ಕುರ್ಚಿ ಖಾಲಿ ಇರುವುದಕ್ಕೇ ಚನ್ನಪಟ್ಟಣಕ್ಕೆ ಬಂದಿದ್ದೇನೆ: ಡಿಸಿಎಂ ಡಿ. ಕೆ. ಶಿವಕುಮಾರ್
`ಚನ್ನಪಟ್ಟಣದಲ್ಲಿ ಶಾಸಕರು ಇದ್ದಿದ್ದರೆ ನಾನೇಕೆ ಬರುತ್ತಿದ್ದೆ? ಕುರ್ಚಿ ಖಾಲಿ ಇರುವುದಕ್ಕೆ ಬಂದು ಕುಳಿತಿದ್ದೇನೆ. ಬೇರೆಯವರು ಕುರ್ಚಿಯಲ್ಲಿ ಕುಳಿತಿದ್ದರೆ ಬರುತ್ತಿದ್ದೇನೆಯೇ?` ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ಪ್ರಶ್ನಿಸಿದರು.
ಬೈರಾಪಟ್ಟಣದಲ್ಲಿ 'ನಡೆದ ಬಾಗಿಲಿಗೆ ಬಂತು ಸರ್ಕಾರ ಸೇವೆಗೆ ಇರಲಿ ಸಹಕಾರ' ಕಾರ್ಯಕ್ರಮದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಉಪಚುನಾವಣೆ ಕಾರಣಕ್ಕೆ ಶಿವಕುಮಾರ್ ಚನ್ನಪಟ್ಟಣಕ್ಕೆ ಬರುತ್ತಿದ್ದಾರೆ ಎಂದು ಟೀಕೆ ಮಾಡಲಾಗುತ್ತಿದೆ ಎನ್ನುವ ಪ್ರಶ್ನೆಗೆ ಹೀಗೆ ಉತ್ತರಿಸಿದರು.
ಅಂದುಕೊಳ್ಳಲಿ ಬಿಡಿ. ಉಪಚುನಾವಣೆ ಕಾರಣಕ್ಕೆ ಚನ್ನಪಟ್ಟಣಕ್ಕೆ ಬರುತ್ತಿದ್ದಾರೆ ಅಂದುಕೊಳ್ಳುವುದರಲ್ಲಿ ತಪ್ಪೇನಿದೆ? ನಾವು ನಮ್ಮ ಕೆಲಸ ಮಾಡುತ್ತೇವೆ. ಜನಕ್ಕೆ ಸ್ಪಂದನೆ ಮಾಡಬೇಕಲ್ಲವೇ? ಎಂದರು.
ಇದನ್ನು ಓದಿ : ಗೋಪಿನಾಥ ಬೆಟ್ಟದಲ್ಲಿ ನೆರವೇರಿತು ಧರ್ಮ ಕೀರ್ತಿರಾಜ್ ಅಭಿನಯದ ನೂತನ ಚಿತ್ರದ ಮುಹೂರ್ತ
ರಾಜ್ಯದಾದ್ಯಂತ ಬಾಗಿಲಿಗೆ ಬಂತು ಸರ್ಕಾರ ಕಾರ್ಯಕ್ರಮ ನಡೆಸಲಾಗುವುದು
ಬಾಗಿಲಿಗೆ ಬಂತು ಸರ್ಕಾರ ಕಾರ್ಯಕ್ರಮದಿಂದ ಬದಲಾವಣೆ ಆಗುತ್ತಿದೆಯೇ ಎನ್ನುವ ಪ್ರಶ್ನೆಗೆ "ಖಂಡಿತ ಆಗುತ್ತಿದೆ. ಕ್ಷೇತ್ರದ ನಾಯಕರು ಜನರ ಬಳಿಗೆ ಹೋಗಿಲ್ಲ ಎನ್ನುವ ಟೀಕೆಗೆ 'ಬಾಗಿಲಿಗೆ ಬಂತು ಸರ್ಕಾರ' ಕಾರ್ಯಕ್ರಮವೇ ಉತ್ತರ. ಸಾವಿರಾರು ಜನ ಅರ್ಜಿ ಹಿಡಿದುಕೊಂಡು ಬರುತ್ತಿದ್ದಾರೆ. ಈಗ ನಮ್ಮ ಕೆಲಸವನ್ನು ನಾವು ಮಾಡುತ್ತಿದ್ದೇವೆ" ಎಂದು ಹೇಳಿದರು.
