ಬೆಂಗಳೂರು: ರಾಜ್ಯ ಬಜೆಟ್ ಮಂಡನೆ ವಿಚಾರವಾಗಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವೆ ಬಹಿರಂಗ ವಾಕ್ ಸಮರದ ನಡೆದಿರುವ ಬೆನ್ನಲ್ಲೇ ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡ, ಹೊಸ ಸರ್ಕಾರ ಅದು ಸಮ್ಮಿಶ್ರವೇ ಆಗಲಿ, ಅಧಿಕಾರಕ್ಕೆ ಬಂದಾಗ ಬಜೆಟ್‌ ಮಂಡಿಸುವುದು ವಾಡಿಕೆ. ಹಿಂದೆ ಬಿಜೆಪಿ ಸರ್ಕಾರ ಹೋಗಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಾಗ ಸಿದ್ದರಾಮಯ್ಯ ಅವರೂ ಹೊಸ ಬಜೆಟ್‌ ಮಂಡಿಸಿದ್ದರು. ಹಾಗೆಂದು ಬಜೆಟ್‌ ಮಂಡನೆ ವಿಚಾರದಲ್ಲಿ ಸಿದ್ದರಾಮಯ್ಯ ಹೇಳಿಕೆ ತಪ್ಪು ಎಂದು ಹೇಳುವುದಿಲ್ಲ. ಹಣಕಾಸು ವಿಚಾರದಲ್ಲಿ ಅವರಿಗೆ ಸಾಕಷ್ಟು ಅನುಭವವಿದೆ ಎಂದು ಹೇಳಿದರು.


COMMERCIAL BREAK
SCROLL TO CONTINUE READING

ಜೆಡಿಎಸ್‌ ರಾಜ್ಯ ಕಚೇರಿ ಜೆ.ಪಿ.ಭವನದಲ್ಲಿ ಮಂಗಳವಾರ ಪಕ್ಷದ ಹಿರಿಯ ಮುಖಂಡರ ಸಭೆಯಲ್ಲಿ ಪಾಲ್ಗೊಂಡ ಬಳಿಕ ಮಾತನಾಡಿದ ಅವರು, ನನ್ನ ಅನುಭವ ಆಧರಿಸಿ ಹೇಳುವುದಾದರೆ, ನಾನು ಪ್ರಧಾನಿಯಾಗಿದ್ದಾಗ ಪಿ.ಚಿದಂಬರಂ ಅವರು ಕೇಂದ್ರ ಬಜೆಟ್‌ ಮಂಡಿಸಿದರು. ಆಗ ಅದನ್ನು ಕನಸಿನ ಬಜೆಟ್‌ (ಡ್ರೀಂ ಬಜೆಟ್‌) ಎಂದು ಬಣ್ಣಿಸಲಾಗಿತ್ತು. ನಂತರ ಪ್ರಧಾನಿ ಸ್ಥಾನಕ್ಕೆ ಬಂದ ಐ.ಕೆ.ಗುಜ್ರಾಲ್‌ ಅವರು ಅದೇ ಬಜೆಟ್‌ ಮುಂದುವರಿಸಿದರು. ಏಕೆಂದರೆ, ಅದು ಒಂದೇ ಸಮ್ಮಿಶ್ರ ಸರ್ಕಾರವಾಗಿತ್ತು. ಆದರೆ, ಹೊಸ ಸರ್ಕಾರ ಅದು ಸಮ್ಮಿಶ್ರವೇ ಆಗಲಿ, ಅಧಿಕಾರಕ್ಕೆ ಬಂದಾಗ ಬಜೆಟ್‌ ಮಂಡಿಸುವುದು ವಾಡಿಕೆ. ಸಿದ್ದರಾಮಯ್ಯ ಅವರಿಗೆ ಹಣಕಾಸು ವಿಚಾರದಲ್ಲಿ ಸಾಕಷ್ಟು ಅನುಭವ ಇದೆ. ಆದರೆ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ರಾಜ್ಯಪಾಲರು ಹಳೆಯ ಭಾಷಣ ಮಾಡಲು ಬರುವುದಿಲ್ಲ. ಹೀಗಾಗಿ ಹೊಸ ಸರ್ಕಾರದ ಹೊಸ ಬಜೆಟ್ ಮಂಡನೆ ಆಗಬೇಕಾಗುತ್ತದೆ ಎಂದು ತಿಳಿಸಿದರು.


ಮೈತ್ರಿಗೆ ಧಕ್ಕೆ ಬರದಂತೆ ಪಕ್ಷ ಸಂಘಟನೆ
ಪಕ್ಷದಲ್ಲಿ ಕೆಲಸ ಮಾಡುವವರನ್ನ ಗುರುತಿಸಿದ್ದೇವೆ ಇವತ್ತಿನ ಸಭೆಗೆ ಅಂತವರನ್ನೇ ಕರೆದಿದ್ದೇವೆ ಮೈತ್ರಿಗೆ ಧಕ್ಕೆ ಬರದಂತೆ ನಾವು ಪಕ್ಷ ಸಂಘಟಿಸುತ್ತಿದ್ದೇವೆ. ಪ್ರಮುಖವಾಗಿ ಲೋಕಲ್ ಬಾಡಿ ಎಲೆಕ್ಷನ್ ನಮಗೆ ಮುಖ್ಯ, ಲೋಕಸಭೆ ಚುನಾವಣೆಯಲ್ಲಿ ಎಷ್ಟು ಸೀಟು ಅನ್ನೋದು ಚರ್ಚೆಯಾಗಿಲ್ಲ. ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ಧಕ್ಕೆಯಾಗದಂತೆ ಜೆಡಿಎಸ್‌ ಪಕ್ಷವನ್ನು ಮುನ್ನಡೆಸುತ್ತೇವೆ. ಅದಕ್ಕೆ ಏನು ಬೇಕೋ ಅದನ್ನು ಮಾಡುತ್ತಿದ್ದೇವೆ. 


ಸಂಸತ್ ಚುನಾವಣೆಯೂ ಬೇಗನೇ ಬರಬಹುದು
ಆರೇಳು ರಾಜ್ಯಗಳ ಚುನಾವಣೆ ಜೊತೆಗೆ ಪಾರ್ಲಿಮೆಂಟ್ ಚುನಾವಣೆ ಬರಬಹುದು. ಅದಕ್ಕಾಗಿ ಈಗಿನಿಂದಲೇ ನಾವು ಸಂಘಟಿರಾಗುತ್ತಿದ್ದೇವೆ. ಜೆಡಿಎಸ್ ರಾಜ್ಯಾಧ್ಯಕ್ಷ ನೇಮಕ ವಿಚಾರ ಪಕ್ಷದ ಜೊತೆಗೇ ಹಿಂದೆ ಸಿಎಂ ಆಗಿ ಚುನಾವಣೆ ಎದುರಿಸಿದ್ದೆ, ಈಗ ಕುಮಾರಸ್ವಾಮಿ ಮೈತ್ರಿ ಸರ್ಕಾರದ ಹೊಣೆ ಹೊತ್ತಿದ್ದಾರೆ ಹೀಗಾಗಿ ಕುಮಾರಸ್ವಾಮಿಗೆ  ಸ್ವಲ್ಪ ಭಾರ ಕಡಿಮೆಯಾಗಬಹುದು ಎಂದು ಹೇಳುವ ಮೂಲಕ ಪರೋಕ್ಷವಾಗಿ ಜೆಡಿಎಸ್ ರಾಜಾಧ್ಯಕ್ಷರ ಬದಲಾವಣೆಯ ಸುಳಿವು ನೀಡಿದರು.