ಕಳೆದ ದಶಕಗಳಿಂದ ರಿಪಬ್ಲಿಕ್ ಆಫ್ ಬಳ್ಳಾರಿ ಎಂದು ಇಡೀ ದೇಶಕ್ಕೆ ಚಿರಪರಿಚಿತವಾಗಿದ್ದ ಬಳ್ಳಾರಿ ಲೋಕಸಭೆಯ ಫಲಿತಾಂಶ ಈಗ ಬಿಜೆಪಿಗೆ ನಿಜಕ್ಕೂಅಚ್ಚರಿಯನ್ನುಂಟು ಮಾಡಿದೆ. ಇದಕ್ಕೆ ಕಾರಣವಿಷ್ಟೇ, ಕಳೆದ 14 ವರ್ಷಗಳಿಂದಲೂ ಕೂಡ ಇಲ್ಲಿ ಗಣಿಧಣಿಗಳಾದ ರೆಡ್ಡಿ ಸಹೋದರು ಹಾಗೂ ಶ್ರೀರಾಮಲು ಪ್ರಾಬಲ್ಯದಿಂದ ನೆಲೆಯೂರಿದ್ದ ಬಿಜೆಪಿಗೆ ಈಗ ಉಪ ಚುನಾವಣೆಯಲ್ಲಿನ ಸೋಲು ಚಿಂತೆಗೀಡುಮಾಡಿದೆ.


COMMERCIAL BREAK
SCROLL TO CONTINUE READING

ಚುನಾವಣೆಗೂ ಮೊದಲು ಬಿಜೆಪಿಯು ಈ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸುವ ಉದ್ದೇಶ ಅದರದ್ದಾಗಿತ್ತು. ಆದರೆ ಈಗ ಅದಕ್ಕೆ ಎಳ್ಳು ನೀರುಬಿಡುವಂತಾಗಿದೆ. ಇದಕ್ಕೆ ಕಾರಣವಿಷ್ಟೇ  ಕಾಂಗ್ರೆಸ್ - ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ವಿಎಸ್ ಉಗ್ರಪ್ಪ ಬಿಜೆಪಿ ಅಭ್ಯರ್ಥಿ ಜೆ ಶಾಂತಾ ವಿರುದ್ದ ದಾಖಲೆಯ ಅಂತರದಿಂದ ಸಾಧಿಸಿರುವ ಗೆಲುವು. ಅಚ್ಚರಿಯೆಂದರೆ  2000ರಲ್ಲಿ ಕೊಳೂರು ಬಸವನಗೌಡ ಅವರು ಸಾಧಿಸಿದ್ದ ಗೆಲುವೆ ಕಾಂಗ್ರೆಸ್ ನ ಕೊನೆ ಗೆಲುವಾಗಿತ್ತು. ಆದರೆ ಈಗ ಒಟ್ಟು 14 ವರ್ಷಗಳ ಬಳಿಕ ಬಳ್ಳಾರಿ ಕ್ಷೇತ್ರವನ್ನು ಮತ್ತೆ ಕಾಂಗ್ರೆಸ್  ವಶಪಡಿಸಿಕೊಂಡಿದೆ.


2000 ರ ನಂತರ ರೆಡ್ಡಿ ಸಹೋದರರು ಮತ್ತು ಶ್ರೀರಾಮಲುರಿಂದಾಗಿ ಬಳ್ಳಾರಿಯು ಬಿಜೆಪಿಯ ಭದ್ರಕೋಟೆಯಾಗಿ ಪರಿಣಮಿಸಿತ್ತು. ಇನ್ನೊಂದೆಡೆಗೆ  ಬಿಜೆಪಿಗೆ ಕ್ಯಾಶ್ ಬ್ಯಾಕ್ ನಂತಿದ್ದ ಬಳ್ಳಾರಿ ಕೋಟೆಯನ್ನು ಈ ಬಾರಿ ಬೇದಿಸುವುದು ಕಾಂಗ್ರೆಸ್ ಗೆ ಅಷ್ಟು ಸುಲಭದ ಮಾತಾಗಿರಲಿಲ್ಲ, ಇದಕ್ಕೆ ಕಾರಣ ಉಪಚುನಾವಣೆಯ ದಿನಾಂಕ ನಿಗಧಿಯಾದಾಗ ಕಾಂಗ್ರೆಸ್ಗೆ ಸೂಕ್ತ ಅಭ್ಯರ್ಥಿಯು ದೊರತಿರಲಿಲ್ಲ ಮತ್ತು ಅಭ್ಯರ್ಥಿಯ ಆಯ್ಕೆಯನ್ನು ಡಿಕೆ ಶಿವಕುಮಾರ್ ಅವರಿಗೆ ನೀಡಲಾಗಿತ್ತು. ಆದರೆ ಸೂಕ್ತ ಅಭ್ಯರ್ಥಿಯ ಹುಡುಕಾಟದಲ್ಲಿ ವಿಫಲವಾಗುತ್ತಿರುವುದು ಕಂಡು ಬಂದಾಗ ಕೊನೆಗೆ ಸಿದ್ದರಾಮಯ್ಯ ತಮ್ಮ ನೆಚ್ಚಿನ ಬಳಗದ ಸದಸ್ಯರಲ್ಲೊಬ್ಬರಾದ ವಿ.ಎಸ್ ಉಗ್ರಪ್ಪ ನವರನ್ನು ಕಣಕ್ಕೆ ಇಳಿಸುವ ಮೂಲಕ ಚುನಾವಣೆಯನ್ನು ಕಾವೇರುವಂತೆ ಮಾಡಿದ್ದರು.


