ಬೆಂಗಳೂರು: ಸ್ಥಳೀಯ ಭಾಷೆಗಳ ಉದ್ಧಾರದ ನೆಪ ಹೇಳುತ್ತಾ ವಾಮಮಾರ್ಗದಲ್ಲಿ ಇಡೀ ದೇಶದ ಮೇಲೆ ಹಿಂದಿ ಹೇರಿಕೆ ಮಾಡುವುದೇ ಕೇಂದ್ರದ ದುರುದ್ದೇಶ ಎನ್ನುವುದು ಸ್ಪಷ್ಟ. ಕನ್ನಡದ ಮೇಲೆ ಈವರೆಗೂ ಕೇಂದ್ರ ಸರಕಾರ ನಡೆಸಿರುವ ದಬ್ಬಾಳಿಕೆಯೇ ಇದಕ್ಕೆ ಸಾಕ್ಷಿ ಎಂದು ಸರಣಿ ಟ್ವೀಟ್ ಗಳ ಮೂಲಕ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. 


COMMERCIAL BREAK
SCROLL TO CONTINUE READING

ದೇಶದ ಮೇಲೆ ಹಿಂದಿ ಹೇರಿಕೆಯ ಬಗ್ಗೆ ಕೇಂದ್ರದ ಗೃಹ ಸಚಿವ ಅಮಿತಾ ಶಾ, ನೇತೃತ್ವದ ಸಮಿತಿ ರಾಷ್ಟ್ರಪತಿಗಳಿಗೆ ಸಲ್ಲಿಸಿರುವ ವರದಿಯಲ್ಲಿ ಮಾಡಲಾಗಿರುವ ಶಿಫಾರಸುಗಳ ಬಗ್ಗೆ ಹಾಗೂ ಐಐಐಟಿ, ಐಐಎಂ, ಏಮ್ಸ್, ಕೇಂದ್ರೀಯ - ನವೋದಯ ವಿದ್ಯಾಲಯಗಳಲ್ಲಿ ಹಿಂದಿ ಅಥವಾ ಸ್ಥಳೀಯ ಭಾಷೆಯಲ್ಲಿ ಬೋಧನೆ ಮಾಡಿ ಎನ್ನುವ ವರದಿ ವಿರುದ್ಧ ಟ್ವೀಟ್ ಮಾಡಿರುವ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಈ ವರದಿಯಲ್ಲೇ ಸ್ಥಳೀಯ ಭಾಷೆಗಳ ಸಂಹಾರಕ್ಕೆ ಅನೇಕ ಆಯುಧಗಳನ್ನು ಒಳಗೊಳಗೇ  ಸನ್ನದ್ಧಗೊಳಿಸಿದೆ. ಹೀಗಾಗಿ ಪ್ರಾದೇಶಿಕ ಭಾಷೆಗಳ ಬಗ್ಗೆ ಬಿಜೆಪಿ ಎಷ್ಟೇ ಬೊಬ್ಬೆ ಹಾಕಿದರೂ ನಂಬುವ ಸ್ಥಿತಿ ಇಲ್ಲ, ಎಂದಿದ್ದಾರೆ.


ಕೇಂದ್ರ ಸರಕಾರ ತನ್ನ ಚಾಳಿ ಮುಂದುವರಿಸಿದೆ. ಇಡೀ ಭಾರತವನ್ನು ಹಿಡೆನ್ ಅಜೆಂಡಾ ಮೂಲಕ ಹಿಡಿದಿಟ್ಟುಕೊಳ್ಳುವ ಕಪಟಯತ್ನ ಮಾಡುತ್ತಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದ ಸಮಿತಿ, ಹಿಂದಿ ಹೇರಿಕೆ ಬಗ್ಗೆ ರಾಷ್ಟ್ರಪತಿಗಳಿಗೆ ಸಲ್ಲಿಸಿರುವ ವರದಿ ಆಘಾತಕಾರಿ ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ವಿನಾಶಕ್ಕೆ ದಾರಿ, ಎಂದು ಟೀಕಿಸಿದ್ದಾರೆ.


