ಬೆಂಗಳೂರು: ನಾನಿನ್ನೂ ರಾಜೀನಾಮೆ ಕೊಟ್ಟಿಲ್ಲ, ಅತೃಪ್ತರ ಪಟ್ಟಿಯಲ್ಲೂ ನಾನಿಲ್ಲ, ಮಾಧ್ಯಮದವರೇ ಹಾಗೆಲ್ಲಾ ಬಿಂಬಿಸಿದ್ದಾರೆ ಎಂದು ಜಯನಗರ ಶಾಸಕಿ ಸೌಮ್ಯರೆಡ್ಡಿ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನಿನ್ನೂ ಶಾಸಕಿಯಾಗಿಯೇ ಇದ್ದೇನೆ, ಸಿಎಲ್‌ಪಿ ಸಭೆಗೂ ಹೋಗಿದ್ದೆ. ನಾಳೆ ಕಲಾಪಕ್ಕೂ ಹೋಗುತ್ತೇನೆ. ಕ್ಷೇತ್ರದಲ್ಲಿ ಆಗಬೇಕಾದ ಎಲ್ಲಾ ಅಭಿವೃದ್ಧಿ ಕಾರ್ಯಗಳೂ ನಡೆದುಕೊಂಡು ಹೋಗುತ್ತಿವೆ. ಯಾವುದಕ್ಕೂ ಅಡ್ಡಿಯಾಗಿಲ್ಲ. ಮೈತ್ರಿ ಸರ್ಕಾರದಿಂದ ಬೇಸರವಾಗಿದೆ. ಆದರೆ ಇನ್ನೂ ರಾಜೀನಾಮೆ ನೀಡುವ ನಿರ್ಧಾರ ಕೈಗೊಂಡಿಲ್ಲ ಎಂದು ಹೇಳಿದ್ದಾರೆ.


ರಾಮಲಿಂಗಾರೆಡ್ಡಿ ಅವರ ರಾಜೀನಾಮೆಗೆ ಕಾರಣವೇನು ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, "ನನ್ನ ತಂದೆ ರಾಮಲಿಂಗಾ ರೆಡ್ಡಿ ಅವರಿಗೆ ಬಹಳ ನೋವು ಮತ್ತು ಬೇಸರವಾಗಿದೆ. ಹಾಗಾಗಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಆದರೆ ಯಾವ ಕಾರಣಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಪಕ್ಷದಲ್ಲಿ ಕೆಲವೊಂದು ಆತಂರಿಕ ಅಸಮಾಧಾನಗಳಿವೆ. ಅದನ್ನು ಮಾಧ್ಯಮದ ಮುಂದೆ ಹೇಳುವಂತಹ ಸಂದರ್ಭ ಇನ್ನೂ ಬಂದಿಲ್ಲ ಎಂದು ಸೌಮ್ಯ ರೆಡ್ಡಿ ಹೇಳಿದರು.


ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಭೇಟಿ ಬಗ್ಗೆ ಮಾತನಾಡಿದ ಸೌಮ್ಯ ರೆಡ್ಡಿ, ನಾನು ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಘಟಕದ ಕಾರ್ಯದರ್ಶಿಯಾಗಿದ್ದೇನೆ. ಹೀಗಾಗಿ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ್ದೆ. ರಾಜ್ಯದ ಪರಿಸ್ಥಿತಿ ಬಗ್ಗೆ ಪ್ರಸ್ತಾಪಿಸಿದ ಸೋನಿಯಾ ಗಾಂಧಿ ಅವರು, ರಾಜ್ಯದ ರಾಜಕೀಯ ಬೆಳವಣಿಗೆಯಿಂದಾಗಿ ಕಾಂಗ್ರೆಸ್ ಪಕ್ಷ ಸಂಕಷ್ಟದಲ್ಲಿದೆ. ಪಕ್ಷವನ್ನು ಉಳಿಸಿಕೊಳ್ಳಿ ಎಂದು ಹೇಳಿದ್ದಾಗಿ ತಿಳಿಸಿದರು.