ಇತ್ತ ಜಮಖಂಡಿ ಮತ್ತು ಬಳ್ಳಾರಿಯನ್ನು ಸ್ವಪ್ರತಿಷ್ಠೆಯಾಗಿ ತಗೆದುಕೊಂಡಿದ್ದ ಸಿದ್ದರಾಮಯ್ಯ ಬಿಜೆಪಿ ತಂತ್ರಕ್ಕೆ ಪ್ರತಿತಂತ್ರ ರೂಪಿಸಿ ನಾಯಕರಲ್ಲೂ ಒಮ್ಮತ ಮೂಡಿಸುವಲ್ಲಿ ಯಶಸ್ವಿಯಾಗಿದ್ದರು. ಉಗ್ರಪ್ಪ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಅಭ್ಯರ್ಥಿಯಾಗಿದ್ದರೂ ಕೂಡ ಬಳ್ಳಾರಿ ಭಾಗದಲ್ಲಿ ಜೆಡಿಎಸ್ ಅಷ್ಟಕ್ಕಷ್ಟೇ ಎನ್ನುವಂತೆ ಇದೆ. ಇನ್ನು ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಸರ್ಕಾರಕ್ಕೆ ತಲೆನೂವಾಗಿರುವುದು ಬಳ್ಳಾರಿ ಗ್ಯಾಂಗ್ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಕಾರಣ ಈ ಹಿಂದೆ ಆಪರೇಶನ್ ಕಮಲ್ ದ ಮೂಲಕ ಸರ್ಕಾರ ರಚಿಸವುದಕ್ಕೆ ಕಾರಣವಾಗಿದ್ದು ಇದೇ ಗ್ಯಾಂಗ್.  ಹಾಗಾಗಿ ಈ ಗ್ಯಾಂಗ್ ಅನ್ನು ರಾಜಕೀಯವಾಗಿ ಕುಗ್ಗಿಸಬೇಕು ಎನ್ನುವ ಪ್ಲಾನ್ ಕೂಡ ಈ ಮೈತ್ರಿಕೂಟದ್ದಾಗಿತ್ತು. ಈ ಹಿನ್ನಲೆಯಲ್ಲಿ  ಚುನಾವಣೆಯಲ್ಲಿ ಮೈತ್ರಿಕೂಟದ ಪಕ್ಷಗಳ ನಾಯಕರು ತೋರಿದ ಸಂಘಟಿತ ನಾಯಕತ್ವ, ಪ್ರಚಾರ, ಹಾಗೂ ಬೂತ್ ಭಾಗದಲ್ಲಿನ ನಿರ್ವಹಣೆ ಕಾರ್ಯವೆಲ್ಲವು ಕೂಡ ರೆಡ್ಡಿ ಸಹೋದರರ ಭದ್ರಕೋಟೆಗೆ ಲಗ್ಗೆ ಇಡಲು ಸಾಕಾಗಿತ್ತು.ಇನ್ನೊಂದೆಡೆಗೆ ಕೊನೆಯ ಗಳಿಗೆಯಲ್ಲಿ ಸಿದ್ದರಾಮಯ್ಯನವರ ಮಗನ ಸಾವಿನ ಬಗ್ಗೆ ಜನಾರ್ಧನ ರೆಡ್ಡಿಯವರು ನೀಡಿದ ಹೇಳಿಕೆಯೂ ಕೂಡ  ಎಲ್ಲೋ ಒಂದು ಕಡೆ ಬಿಜೆಪಿಗೆ ಮಾರಕವಾಗಿ ಪರಣಮಿಸಿದೆ. 


ಈ ಹಿಂದೆ ಜಿ ಕರುಣಾಕರ ರೆಡ್ಡಿ(2004), ಜೆ ಶಾಂತಾ(2009), ಬಿ,ಶ್ರೀರಾಮಲು(2014), ಅವರ ಮೂಲಕ ಸತತ ಮೂರು ಬಾರಿ ಹ್ಯಾಟ್ರಿಕ್ ಗೆಲುವು ಸಾಧಿಸಿ ನಾಲ್ಕನೇ ಗೆಲುವಿನ ಕನಸಿನಲ್ಲಿದ್ದ ಬಿಜೆಪಿ ಮತ್ತು ಬಳ್ಳಾರಿ ಸಹೋದರರ ಲೆಕ್ಕಾಚಾರವೆಲ್ಲವು ಕೂಡ ಈಗ ತಲೆಕೆಳಗಾಗಿದೆ. ಈಗ ಕರ್ನಾಟಕದಲ್ಲಿ ನಡೆದ ಒಟ್ಟು 5 ಕ್ಷೇತ್ರಗಳ ಉಪಚುನಾವಣೆಯಲ್ಲಿ ನಾಲ್ಕು ಕ್ಷೇತ್ರಗಳಲ್ಲಿ ಮೈತ್ರಿಕೂಟದ ಅಭ್ಯರ್ಥಿಗಳು ಭರ್ಜರಿ ಗೆಲುವನ್ನು ಸಾಧಿಸುವ ಮೂಲಕ ಮೈತ್ರಿ ಸರ್ಕಾರ ಸುಭದ್ರವಾಗಿದೆ ಎನ್ನುವ ಸಂದೇಶ ರವಾನಿಸಿದಂತಾಗಿದೆ.