ಹಿಂದಿ ಹೇರಿಕೆ, ಭಾಷಾ ತಾರತಮ್ಯಕ್ಕೆ ಇದಕ್ಕಿಂತ ಸಾಕ್ಷಿ ಬೇಕೆ? - ಕೇಂದ್ರ ಸರ್ಕಾರದ ವಿರುದ್ಧ ಹೆಚ್ಡಿಕೆ ಕಿಡಿ


ವರದಿಯಲ್ಲಿರುವ ಅನೇಕ ಶಿಫಾರಸುಗಳು ಭಾರತೀಯ ಒಕ್ಕೂಟ ವ್ಯವಸ್ಥೆಯನ್ನು ಸೀಳಿ, ಛಿದ್ರ ಮಾಡುವಂತಿವೆ:
ಒಂದು ದೇಶ, ಒಂದು ಧರ್ಮ, ಒಂದು ಭಾಷೆ ಎನ್ನುವ ವಿಚ್ಛಿದ್ರಕಾರಿ ನೀತಿಯ ಮೂಲಕ ಒಕ್ಕೂಟ ವ್ಯವಸ್ಥೆಯನ್ನು ನಿರ್ನಾಮ ಮಾಡುವುದೇ ಅಮಿತ್ ಶಾ ಸಮಿತಿಯ ಅಮಿತೋದ್ದೇಶ. ಏಕಭಾಷೆಯ ಅಧಿಪತ್ಯವನ್ನು ಭಾರತ ಒಪ್ಪುವುದಿಲ್ಲ. ಬಹುತ್ವದಲ್ಲಿ ಏಕತೆಯ ಮೂಲಕ ಅಖಂಡವಾಗಿರುವ ಭಾರತವನ್ನು ಒಡೆದು ಆಳುವ ನೀತಿ ರಾಷ್ಟ್ರದ ಒಡಕಿಗೆ ಕಾರಣವೂ ಆಗಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.


ಕೇಂದ್ರ ಸರಕಾರ ಕೂಡಲೇ ಈ ವರದಿಯನ್ನು ಹಿಂಪಡೆದು, ಎಲ್ಲ ಭಾಷೆಗಳನ್ನೂ ಸಮಾನವಾಗಿ ನೋಡುವ ಸಂವಿಧಾನದ ಆಶಯವನ್ನು ಎತ್ತಿ ಹಿಡಿಯಬೇಕು ಎಂದು ಆಗ್ರಹಿಸಿರುವ ಎಚ್.ಡಿ. ಕುಮಾರಸ್ವಾಮಿ, ಹಿಂದಿ ಪ್ರದೇಶಗಳಲ್ಲಿಯೂ ಹಿಂದಿ ಮಾತನಾಡುವವರ ಸಂಖ್ಯೆ ಕಡಿಮೆ ಇದೆ. ಹಿಂದಿಗಿಂತ ಇತರೆ ಭಾಷೆಗಳನ್ನು ಮಾತನಾಡುವ ಜನರೇ ದೇಶದಲ್ಲಿ ಹೆಚ್ಚಿದ್ದಾರೆ. ಸತ್ಯಸ್ಥಿತಿ ಹೀಗಿದ್ದರೂ ಬಿಜೆಪಿ ಹಿಂದಿ ಹೇರಿಕೆ ಮಾಡುತ್ತಿದೆ. ತ್ರಿಭಾಷಾ ಸೂತ್ರಕ್ಕೆ ತಿಲಾಂಜಲಿ ನೀಡುವ ಹುನ್ನಾರ ಇದು.‌ ಆರ್ಯ ಸಂಸ್ಕೃತಿಯ ತುಷ್ಟೀಕರಣವನ್ನು ಸಹಿಸುವ ಪ್ರಶ್ನೆ ಇಲ್ಲ ಎಂದಿದ್ದಾರೆ.


