ಸರ್ಕಾರಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಗಳನ್ನು ಆರಂಭಿಸುವುದಕ್ಕೆ ನನ್ನ ಸಹಮತವಿಲ್ಲ: ಸಿದ್ದರಾಮಯ್ಯ
ಎಲ್ಲಾ ರಾಜ್ಯಗಳಲ್ಲಿ ಮಾತೃಭಾಷೆ ಶಿಕ್ಷಣ ಸಿಗುವುದರ ಜೊತೆಗೆ ದೇಶಾದ್ಯಂತ ಏಕರೂಪದ ಶಿಕ್ಷಣ ಪದ್ಧತಿ ಜಾರಿಯಾಗಬೇಕಿತ್ತು. ಆದರೆ ಶಿಕ್ಷಣದ ಭಾಷೆಯ ಆಯ್ಕೆ ಪೋಷಕರು ಹಕ್ಕು ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿರುವುದು ಈ ನೀತಿಯ ಜಾರಿಗೆ ತೊಡಕಾಗಿದೆ. ಕೇಂದ್ರ ಸರ್ಕಾರ ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ಕಡ್ಡಾಯ ಎಂದು ನಿಯಮ ರೂಪಿಸಿದರೆ ಇದು ಸಾಧ್ಯ- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ
ಮೈಸೂರು: ಸರ್ಕಾರಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಗಳನ್ನು ಆರಂಭಿಸುವುದಕ್ಕೆ ನನ್ನ ಸಹಮತವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರಿನ ನೃಪತುಂಗ ವಾಣಿಜ್ಯ-ವಿಜ್ಞಾನ ಕಾಲೇಜಿನ ಕಟ್ಟದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಖಾಸಗಿ ಶಾಲೆಗಳಲ್ಲಿ ನೀಡುವ ಶಿಕ್ಷಣಕ್ಕೆ ಹೋಲಿಸಿದರೆ ಸರ್ಕಾರಿ ಶಾಲೆಗಳ ಶಿಕ್ಷಣದ ಗುಣಮಟ್ಟ ಇನ್ನಷ್ಟು ಸುಧಾರಣೆಯಾಗಬೇಕಿದೆ. ಕನ್ನಡ ಮಾಧ್ಯಮ ಮತ್ತು ಸರ್ಕಾರಿ ಶಾಲೆಗಳ ಉಳಿವಿಗಾಗಿ ಸರ್ಕಾರಿ ಶಾಲೆಗಳು ತಮ್ಮ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ರಾಷ್ಟ್ರದಲ್ಲಿ ಏಕರೂಪದ ಶಿಕ್ಷಣ ಜಾರಿಯಾಗಬೇಕು. ಇಂದರಿಂದ ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆ ನಿವಾರಣೆ ಸಾಧ್ಯ. ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆ ಇರುವವರೆಗೆ ಜಾತಿ ವ್ಯವಸ್ಥೆ ಸಮಾಜದಲ್ಲಿ ಮತ್ತಷ್ಟು ಬಲವಾಗಿ ಬೇರೂರಲು ಸಾಧ್ಯವಾಗುತ್ತದೆ. ಇದೇ ಕಾರಣಕ್ಕಾಗಿ ಬಸವಾದಿ ಶರಣರ ಕನಸಾಗಿದ್ದ ಜಾತಿ ವ್ಯವಸ್ಥೆಯ ಅಳಿವು ಇನ್ನೂ ಕನಸಾಗಿಯೇ ಉಳಿದಿದೆ.
