅನುದಾನದಲ್ಲಿ ಕಳೆದ ಸಾಲಿನಲ್ಲಿ ಶೇ 97.91 ರಷ್ಟು ಪ್ರಗತಿ ಸಾಧಿಸಿದ್ದು, ಪ್ರಸಕ್ತ ಸಾಲಿನಲ್ಲಿ ಶೇ 60 ರಷ್ಟು ಪ್ರಗತಿ ಸಾಧಿಸಲಾಗಿದೆ. 


ಅಶ್ವತ್ ನಾರಾತಣ್ : ಆಸ್ಪತ್ರೆಗಳಿಗೆ ಔಷಧಿಗಳ ಸರಬರಾಜು ಆಗುತ್ತಿಲ್ಲ.


ದಿನೇಶ್ ಗುಂಡೂರಾವ್ : ಹಿಂದನ ಸರ್ಕಾರದ ಅವಧಿಯಲ್ಲಿ ಔಷಧಿ ಸರಬರಾಜು ನಿಗಮದಿಂದ ಆಸ್ಪತ್ರೆಗಳಿಗೆ ಕೇವಲ ಶೇ 35 ರಷ್ಟು ಔಷಧಿಗಳು ಮಾತ್ರ ಆಸ್ಪತ್ರೆಗಳಿಗೆ ಪೂರೈಸಲಾಗಿತ್ತು. ನಾವು ಅಧಿಕಾರಕ್ಕೆ ಬಂದ ಬಳಿಕ KSMCL ನಿಂದ ಶೇ 85 ರಷ್ಟು ಔಷಧಿಗಳನ್ನ ಆಸ್ಪತ್ರೆಗಳಿಗೆ ಪೂರೈಸಲಾಗಿದೆ. 


ಔಷಧಿ ಸರಬರಾಜಿನಲ್ಲಿ ಸಾಕಷ್ಟು ಪ್ರಗತಿಯನ್ನ ನಾವು ಮಾಡಿದ್ದೇವೆ. ಹಿಂದಿನ ಸರ್ಕಾರದಲ್ಲಿ 400 ಔಷಧಿಗಳ ಖರೀದಿಯನ್ನ ಮಾಡಲಾಗಿತ್ತು. ನಾನು ಸಚಿವನಾದ ಬಳಿಕ 718 ಔಷಧಿಗಳನ್ನ ಖರೀಧಿಸಿ ಪೂರೈಸಲಾಗಿದೆ. ಮುಂದಿನ ವರ್ಷಕ್ಕೆ 1126 ಔಷಧಿಗಳನ್ನ ಖರೀಧಿಸಲು ಪಟ್ಟಿಮಾಡಲಾಗಿದೆ. ಶೇ 10 ರಷ್ಟು ಮಾತ್ರ ಆಸ್ಪತ್ರೆಗಳು ARS ಫಂಡ್ ನಲ್ಲಿ ಖರೀಧಿಸುತ್ತಿವೆ. ಈ ಮೊದಲು ಔಷಧಿ ಖರೀಧಿ ವಿಳಂಭವಾಗುತ್ತಿತ್ತು. ನಾವು ಅಧಿಕಾರಕ್ಕೆ ಬಂದ ಬಳಿಕ ಎರಡು ವರ್ಷಕ್ಕೆ ಔಷಧಿಗಳ ಖರೀಧಿ ಟೆಂಡರ್ ಪ್ರಕ್ರಿಯೇ ನಡೆಸಿದ್ದು, 25-26 ಕ್ಕೆ ಬೇಕಾದ ಔಷಧಿಗಳಿಗೂ ಈಗಲೇ ಟೆಂಡರ್ ಪ್ರಿಕ್ರೀಯೆ ಪೂರ್ಣಗೊಳಿಸಲಾಗಿದೆ. 


