ಖಾಲಿ ನಿವೇಶನದ ಸ್ವಚ್ಛತೆ ಕಾಪಾಡದಿದ್ದರೆ ಮಾಲೀಕರಿಗೆ ಪಾಲಿಕೆ ಹಾಕಲಿದೆ ಬರೆ
ಕೆಲವರು ಒಂದಕ್ಕಿಂತ ಹೆಚ್ಚು ಸೈಟ್ ಖರೀದಿಸಿ ಅವುಗಳನ್ನು ಖಾಲಿ ಬಿಟ್ಟಿರುತ್ತಾರೆ. ಅಂತಹ ಸೈಟ್‌ಗಳು ಇದೀಗ ಅಕ್ಕಪಕ್ಕದ ನಿವಾಸಿಗಳು ಮತ್ತು ಹು-ಧಾ ಮಹಾನಗರ ಪಾಲಿಕೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿವೆ.
ಧಾರವಾಡ : ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆ. ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿ ಕಾರ್ಯಗತಗೊಳಿಸುವ ಮೂಲಕ ಸ್ವಚ್ಚ ನಗರದ ಆಯ್ಕೆಯಲ್ಲಿ ಸ್ಟಾರ್ ರೇಟಿಂಗ್ ಪಡೆದುಕೊಂಡಿರುವ ಪಾಲಿಕೆ ಇದು. ಅನಧಿಕೃತ ಕಟ್ಟಡಗಳಿಗೆ ಹಾಗೂ ಅಕ್ರಮವಾಗಿ ಒತ್ತುವರಿ ಮಾಡಿದ್ದ ನಿವೇಶನದ ಮಾಲೀಕರಿಗೆ ಬಿಸಿ ಮುಟ್ಟಿಸಿರುವ ಪಾಲಿಕೆ ಈಗ ಮತ್ತೊಂದು ಕಾರ್ಯವನ್ನು ಕೈಗೆತ್ತಿಕೊಂಡಿದೆ.
ಸ್ವಂತಕ್ಕೊಂದು ಸೈಟು, ಸ್ವಂತಕ್ಕೊಂದು ಮನೆ ಇರಬೇಕು ಎಂಬ ಆಸೆ ಪ್ರತಿಯೊಬ್ಬನಿಗೂ ಇರುತ್ತದೆ. ಆದರೆ, ಕೆಲವರು ಒಂದಕ್ಕಿಂತ ಹೆಚ್ಚು ಸೈಟ್ ಖರೀದಿಸಿ ಅವುಗಳನ್ನು ಖಾಲಿ ಬಿಟ್ಟಿರುತ್ತಾರೆ. ಅಂತಹ ಸೈಟ್‌ಗಳು ಇದೀಗ ಅಕ್ಕಪಕ್ಕದ ನಿವಾಸಿಗಳು ಮತ್ತು ಹು-ಧಾ ಮಹಾನಗರ ಪಾಲಿಕೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿವೆ. ಹೀಗಾಗಿ ಖಾಲಿ ನಿವೇಶನಗಳನ್ನು ಸ್ವಚ್ಛವಾಗಿಟ್ಟುಕೊಳ್ಳದ ಮಾಲೀಕರ ವಿರುದ್ಧ ಹು-ಧಾ ಮಹಾನಗರ ಪಾಲಿಕೆ ಹೊಸ ಅಭಿಯಾನ ಆರಂಭಿಸಿದೆ.
