`ಸನ್ನಿ ನೈಟ್ಸ್` ಕಾರ್ಯಕ್ರಮಕ್ಕೆ ನಾನು ಬರುವುದಿಲ್ಲ - ಸನ್ನಿ ಲಿಯೋನ್
ನಾನು ಬೆಂಗಳೂರಿಗೆ ಭೇಟಿ ನೀಡುವುದಿಲ್ಲ, ನನ್ನ ರಕ್ಷಣೆಗಿಂತ ಜನರ ರಕ್ಷಣೆ ಮುಖ್ಯ ಎಂದು ಹೇಳಿರುವ ಸನ್ನಿ, ಹೊಸ ವರ್ಷದ ಶುಭಾಶಯಗಳನ್ನೂ ತಿಳಿಸಿದ್ದಾರೆ.
ಬೆಂಗಳೂರು: ಹೊಸ ವರ್ಷದ ಮುನ್ನಾದಿನದಂದು ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ನಲ್ಲಿ ಖಾಸಗಿ ಸಂಸ್ಥೆಯೊಂದು ಆಯೋಜಿಸಿದ್ದ `ಸನ್ನಿ ನೈಟ್' ಕಾರ್ಯಕ್ರಮಕ್ಕೆ ಬರುವುದಿಲ್ಲ ಎಂದು ಹೇಳಿರುವ ಬಾಲಿವುಡ್ ನಟಿ ಸನ್ನಿ ಲಿಯೋನ್, ಹೊಸವರ್ಷದ ಸಂಭ್ರಮಾಚರಣೆಗಿಂತ ಭದ್ರತೆ ಮುಖ್ಯ ಎಂದು ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸನ್ನಿ ಲಿಯೋನ್, ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ನನಗೆ ಮತ್ತು ಪ್ರೇಕ್ಷಕರಿಗೆ ಪೊಲೀಸರು ರಕ್ಷಣೆ ನೀಡಲಾಗುವುದಿಲ್ಲ ಎಂದು ಹೇಳುತ್ತಿರುವ ಹಿನ್ನೆಲೆಯಲ್ಲಿ ನಾನು ಬೆಂಗಳೂರಿಗೆ ಭೇಟಿ ನೀಡುವುದಿಲ್ಲ, ನನ್ನ ರಕ್ಷಣೆಗಿಂತ ಜನರ ರಕ್ಷಣೆ ಮುಖ್ಯ ಎಂದು ಹೇಳಿದ್ದಾರಲ್ಲದೆ, ಹೊಸ ವರ್ಷದ ಶುಭಾಶಯಗಳನ್ನೂ ತಿಳಿಸಿದ್ದಾರೆ.
ಮುಂದುವರಿದು, ತಮ್ಮ ವಿರುದ್ಧ ಪ್ರತಿಭಟನೆ ಮಾಡಿದ ಹಾಗೂ ಆಗಮನವನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದ ಹೇಳಿರುವ ಲಿಯೊನ್, ``ನಿಮ್ಮ ಕುರಿತು ಮಾತನಾಡಲು ಬೇರೆಯವರಿಗೆ ಅವಕಾಶ ನೀಡಬೇಡಿ. ನಿಮ್ಮ ಆಯ್ಕೆ ನಿಮ್ಮದೇ ಆಗಿರಲಿ. ಧ್ವನಿ ಎತ್ತಿ ಮತ್ತು ಸೂಕ್ತ ಆಯ್ಕೆ ಮಾಡಿ. ನವ ಭಾರತ ನಿರ್ಮಾಣ ಯುವಕರಿಂದ ಮಾತ್ರ ಸಾಧ್ಯ'' ಎಂದು ಪ್ರತಿಭಟನಾಕಾರರಿಗೆ ಹೇಳಿದ್ದಾರೆ.
ಈ ಹಿಂದೆ ಹೊಸವರ್ಷಾಚರಣೆ ಕಾರ್ಯಕ್ರಮವೊಂದರಲ್ಲಿ ಸನ್ನಿ ಲಿಯೋನ್ ಭಾಗವಹಿಸಲಿದ್ದಾರೆ ಎಂದು ತಿಳಿಯುತ್ತಿದ್ದಂತೆಯೇ ರಾಜ್ಯದ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸುವ ಮೂಲಕ ವಿರೋಧ ವ್ಯಕ್ತಪಡಿಸಿದ್ದವು. ಇದಕ್ಕೆ ಸ್ಪಂದಿಸಿದ ಗೃಹ ಸಚಿವ ರಾಮಲಿಂಗಾರೆಡ್ಡಿ ಅವರು ಸನ್ನಿ ಆಗಮನವನ್ನು ರದ್ದುಪಡಿಸುವಂತೆಯೂ, ಕರ್ನಾಟಕದ ಕಲಾವಿದರನ್ನು ಬಳಸಿ ಕಾರ್ಯಕ್ರಮ ನಡೆಸುವಂತೆಯೂ ಆದೇಶ ನೀಡಿದ್ದರು.
ಆದರೆ, ಈಗಾಗಲೇ ಕಾರ್ಯಕ್ರಮದ ಪ್ರಚಾರ ಹಾಗು ಟಿಕೆಟ್ಗಳು ಮಾರಾಟವಾಗಿದ್ದ ಹಿನ್ನೆಲೆಯಲ್ಲಿ ಕಾರ್ಯಕ್ರಮದ ಆಯೋಜಕರು ಸರ್ಕಾರದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಬೆನ್ನಲ್ಲೇ ಸನ್ನಿ ತಾವೇ ಬೆಂಗಳೂರಿಗೆ ಬರುವುದಿಲ್ಲ ಎಂದು ಹೇಳುವ ಮೂಲಕ ನಿರ್ಧಾರ ತಿಳಿಸಿದ್ದಾರೆ.