ಅಶ್ವತ್ ನಾರಾಯಣ್ : ಆರೋಗ್ಯ ಇಲಾಖೆಯಲ್ಲಿ ಕಾಯ್ದೆ ಪ್ರಕಾರ ವರ್ಗಾವಣೆ ಆಗುತ್ತಿಲ್ಲ.‌


ದಿನೇಶ್ ಗುಂಡೂರಾವ್ : ಆರೋಗ್ಯ ಇಲಾಖೆಯಲ್ಲಿ ಈ ಹಿಂದೆ ಖಾದರ್ ಸಚಿವರಾಗಿದ್ದಾಗ ಕೌನ್ಸಿಲಿಂಗ್ ನಡೆದಿತ್ತು. ಆ ಬಳಿಕ ಬಿಜೆಪಿ ಸರ್ಕಾರದ ಅವಧಿ ಸೇರಿದಂತೆ ಕಳೆದ 8 ವರ್ಷಗಳಿಂದ ಕೌನ್ಸಿಲಿಂಗ್ ನಡೆದೇ ಇಲ್ಲ. ರಾಜಕೀಯ ಒತ್ತಡಗಳ ಮೇಲೆಯೇ ವರ್ಗಾವಣೆಗಳು ನಡೆಯುತ್ತಿದ್ದವು. ಇದೀಗ ನಾನು ಆರೋಗ್ಯ ಸಚಿವನಾದ ಬಳಿಕ ಪೂರ್ಣ ಪ್ರಮಾಣದಲ್ಲಿ ಕೌನ್ಸಿಲಿಂಗ್ ವರ್ಗಾವಣೆಗೆ ಆದೇಶಿಸಿದ್ದೇನೆ.. ಕೌನ್ಸಿಲಿಂಗ್ ವಿರುದ್ಧ ಕೆಲವರು ಕೋರ್ಟ್ ಮೆಟ್ಟಿಲೇರಿದ್ದಾರೆ. ಸಾಕಷ್ಟು ಒತ್ತಡಗಳಿದ್ದರೂ ಕೌನ್ಸಿಲಿಂಗ್ ಮೂಲಕವೇ ವೈದ್ಯರ ವರ್ಗಾವಣೆ ನಡೆಸಬೇಕು ಎಂಬ ಗಟ್ಟಿ ನಿಲುವನ್ನ ನಾವು ತಳೆದಿದ್ದೇವೆ.. 


ಅಶ್ವತ್ ನಾರಾಯಣ್ : ಆರೋಗ್ಯ ಇಲಾಖೆಯಲ್ಲಿ DPC ಆಗಿಲ್ಲ.. 


ದಿನೇಶ್ ಗುಂಡೂರಾವ್ : ಆರೋಗ್ಯ ಇಲಾಖೆಯಲ್ಲಿ ಕಳೆದ 12 ವರ್ಷಗಳಿಂದ ಗ್ರೇಡಿಯೇಷನ್ ಲಿಸ್ಟ್ ಆಗಿಲ್ಲ. ನಾವು ಅಧಿಕಾರಕ್ಕೆ ಬಂದ ಬಳಿಕ DPC ಪ್ರಕ್ರೀಯೆ ನಡೆಸಿದ್ದೇವೆ. ಇಲಾಖೆಯಲ್ಲಿ ವೈದ್ಯರು ನೇಮಕಾತಿಯಾದ ಮಾಹಿತಿಯೇ ಸರಿಯಾಗಿಲ್ಲ. ಅದೆಲ್ಲವನ್ನ ಪತ್ತೆ ಹಚ್ಚಿ ಗ್ರೇಡಿಯೇಷನ್ ಲಿಸ್ಟ್ ಮಾಡಲಾಗಿದ್ದು, ಕೊನೆಯ ಹಂತದಲ್ಲಿದೆ. 


ಅಶ್ವತ್ ನಾರಾಯ್ :ಬ್ರೇನ್ ಗೆಲ್ತ್ ಕ್ಲಿನಿಕ್ ಗಳಲ್ಲಿ neurologist ವೈದ್ಯರಿಲ್ಲ..