ಇದನ್ನೂ ಓದಿ : 'ಭಿನ್ನಾಭಿಪ್ರಾಯಗಳನ್ನು ಟೂಲ್ಕಿಟ್ ಎಂದು ರಾಜಕೀಯಗೊಳಿಸುತ್ತಿರುವುದು ನಾಡಿಗೆ ಕೇಡಿನ ಲಕ್ಷಣ'
ಹು-ಧಾ ಮಹಾನಗರದಲ್ಲಿ ಖಾಲಿ ಸೈಟ್ ಗಳದ್ದೇ ದೊಡ್ಡ ಸಮಸ್ಯೆಯಾಗಿದೆ. ಊರು - ಕೇರಿಗಳಲ್ಲಿ ಖಾಲಿ ನಿವೇಶನ ಇರುವುದೇ ಕಸ ಹಾಕಲು ಎಂಬ ಭಾವನೆ ಇಲ್ಲಿನ ಜನರಿಗೆ ಬಂದಂತಿದೆ. ಇದು ಇದೀಗ ಹಲವು ಸಮಸ್ಯೆಗಳಿಗೆ ದಾರಿ ಮಾಡಿಕೊಟ್ಟಿದೆ. ಖಾಲಿ ಸೈಟ್ ಕಂಡರೆ ಸಾಕು ರಾತ್ರಿ ಬೆಳಗಾಗುವಷ್ಟರಲ್ಲಿ ತಿಪ್ಪೆ ಗುಂಡಿಯಾಗಿ ಮಾರ್ಪಾಡಾಗುತ್ತಿವೆ. ಕ್ರಮೇಣವಾಗಿ ಖಾಲಿ ನಿವೇಶನದಲ್ಲಿ ಮುಳ್ಳು ಕಂಟಿಯ ಪೊದೆ ಬೆಳೆದು, ಬೀಡಾದಿ ದನ, ಹಂದಿ, ನಾಯಿಗಳ ಆಶ್ರಯತಾಣವಾಗುತ್ತಿದೆ. ಕೆಲವು ಕಡೆಗೆ ಬಯಲು ಶೌಚಾಲಯಕ್ಕೂ ಖಾಲಿ ಸೈಟ್ ಗಳು ಬಳಕೆಯಾಗುತ್ತಿವೆ. ಪರಿಣಾಮ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ದುರ್ವಾಸನೆ ಬೀರುತ್ತಿವೆ. ಸೊಳ್ಳೆಗಳ ನೆಲೆಯಾಗಿ ಮಾರ್ಪಾಡಾಗಿ ಆರೋಗ್ಯ ಕಸಮಸ್ಯೆ ತಲೆದೋರುವುದಕ್ಕೂ ಕಾರಣವಾಗಿದೆ. ಈ ನಿಟ್ಟಿನಲ್ಲಿ ಇದೀಗ ಪಾಲಿಕೆ ಕಾರ್ಯಾಚರಣೆಗೆ ಮುಂದಾಗಿದೆ.
ಹು-ಧಾ ಸ್ಮಾರ್ಟ್ ಸಿಟಿಯಾಗಿ ರೂಪುಗೊಳ್ಳುತ್ತಿರುವ ಸಂದರ್ಭದಲ್ಲಿ, ನಗರದಲ್ಲಿನ ಖಾಲಿ ನಿವೇಶನಗಳು ಅವ್ಯವಸ್ಥೆ ಆಗರವಾಗಿ ಮಾರ್ಪಟ್ಟಿವೆ. ಹೀಗಾಗಿ ನಗರದಲ್ಲಿ ಸ್ವಚ್ಛತೆ ಕಾಪಾಡುವ ದೃಷ್ಟಿಯಿಂದ ಪಾಲಿಕೆ ನಮ್ಮ ನಗರ ಸ್ವಚ್ಛ ನಗರ ಎಂಬ ಅಭಿಯಾನ ಆರಂಭಿಸಿದೆ. ಈ ಮೂಲಕ ಖಾಲಿ ನಿವೇಶನಗಳನ್ನು ಸ್ವಚ್ಛವಾಗಿಟ್ಟುಕೊಳ್ಳದ ಮಾಲೀಕರಿಗೆ ಪಾಠ ಕಲಿಸಲು ಪಾಲಿಕೆ ನಿರ್ಧಾರ ಮಾಡಿದೆ. ಈ ಹಿನ್ನೆಲೆಯಲ್ಲಿ ನಿವೇಶನಗಳ ಮಾಲೀಕರಿಗೆ ನೋಟೀಸ್ ನೀಡಿದ್ದು, 7 ದಿನಗಳಲ್ಲಿ ತಮ್ಮ ಖಾಲಿ ನಿವೇಶನಗಳನ್ನು ಸ್ವಚ್ಚಗೊಳಿಸುವಂತೆ ಸೂಚಿಸಲಾಗಿದೆ. ಒಂದೊಮ್ಮೆ ಖಾಲಿ ನಿವೇಶನಗಳನ್ನು ಮಾಲೀಕರು ಸ್ವಚ್ಚಗೊಳಿಸದೆ ಹಾಗೆಯೇ ಬಿಟ್ಟರೆ ಪಾಲಿಕೆಯೇ ಸ್ವಚ್ಚಗೊಳಿಸಲು ಕ್ರಮ ವಹಿಸಿಕೊಳ್ಳುತ್ತದೆ. ಆದರೆ ಅದಕ್ಕೆ ತಗಲುವ ವೆಚ್ಚವನ್ನು ಮಾಲೀಕರಿಂದ ಆಸ್ತಿ ಕಂದಾಯದ ಜತೆಗೆ ಖಾಲಿ ನಿವೇಶನದ ಸ್ವಚ್ಛತಾ ಶುಲ್ಕವಾಗಿ ವಸೂಲಿ ಮಾಡಲು ಪಾಲಿಕೆ ಮುಂದಾಗಿದೆ.
ಇದನ್ನೂ ಓದಿ : Chandrashekhar Kambar : ಚಂದ್ರಶೇಖರ ಕಂಬಾರ ಹೆಸರಿನಲ್ಲಿ ಸೈಬರ್ ಖದೀಮರು ವಂಚನೆಗೆ ಯತ್ನ, ಪ್ರಕರಣ ದಾಖಲು
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