ದಕ್ಷಿಣ ಭಾರತದಲ್ಲಿ ಆಟ ನಡೆಯುವುದಿಲ್ಲ ಎನ್ನುವ ಕಾರಣಕ್ಕೇ ಬಿಜೆಪಿ ಅಡ್ಡದಾರಿಯಲ್ಲಿ ಕರ್ನಾಟಕದಲ್ಲಿ ಅಧಿಕಾರ ಹಿಡಿಯಿತು. ಅದರ ಪರಿಣಾಮ ಹೆಜ್ಜೆಹೆಜ್ಜೆಗೂ ಕನ್ನಡಕ್ಕೆ ಕಂಟಕ ಎದುರಾಯಿತು. ಈಗ ಕನ್ನಡ ಸೇರಿ ತೆಲುಗು, ತಮಿಳು, ಮಲೆಯಾಳಂ, ಮರಾಠಿ, ಒರಿಯಾ ಸೇರಿ ಎಲ್ಲ ಅನ್ಯಭಾಷೆಗಳ ಅವಸಾನಕ್ಕೆ ಕೇಂದ್ರ ಸರಕಾರ ಮಹೂರ್ತ ಇಟ್ಟಿದೆ. ಯಾವುದೇ ಕಾರಣಕ್ಕೂ ಈ ವರದಿಯ ಶಿಫಾರಸುಗಳ ಜಾರಿಗೆ ಅವಕಾಶ ನೀಡಬಾರದು. ಎಲ್ಲ ರಾಜ್ಯಗಳೂ, ಅದರಲ್ಲೂ ದಕ್ಷಿಣದ ರಾಜ್ಯಗಳು ಒಗ್ಗಟ್ಟಾಗಿ ವಿರೋಧಿಸಬೇಕು. ಎಲ್ಲ ಭಾಷೆಗಳಲ್ಲಿ ಒಂದಷ್ಟೇ ಆಗಿರುವ ಹಿಂದಿ ಭಾಷೆಯ ಹೇರಿಕೆ ಎಂದರೆ, ಒಕ್ಕೂಟ ವ್ಯವಸ್ಥೆಗೆ ಹೆಡೆಮುರಿ ಕಟ್ಟುವ ದುಸ್ಸಾಹಸ ಎಂದೇ ಭಾವಿಸಬೇಕಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.


ಇದನ್ನೂ ಓದಿ- 'ಕುಮಾರಸ್ವಾಮಿ ಮತ್ತೆ ಸಿಎಂ ಆಗುವುದನ್ನು ತಪ್ಪಿಸಲಾಗದು'


ಬಾಯಿಮಾತಿನಲ್ಲಿ ಸ್ಥಳೀಯ ಭಾಷೆಯ ಜಪ ಮಾಡುವ ಬಿಜೆಪಿ, ಆಂತರ್ಯದಲ್ಲಿ ಹಿಂದಿಯನ್ನೇ ಹೇರುತ್ತಿದೆ, ಇದು ಸತ್ಯ. ಕೂಡಲೇ ಕೇಂದ್ರದ  ಸರಕಾರವು ಈ ವರದಿಯನ್ನು ವಾಪಸ್ ಪಡೆಯಬೇಕು. ಸರ್ವ ಭಾಷೆಗಳೂ ಸಮಾನ ಎನ್ನುವ ನೀತಿಗೆ ಬದ್ಧವಾಗಿರಬೇಕು ಎಂದು ಮಾಜಿ ಮುಖ್ಯಮಂತ್ರಿಗಳು ಒತ್ತಾಯಿಸಿದ್ದಾರೆ.


ಬಹುಮತ ಇದೆ ಎನ್ನವ ಕಾರಣಕ್ಕೆ ಹಿಂದಿ ಹೇರಿಕೆ ರಾಜಕೀಯ ಮಾಡಿದರೆ ಭಾರತವು ಭಾಷಾ ದಳ್ಳುರಿಯಲ್ಲಿ ಬೇಯುವುದು ಖಚಿತ. ಭಾರತ ಎಂದರೆ ಹಿಂದು, ಹಿಂದಿ ಅಷ್ಟೇ ಅಲ್ಲ. ಭಾರತ ನಮ್ಮೆಲ್ಲರದು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.