ದಿನೇಶ್ ಗುಂಡೂರಾವ್ : ಬ್ರೇನ್ ಹೆಲ್ತ್ ಕ್ಲಿನಿಕ್ ಗಳನ್ನ ನಮ್ಮ ಸರ್ಕಾರ ಬಂದ ಬಳಿಕ ದೇಶದಲ್ಲಿಯೇ ಮೊದಲ ಬಾರಿಗೆ ನಮ್ಮ ರಾಜ್ಯದಲ್ಲಿ ತೆರೆಯಲಾಗಿದೆ. ನಿಮ್ಹಾನ್ಸ್ ಸಹಯೋಗದೊಂದೊಗೆ ನಾವು ಆರಂಭಿಸಿದ ಬ್ರೇನ್ ಹೆಲ್ತ್ ಕ್ಲಿನಿಕ್ ಗಳಿಗೆ ಸ್ವತಃ ಕೇಂದ್ರದ ನೀತಿ ಆಯೋಗ ಶ್ಲಾಘಿಸಿದ್ದು, ಕರ್ನಾಟಕದ ಈ ಮಾದರಿಯನ್ನ ದೇಶಾದ್ಯಂತ ಜಾರಿಗೆ ತರಬೇಕು ಎಂದಿದೆ. 8 ಜಿಲ್ಲೆಗಳಲ್ಲಿ ಪಾರ್ಟ್ ಟೈಮ್ neurologist ಗಳನ್ನ ನೇಮಕ ಮಾಡಲಾಗಿದ್ದು, 8 ಜಿಲ್ಲೆಗಳಲ್ಲಿ MD physician ವೈದ್ಯರಿದ್ದಾರೆ. ಅಲ್ಲದೇ ಎಲ್ಲಡೆ ಫಿಜಿಯೋ ಥೆರಪಿಸ್ಟ್ ಗಳು ಸೇವೆ ಒದಗಿಸುತ್ತಿದ್ದಾರೆ. 


ಅಶ್ವತ್ ನಾರಾಯಣ್ : ಆಸ್ಪತ್ರೆಗಳಲ್ಲಿ ಸೇವಾ ಶುಲ್ಕ್ ಹೆಚ್ಚಿಸಲಾಗಿದೆ. 


ದಿನೇಶ್ ಗುಂಡೂರಾವ್ : ರಾಜ್ಯದ ಯಾವುದೇ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು, ತಾಲೂಕು ಆಸ್ಪತ್ರೆ ಹಾಗೂ ಜಿಲ್ಲಾಸ್ಪತ್ರೆಗಳಲ್ಲಿ ಸೇವಾ ಶುಲ್ಕ ಹೆಚ್ಚಿಸಿಲ್ಲ.. ಕೆ.ಸಿ ಜನರಲ್ ಆಸ್ಪತ್ರೆ ಒಂದರಲ್ಲಿ ಮಾತ್ರ ಪ್ರಾಯೋಗಿಕವಾಗಿ ಸೇವಾ ಶುಲ್ಕ ಹೆಚ್ಚಿಸಲು ಅನುಮತಿ ನೀಡಲಾಗಿದೆ. ಅದು ಬಿಟ್ಟರೆ ಆರೋಗ್ಯ ಇಲಾಖೆಯ ಯಾವ ಆಸ್ಪತ್ರೆಗಳಲ್ಲೂ ಸೇವಾ ಶುಲ್ಕ ಹೆಚ್ಚಳ ಮಾಡಿಲ್ಲ. 


ಅಶ್ವತ್ ನಾರಾಯಣ್ ಅವರು ಮಾಜಿ ಡಿಸಿಎಂ ಆಗಿದ್ದವರು.  ಸತ್ಯಾಂಶಗಳನ್ನ ತಿಳಿದು ಮಾತನಾಡಬೇಕು. ಸದನದಲ್ಲಿ ಮನಬಂದಂತೆ ಸುಳ್ಳುಗಳನ್ನ ಹೇಳಿ ಜನರಿಗೆ ತಪ್ಪು ಸಂದೇಶ ನೀಡಬಾರದು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಇಲಾಖೆ ಇದ್ದ ಪರಿಸ್ಥಿತಿಗೆ ಹೊಲಿಸಿದರೆ ನಾವು ಅಧಿಕಾರಕ್ಕೆ ಬಂದ ಬಳಿಕ ಇಲಾಖೆಯಲ್ಲಿ ಸಾಕಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.