ಎಲ್ಲಾ ಮಂತ್ರಿಗಳು ಜನಸ್ಪಂದನ ನಡೆಸಬೇಕು ಎಂದು ಮುಖ್ಯಮಂತ್ರಿಗಳು ಸೂಚನೆ ನೀಡಿದ್ದರು. ನಾನು ಇದನ್ನೇ ಬೇರೆ ಸ್ವರೂಪದಲ್ಲಿ ಮಾಡುತ್ತಿದ್ದೇನೆ. ಇದೇ ರೀತಿ ರಾಜ್ಯದಾದ್ಯಂತ ಬಾಗಿಲಿಗೆ ಬಂತು ಸರ್ಕಾರ ಕಾರ್ಯಕ್ರಮದ ಸ್ವರೂಪದಲ್ಲಿ ಜನಸ್ಪಂದನ ಮುಂದುವರೆಯುತ್ತದೆ. ಮಂತ್ರಿಗಳು ಹಾಗೂ ಶಾಸಕರು ಕಾರ್ಯಕ್ರಮ ನಡೆಸಬೇಕು ಎಂದು ತಿಳಿಸಲಾಗುವುದು. ತಾಲ್ಲೂಕು, ಗ್ರಾಮ ಮಟ್ಟದಲ್ಲಿ ಸಮಸ್ಯೆಗಳನ್ನು ನಿವಾರಿಸಿದರೆ ಬೆಂಗಳೂರಿನಲ್ಲಿ ಒತ್ತಡ ಕಡಿಮೆಯಾಗುತ್ತದೆ" ಎಂದು ತಿಳಿಸಿದರು.
ವಸತಿ ವಿಚಾರಕ್ಕೆ ಏಕೆ ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂದು ಕೇಳಿದಾಗ "ಮನುಷ್ಯನ ಜೀವನದಲ್ಲಿ ಎರಡೇ ಆಸೆ, ತಲೆ ಮೇಲೆ ಒಂದು ಸೂರು, ಉದ್ಯೋಗ. ಮನೆ ಇದ್ದರೆ ಎಲ್ಲವು ಇದ್ದಂತೆ. ಅದಕ್ಕೆ ಮೊದಲ ಆದ್ಯತೆ ನೀಡುತ್ತಿದ್ದೇನೆ. ಸೋಮವಾರದ (ಜುಲೈ. 8ರ) ನಂತರ ವಸತಿ ಉದ್ದೇಶಗಳಿಗೆ ಅಧಿಕಾರಿಗಳು ಹುಡುಕಿರುವ ಸ್ಥಳಗಳಿಗೆ ಖುದ್ದಾಗಿ ಭೇಟಿ ನೀಡುತ್ತೇನೆ. ವಸತಿ ಸಚಿವ ಜಮೀರ್, ಕೃಷ್ಣ ಬೈರೇಗೌಡ ಅವರ ಬಳಿಯೂ ಮಾತನಾಡಲಾಗಿದ್ದು, ಅವರೂ ಒಮ್ಮೆ ಭೇಟಿ ನೀಡುತ್ತಾರೆ" ಎಂದರು.
ಇದನ್ನು ಓದಿ : ಗಜಕೇಸರಿ ರಾಜಯೋಗದಿಂದ ಈ 3 ರಾಶಿಯವರಿಗೆ ಆರ್ಥಿಕ ಲಾಭ & ಅದೃಷ್ಟದ ಬೆಂಬಲ!
ಚನ್ನಪಟ್ಟಣಕ್ಕೆ ಮಾತ್ರ ವಿಶೇಷ ಅನುದಾನ ಮಾತ್ರವಾ ಅಥವಾ ಬೇರೆ ಕ್ಷೇತ್ರಗಳಿಗೂ ಅನುದಾನ ಸಿಗಲಿದೆಯೇ ಎಂದು ಕೇಳಿದಾಗ "ಉಪಚುನಾವಣೆ ಇರುವ 3 ಕ್ಷೇತ್ರಗಳಿಗೆ ವಿಶೇಷ ಅನುದಾನ ಸಿಗಲಿದೆ. ಈ ಹಿಂದೆ ಬಿಜೆಪಿ, ದಳದವರು ಇದೆ ರೀತಿ ಮಾಡಿಲ್ಲವೇ? ಅದಕ್ಕೆ ನಾವೂ ಮಾಡುತ್ತೇವೆ" ಎಂದರು.
