ತಾತನ ಸೋಲಿನಿಂದ ನೋವಾಗಿದೆ; ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ: ಪ್ರಜ್ವಲ್ ರೇವಣ್ಣ
ನಮ್ಮ ತಾತ ದೇವೇಗೌಡರು ಸೋತಿರುವುದು ನನಗೆ ಬಹಳ ನೋವಾಗಿದೆ. ಇಡೀ ಕುಟುಂಬವೇ ಬೇಸರದಲ್ಲಿರುವಾಗ ನಂಗೆ ಗೆಲುವನ್ನು ಸಂಭ್ರಮಿಸಲು ಇಷ್ಟವಿಲ್ಲ ಎಂದು ಪ್ರಜ್ವಲ್ ರೇವಣ್ಣ ಹೇಳಿದ್ದಾರೆ.
ಹಾಸನ: ಮೊಮ್ಮಗನ ಮೇಲಿನ ಮಮಕಾರದಿಂದಾಗಿ ತಮ್ಮ ಭದ್ರಕೋಟೆ ಹಾಸನ ಕ್ಷೇತ್ರವನ್ನು ಪ್ರಜ್ವಲ್ ರೇವಣ್ಣ ಅವರಿಗೆ ಬಿಟ್ಟುಕೊಟ್ಟ ತುಮಕೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಮಾಜಿ ಪ್ರಧಾನಿ ಹೆಚ್.ಡಿದೇವೇಗೌಡರು ಸೋಲನುಭವಿಸಿದ ಬೆನ್ನಲ್ಲೇ ಹಾಸಕ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದ ಪ್ರಜ್ವಲ್ ರೇವಣ್ಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮ ತಾತ ದೇವೇಗೌಡರು ಸೋತಿರುವುದು ನನಗೆ ಬಹಳ ನೋವಾಗಿದೆ. ಇಡೀ ಕುಟುಂಬವೇ ಬೇಸರದಲ್ಲಿರುವಾಗ ನಂಗೆ ಗೆಲುವನ್ನು ಸಂಭ್ರಮಿಸಲು ಇಷ್ಟವಿಲ್ಲ. ಹೋರಾಟವೇ ಜೀವನ ಎಂದುಕೊಂಡಿದ್ದ ಗೌಡರಿಗೆ ಸೋಲಾಗಿದೆ. ಹಾಗಾಗಿ ನಾನು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದು, ಮತ್ತೆ ದೇವೇಗೌಡರಿಗೆ ಶಕ್ತಿ ತುಂಬಲು ಆ ಸ್ಥಾನವನ್ನು ಅವರಿಗೆ ಬಿಟ್ಟುಕೊಡುತ್ತೇನೆ. ಕ್ಷೇತ್ರದ ಜನತೆ ತಪ್ಪಾಗಿ ಭಾವಿಸದೆ ನನ್ನ ನಿರ್ಧಾರವನ್ನು ಗೌರವಿಸಿ ದೇವೇಗೌಡರನ್ನು ಬೆಂಬಲಿಸಿ. ಇದು ನನ್ನ ಮನಸ್ಸಿನ ನಿರ್ಧಾರವೇ ಹೊತರು ಯಾರಿದಿಗೂ ಚರ್ಚಿಸಿ ತೆಗೆದುಕೊಂಡಿಲ್ಲ ಎಂದಿದ್ದಾರೆ.
ಹಾಸನ ಲೋಕಸಭೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಎ.ಮಂಜು ವಿರುದ್ಧ 1.40 ಲಕ್ಷ ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ. ಮತ್ತೊಂದೆಡೆ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜ್ ಅವರು 5,96,127ಮತಗಳನ್ನು ಗಳಿಸಿ ಜಯ ಸಾಧಿಸಿದರೆ, ಹೆಚ್.ಡಿ.ದೇವೇಗೌಡರು 5,82,788 ಮತಗಳನ್ನು ಗಳಿಸಿ 13,339 ಮತಗಳ ಅಂತರದಿಂದ ಸೋಲನುಭವಿಸಿದ್ದಾರೆ.