ಬಾಣಂತಿಯರ ಸಾವಿನ ವಿಚಾರದಲ್ಲಿ ನೋವಿದೆ. ಕಳೆಪೆ ಐವಿ ದ್ರಾವಣದಿಂದ ಆಗಿದ್ದರೂ, ಆರೋಗ್ಯ ಸಚಿವನಾಗಿ ನಾನು ಜವಾಬ್ದಾರಿಯಿಂದ ನುಣಿಚಿಕೊಳ್ಳಲು ಸಾಧ್ಯವಿಲ್ಲ. ಫಾರ್ಮಾ ಕಂಪನಿಗಳ ಲಾಬಿ ಇಂದು ದೇಶಾದ್ಯಂತ ಇದೆ. ಅವರಿಗೆ ಕಡಿವಾಣ ಹಾಕಲು ನಮ್ಮ ಕೇಂದ್ರ ಸರ್ಕಾರದ ಮಟ್ಟದಲ್ಲಿ ಕಠಿಣ ಕಾಯ್ದೆಗಳ ಅಗತ್ಯವಿದೆ. ಈ ರೀತಿಯ ಗುಣಮಟ್ಟ ಇಲ್ಲದ ಔಷಧಿಗಳ ಪೂರೈಸಿದ ಕಂಪನಿ ಮಾಲೀಕರ ವಿರುದ್ಧ ನ್ಯಾಯಾಲಯದಲ್ಲಿ ಹೆಚ್ಚೆಂದರೆ ನ್ಯಾಯಾಧೀಶರು ತಮ್ಮ ಕುರ್ಚಿಯಿಂದ ಎದ್ದು ಹೋಗುವ ವರೆಗೆ ಮಾತ್ರ ಶಿಕ್ಷೆ ವಿಧಿಸಲಾಗುತ್ತೆ. ಅಂದರೆ ಒಂದು ದಿನ ಮಾತ್ರ ಜೈಲು ಶಿಕ್ಷೆಯಿದೆ. ಯಾರಿಗೂ ಭಯವಿಲ್ಲದಂತಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು. 