ಅಚ್ಚರಿ ಅಭ್ಯರ್ಥಿ ಯಾರಾಗಲಿದ್ದಾರೆ ಎನ್ನುವ ಚರ್ಚೆ ಬಗ್ಗೆ ಕೇಳಿದಾಗ "ಯಾರೇ ಅಭ್ಯರ್ಥಿಯಾದರು ನನಗೆ ಮತ ಹಾಕಿದಂತೆ. ಯಾರು ಏನು ಬೇಕಾದರೂ ಖುಷಿಪಡಲಿ, ಚರ್ಚೆ ಮಾಡಲಿ" ಎಂದು ಹೇಳಿದರು.
ಇಡೀ ಜಿಲ್ಲೆಯನ್ನು ಕ್ಲೀನ್ ಸ್ವೀಪ್ ಮಾಡುತ್ತೀರಾ ಎಂದು ಕೇಳಿದಾಗ "ನಾವು ಜನ ಸೇವೆ ಮಾಡಲು ಬಂದಿದ್ದೇವೆ. ಅದು ಮುಖ್ಯವೇ ಹೊರತು, ರಾಜಕೀಯವಲ್ಲ" ಎಂದು ಹೇಳಿದರು.
ತಾಲ್ಲೂಕಿನಲ್ಲಿ ಓಡಾಡಿರುವುದರಿಂದ ಜನರ ನಾಡಿ ಮಿಡಿತ ಅರ್ಥವಾಗಿದೆಯೇ ಎಂದಾಗ "ಜನರ ನಾಡಿ ಮಿಡಿತ ಅರಿಯುವ ಮೊದಲು ಅವರ ಹೃದಯದ ಒಳಗೆ ಹೋಗೋಣ" ಎಂದರು.
ಟಿಕೆಟ್ ಸಿಗುವುದಿಲ್ಲ ಎನ್ನುವ ಸೂಚನೆ ಇರುವ ಮೈತ್ರಿ ಅಭ್ಯರ್ಥಿಗಳು ನಿಮ್ಮನ್ನು ಸಂಪರ್ಕ ಮಾಡಿದ್ದಾರೆಯೇ ಎಂದು ಪ್ರಶ್ನಿಸಿದಾಗ "ಯಾರೂ ನನ್ನನ್ನು ಸಂಪರ್ಕ ಮಾಡಿಲ್ಲ. ನಾವು ನಮ್ಮ ಕೆಲಸ ಮಾಡುತ್ತ ಇದ್ದೇವೆ" ಎಂದು ಹೇಳಿದರು.
ಸಿಎಂ ಪತ್ನಿ ಪರಿಹಾರದ ರೂಪದಲ್ಲಿ ನಿವೇಶನ ಪಡೆದಿದ್ದಾರೆ
ಮೂಡಾದಲ್ಲಿ 4 ಸಾವಿರ ಕೋಟಿ ರೂ. ಹಗರಣವಾಗಿದೆ ಹಾಗೂ ಮುಖ್ಯಮಂತ್ರಿಗಳ ಪತ್ನಿಗೂ ನಿವೇಶನ ನೀಡಲಾಗಿದೆ ಎನ್ನುವ ಆರೋಪದ ಬಗ್ಗೆ ಕೇಳಿದಾಗ "ಸಿಎಂ ಅವರ ಪತ್ನಿ ಯಾಕೆ ಹಗರಣ ಮಾಡುತ್ತಾರೆ. ಅವರ ಆಸ್ತಿ ಸರ್ಕಾರಕ್ಕೆ ಹೋಗಿದೆ, ಅದಕ್ಕೆ ಬದಲಾಗಿ ನಿವೇಶನ ನೀಡಿದ್ದಾರೆ, ಇದರಲ್ಲಿ ತಪ್ಪೇನಿದೆ? ಎಂದರು.