ಕೇವಲ ಭಾಷಣಗಳಿಂದ ಜಾತಿ ವ್ಯವಸ್ಥೆಯ ನಿರ್ಮೂಲನೆ ಅಸಾಧ್ಯ. ಅದನ್ನು ಸಮಾಜದಿಂದ ಬುಡಸಮೇತ ಕಿತ್ತು ಹಾಕಬೇಕಾದರೆ ಅಗತ್ಯ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸಬೇಕು. ಇಂತಹ ಪ್ರಯತ್ನಗಳಲ್ಲಿ ಏಕರೂಪದ ಶಿಕ್ಷಣವೂ ಒಂದು. ಭಾಷಾ ಅಸಮಾನತೆ ಇರುವವರೆಗೆ ಸಾಮಾಜಿಕ ಬದಲಾವಣೆ ತರಲು ಸಾಧ್ಯವಿಲ್ಲ ಎಂದರು.
ಎಲ್ಲಾ ರಾಜ್ಯಗಳಲ್ಲಿ ಮಾತೃಭಾಷೆ ಶಿಕ್ಷಣ ಸಿಗುವುದರ ಜೊತೆಗೆ ದೇಶಾದ್ಯಂತ ಏಕರೂಪದ ಶಿಕ್ಷಣ ಪದ್ಧತಿ ಜಾರಿಯಾಗಬೇಕಿತ್ತು. ಆದರೆ ಶಿಕ್ಷಣದ ಭಾಷೆಯ ಆಯ್ಕೆ ಪೋಷಕರು ಹಕ್ಕು ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿರುವುದು ಈ ನೀತಿಯ ಜಾರಿಗೆ ತೊಡಕಾಗಿದೆ. ಕೇಂದ್ರ ಸರ್ಕಾರ ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ಕಡ್ಡಾಯ ಎಂದು ನಿಯಮ ರೂಪಿಸಿದರೆ ಇದು ಸಾಧ್ಯ ಎಂದು ಸಿದ್ದರಾಮಯ್ಯ ತಿಳಿಸಿದರು.
ಕನ್ನಡದ ನೆಲ, ಜಲ, ಭಾಷೆಯ ವಿಚಾರದಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ. ಸರ್ಕಾರಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಗಳನ್ನು ಆರಂಭಿಸುವುದಕ್ಕೆ ನನ್ನ ಸಹಮತವಿಲ್ಲ. ಈ ಬಗ್ಗೆ ಮತ್ತೊಮ್ಮೆ ಮುಖ್ಯಮಂತ್ರಿಗಳ ಬಳಿ ಚರ್ಚಿಸುತ್ತೇನೆ. ಕನ್ನಡ ನಾಡು, ನುಡಿ, ಸಂಸ್ಕೃತಿ ಉಳಿಯಬೇಕು ಎಂದಾದರೆ ಇಲ್ಲಿ ಎಲ್ಲರಿಗೂ ಕನ್ನಡ ಭಾಷೆಯಲ್ಲಿಯೇ ಶಿಕ್ಷಣ ಸಿಗುವಂತಾಗಬೇಕು ಎಂದು ನುಡಿದರು.
ನನ್ನದು ಹಳ್ಳಿ ಭಾಷೆ ಮತ್ತು ನೇರ ನುಡಿ. ಸ್ವಾಭಿಮಾನಿಯಾದವರು ಮತ್ತು ಪ್ರಾಮಾಣಿಕರು ಮಾತ್ರ ನೇರ ನಿಷ್ಠುರ ವ್ಯಕ್ತಿತ್ವ ಹೊಂದಿರುತ್ತಾರೆ, ಆದರೆ ಇದು ಕೆಲವು ಸೋಗಲಾಡಿ ವ್ಯಕ್ತಿತ್ವದವರಿಗೆ ಅಹಂಕಾರದಂತೆ ಕಾಣುತ್ತದೆ. ನಾವು ಜನಪರ ಮತ್ತು ಬಡವರ ಪರವಾಗಿರುವುದರಿಂದ ಅಂಥವರ ಮಾತಿಗೆ ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಇದೇ ಸಂದರ್ಭದಲ್ಲಿ ಪರೋಕ್ಷವಾಗಿ ರೋಷನ್ ಬೇಗ್ ಹೇಳಿಕೆಗೆ ತಿರುಗೇಟು ನೀಡಿದರು.