ಐವಿ ರಿಂಗರ್ ಲ್ಯಾಕ್ಟೇಟ್ ಅನ್ನ ಪೂರೈಸಿದ್ದ ಪಶ್ಚಿಮ ಬಂಗಾ ಕಂಪನಿಯನ್ನ ದೇಶದ ಯಾವ ರಾಜ್ಯದಲ್ಲೂ ಬ್ಲಾಕ್ ಲಿಸ್ಟ್ ಗೆ ಸೇರಿಸಿರಲಿಲ್ಲ. ನಾವೇ ಮೊದಲು ಬ್ಲಾಕ್ ಲಿಸ್ಟ್ ಗೆ ಸೇರಿಸಿದ್ವಿ. ಏಪ್ರಿಲ್ ತಿಂಗಳಲ್ಲಿ ಚಿತ್ರದುರ್ಗದಲ್ಲಿ ಐವಿ ದ್ರಾವಣ ಬಳಕೆ ಮಾಡಿದಾಗ ರೋಗಿಗಳಿಗೆ ಚಳಿಯಾಗುತ್ತಿದೆ ಎಂಬ ವರದಿ ಇತ್ತು. ತಕ್ಷಣವೇ ಈ ಬಗ್ಗೆ ಟೆಸ್ಟಿಂಗ್ ನಡೆಸಿದಾಗ ರಾಜ್ಯದ ಡ್ರಗ್ ಕಂಟ್ರೋಲರ್ ಎರಡು ಬ್ಯಾಚ್ ಗಳ ಬಗ್ಗೆ NSQ ವರದಿ ನೀಡಿದರು. ಎರಡು ಬ್ಯಾಚ್ ಗಳು ಗುಣಮಟ್ಟ ಹೊಂದಿಲ್ಲ ಎಂದ ತಕ್ಷಣ ಕಂಪನಿ ಪೂರೈಸಿದ್ದ 192 ಬ್ಯಾಚ್ ಗಳನ್ನ ತಡೆಹಿಡಿದು, ಕಂಪನಿಯನ್ನ ಬ್ಲಾಕ್ ಲಿಸ್ಟ್ ಗೆ ಸೇರಿಸಲಾಗಿತ್ತು. ಅಲ್ಲದೇ ಕಂಪನಿಯವರಿಗೆ ಒಂದು ರೂಪಾಯಿ ಕೂಡಾ ಹಣ ಪಾವತಿ ಮಾಡಿರಲಿಲ್ಲ. ಆದರೆ ಕಂಪನಿಯವರು ಸೆಂಟ್ರಲ್ ಡ್ರಗ್ ಲ್ಯಾಬ್ ಗೆ ಹೋಗಿ ಐವಿ ದ್ರಾವಣ ಗುಣಮಟ್ಟ ಹೊಂದಿದೆ ಎಂದು ವರದಿ ತಂದರು. ಟೆಸ್ಟಿಂಗ್ ವಿಚಾರದಲ್ಲಿ CDL ವರದಿಯೇ ಅಂತಿಮವಾಗಿರುವುದರಿಂದ ನಾವು ಕಂಪನಿಯ ಔಷಧಿಗಳನ್ನ ತಿರಸ್ಕರಿಸಲು ಟೆಂಡರ್ ನಿಯಮದಲ್ಲಿ ಅವಕಾಶವಿಲ್ಲ. ಆದರೂ ಮುಂಜಾಗ್ರತೆ ದೃಷ್ಟಿಯಿಂದ ರಾಜ್ಯದ ಡ್ರಗ್ ಕಂಟ್ರೋಲ್ ಹೇಳಿದೆ ಗುಣಮಟ್ಟ ಹೊಂದಿರದ 22 ಬ್ಯಾಚ್ ಗಳನ್ನ ಆಸ್ಪತ್ರೆಗಳಿಗೆ ಬಿಡುಗಡೆ ಮಾಡಿರಲಿಲ್ಲ. ಯಾವ ಬ್ಯಾಚ್ ಗಳು ಗುಣಮಟ್ಟ ಹೊಂದಿದೆ ಎಂದು ರಾಜ್ಯದ ಡ್ರಗ್ ಕಂಟ್ರೋಲರ್ ವರದಿ ನೀಡಿದ್ದರು ಆ ಬ್ಯಾಚ್ ಗಳನ್ನ ಮಾತ್ರ KSMCL ನಿಗಮ ಆಸ್ಪತ್ರೆಗಳಿಗೆ ಪೂರೈಸಿತ್ತು. ಪೂರೈಕೆಯಾದ ಎರಡು  ತಿಂಗಳ ವರೆಗೆ ರಾಜ್ಯದ ಬೇರೆ ಬೇರೆ ಆಸ್ಪತ್ರೆಗಳಲ್ಲಿ ಬಳಕೆಯಾಗಿದೆ. ಏಲ್ಲಿಂದಲೂ ದೂರುಗಳಿರಲಿಲ್ಲ. ಬಳ್ಳಾರಿಯಲ್ಲಿ 34 ಸಿಸೇರಿಯನ್ ಗಳು ನಡೆದಾಗ 7 ಬಾಣಂತಿಯರಿಗೆ ತೊಂದರೆ ಎದುರಾಯಿತು. ಅದರಲ್ಲಿ ಐವರು ಸಾವನ್ನಪ್ಪಿದ್ದು, 2 ಬಾಣಂತಿಯರು ಚೇತರಿಸಿಕೊಂಡಿದ್ದಾರೆ. 


ಈ ಪ್ರಕರಣ ಬೆಳಕಿಗೆ ಬಂದ ತಕ್ಷಣ ರಾಜೀವ್ ಗಾಂಧಿ ಆರೋಗ್ಯ ವಿ.ವಿ ತಜ್ಞ ವೈದ್ಯರ ತಂಡ ರಚಿಸಿ ವರದಿ ಪಡೆದಿಯಲಾಗಿದೆ. ವರದಿ ಪ್ರಕಾರ ವೈದ್ಯರ ಸೇವೆಯಲ್ಲಿ ಕುಂದುಕೊರತೆಗಳಾಗಿಲ್ಲ. ಆದರೆ ಐವಿ ದ್ರಾವಣ ಒಂದು ಕಾರಣವಾಗಿರಬಹುದು ಎಂದು ತಂಡ ಅನುಮಾನ ವ್ಯಕ್ತಪಡಿಸಿತ್ತು. ತಂಡದ ವರದಿ ಹಿನ್ನೆಲೆಯಲ್ಲಿ ಕಂಪನಿ ಪೈರೈಸಿದ್ದ 192 ಬ್ಯಾಚ್ ಗಳನ್ನ ಐವಿ ದ್ರಾವಣವನ್ನ ತಡೆಹಿಡಿಯಲಾಗಿದ್ದು, ಕಂಪನಿಯ 9 ಬ್ಯಾಚ್ ಗಳ ವಿಚಾರದಲ್ಲಿ ಕಂಪನಿಯ ವಿರುದ್ಧ ಕೇಸ್ ದಾಖಲಿಸಲಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು. 