ಆರ್.ಅಶೋಕ್ ಆರೋಪ ಮಾಡಿದ್ದಾರೆ ಎಂದು ಮರು ಪ್ರಶ್ನಿಸಿದಾಗ "ಅವರ ಸರ್ಕಾರದಲ್ಲೇ ಹಂಚಿಕೆ ಮಾಡಲಾಗಿದೆ. ಸಿಎಂ ಅವರ ಪತ್ನಿ ಡಿನೋಟಿಫೈ ಮಾಡಿಕೊಳ್ಳದೆ ಪರಿಹಾರ ಪಡೆದಿದ್ದಾರಲ್ಲ ಅದಕ್ಕೆ ಸಂತೋಷ ಪಡಬೇಕು. ಇದರಲ್ಲಿ ತಪ್ಪೇನಿದೆ, ಅವರು ಅರ್ಹರಿದ್ದಾರೆ, ಅದಕ್ಕೆ ತೆಗೆದುಕೊಂಡಿದ್ದಾರೆ. ಇದು ಭ್ರಷ್ಟಾಚಾರ ಹೇಗಾಗುತ್ತದೆ" ಎಂದು ಮರುಪ್ರಶ್ನಿಸಿದರು.
ನಮ್ಮ ಮುಖ್ಯಮಂತ್ರಿಗಳು ಭ್ರಷ್ಟಾಚಾರದ ವಿರುದ್ಧ ಕಠಿಣವಾಗಿದ್ದಾರೆ
ಸಚಿವ ಬೈರತಿ ಸುರೇಶ್ ಅವರು ಸಭೆ ನಡೆಸಿ ನಾಲ್ಕು ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದಾರೆ ಎಂದಾಗ "ನಮ್ಮ ಮುಖ್ಯಮಂತ್ರಿಗಳು ಭ್ರಷ್ಟಾಚಾರದ ವಿರುದ್ಧ ಅತ್ಯಂತ ಕಠಿಣವಾಗಿದ್ದಾರೆ. ಯಾರೇ ತಪ್ಪು ಮಾಡಿದ್ದರೂ ಅವರಿಗೆ ಯಾವುದೇ ವಿನಾಯಿತಿ ನೀಡದೆ ಶಿಕ್ಷೆ ಆಗಬೇಕು ಎನ್ನುವ ಧೋರಣೆ ಹೊಂದಿದ್ದಾರೆ. ತಪ್ಪು ಮಾಡಿರುವವರ ವಿರುದ್ಧ ಕಟ್ಟುನಿಟ್ಟಾಗಿ ಕ್ರಮ ತೆಗೆದುಕೊಳ್ಳುತ್ತಾರೆ" ಎಂದರು.
ವಾಲ್ಮೀಕಿ ನಿಗಮ ಹಗರಣದಲ್ಲಿ ನಾಗೇಂದ್ರ ಅವರ ಪಾತ್ರವಿಲ್ಲ
ವಾಲ್ಮೀಕಿ ನಿಗಮದ ಹಗರಣದಲ್ಲಿ ನಾಗೇಂದ್ರ ಅವರು ಕೈವಾಡವಿಲ್ಲ ಎಂಬುದು ತಿಳಿಯಿತು. ನಾನು ಹೈದ್ರಾಬಾದ್ ಅಲ್ಲಿ ಒಂದಷ್ಟು ಜನರ ಬಳಿ ವಿಚಾರಿಸಿದೆ. ನಮ್ಮ ಮಂತ್ರಿಗಳು ಅದರಲ್ಲಿ ಭಾಗಿಯಾಗಿಲ್ಲ ಎಂಬುದು ತಿಳಿಯಿತು. ಬೇರೆ ಯಾರೋ ಮಾಡಿದ್ದಾರೆ. ನಮ್ಮ ಮಂತ್ರಿಗಳು ಭಾಗಿಯಾಗದೇ ಇರುವುದು ಸಮಾಧಾನ ತಂದಿದೆ" ಎಂದರು.
ನಾಗೇಂದ್ರ ಅವರನ್ನು ವಿಚಾರಣೆ ನಡೆಸಲಾಗುವುದೇ ಎಂದು ಕೇಳಿದಾಗ "ಅಗತ್ಯ ಬಿದ್ದರೆ ಮಾಡಿಯೇ ಮಾಡುತ್ತಾರೆ. ಇದರಲ್ಲಿ ತಪ್ಪೇನಿದೆ. ನಮ್ಮನ್ನೆ ಮಾಡಿಲ್ಲವೇ" ಎಂದು ಕೇಳಿದರು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