ಬಳ್ಳಾರಿಯಲ್ಲಿ ಬಾಣಂತಿಯರಿಗೆ ಆದ ಸಮಸ್ಯೆಯ ಕುರಿತು ಕೇಂದ್ರ ಡ್ರಗ್ ಕಂಟ್ರೋಲರ್ ಗೂ ಕೂಡಾ ನಾವು ಪತ್ರ ಬರೆದಿದೆವು. ನಮ್ಮಲ್ಲಿ ಗುಣಮಟ್ಟ ಹೊಂದಿಲ್ಲ ಎಂಬ ವರದಿ ಇದ್ದರೂ, CDL ಗುಣಮಟ್ಟ ಹೊಂದಿದೆ ಎಂದು ವರದಿ ನೀಡಿದೆ.‌ ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲು ಪತ್ರದಲ್ಲಿ ಮನವಿ ಮಾಡಿದ್ದೆವು. ಬಳಿಕ ಕೇಂದ್ರ ಡ್ರಗ್ ಕಂಟ್ರೋಲರ್, ರಾಜ್ಯದ ಡ್ರಗ್ ಕಂಟ್ರೋಲರ್ ಹಾಗೂ ಪಶ್ಚಿಮ ಬಂಗಾಳದ ಡ್ರಗ್ ಕಂಟ್ರೋಲರ್ ಕಂಪನಿಯ ಉತ್ಪಾದನಾ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗುಣಮಟ್ಟದ ವ್ಯವಸ್ಥೆ ಹೊಂದಿಲ್ಲ ಎಂದು ಸ್ಪಷ್ಟವಾದ ಹಿನ್ನೆಲೆಯಲ್ಲಿ ಐವಿ ದ್ರಾವಣ ಉತ್ಪಾದಿಸದಂತೆ ಪಶ್ಚಿಮ ಬಂಗಾ ಕಂಪನಿಗೆ ನಿರ್ಬಂಧ ಹೇರಲಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಸದನಕ್ಕೆ ತಿಳಿಸಿದರು. 


ಫಾರ್ಮಾ ಕಂಪನಿಗಳು ಇಂದು ನಮ್ಮ ದೇಶಕ್ಕೊಂದು ಉತ್ಪಾದನಾ ಘಟಕ ಹಾಗೂ ವಿದೇಶಕ್ಕೆ ಕಳಿಸುವ ಔಷಧಿಗಳಿಗೆ ಪ್ರತ್ಯೇಕ ಉತ್ಪಾದನಾ ಘಟಕಗಗಳನ್ನ ಹಾಕಿಕೊಂಡಿವೆ. ದೇಶಕ್ಕೆ ಒಂದು ರೀತಿ ವಿದೇಶಗಳಿಗೆ ಇನ್ನೊಂದು ರೀತಿಯ ಗುಣಮಟ್ಟದ ಔಷಧಿಗಳನ್ನ ಪೈರೈಸುತ್ತಿವೆ. ಈ ತಾರತಮ್ಯ ಇರಲೇ ಬಾರದು. ಬಾಣಂತಿಯರ ಸಾವನ್ನ ನಾವು ಸಹಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಬಳ್ಳಾರಿಯಲ್ಲಿ ಅಷ್ಟೇ ಅಲ್ಲ. ರಾಜ್ಯದ ಬೇರೆ ಕಡೆಯೂ ಐವಿ ದ್ರಾವಣದಿಂದ ಸಾವುಗಳಾಗಿರಬಹುದು. ಹೀಗಾಗಿ ಪ್ರತಿಯೊಂದು ತಾಯಿ ಮುಗುವಿನ ಸಾವುಗಳನ್ನ ಪರಿಶೀಲಿಸಲು ನಾನು ಸೂಚಿಸಿದ್ದೇನೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.