ಬೆಂಗಳೂರು: ಸಂಘಟನೆ ವಿಚಾರದಲ್ಲಿ ಮಂಜುನಾಥ್ ಅವರನ್ನು ಹತ್ತಿರದಿಂದ ಬಲ್ಲೆ. ಅವರ ಸಂಘಟನೆ ನೋಡಿ ಹಿರಿಯ ನಾಯಕರ ಜತೆ ಚರ್ಚೆ ಮಾಡಿ ಶ್ರೀಮತಿ ಸೋನಿಯಾ ಗಾಂಧಿ ಹಾಗೂ ರಾಷ್ಟ್ರ ಮಟ್ಟದ ನಾಯಕರ ಗಮನಕ್ಕೆ ತಂದು ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದು ಅವರು ಅಸಂಘಟಿತ ಕಾರ್ಮಿಕ ಘಟಕದ ನೂತನ ಅಧ್ಯಕ್ಷ ಜಿ.ಎಸ್ ಮಂಜುನಾಥ್ ಅವರ ಪದಗ್ರಹಣ ಕಾರ್ಯಕ್ರಮದಲ್ಲಿ ಅಭಿಪ್ರಾಯ ಪಟ್ಟಿದ್ದಾರೆ.


COMMERCIAL BREAK
SCROLL TO CONTINUE READING

ಡಿ.ಕೆ.ಶಿವಕುಮಾರ್ ಭಾಷಣದ ಮುಖ್ಯಾಂಶಗಳು:


ಇಲ್ಲಿರುವವರು ನಾವು ಅಸಂಘಟಿತ ಕಾರ್ಮಿಕರು, ನಮ್ಮ ವೃತ್ತಿ ಕಡಿಮೆ, ನಮ್ಮ ಪರಿಸ್ಥಿತಿ ಏನು ಎಂದು ದುಗುಡಕ್ಕೆ ಒಳಗಾಗಬೇಡಿ.ಡಿವಿಜಿ ಅವರು ಹೇಳಿದಂತೆ ಹುಲ್ಲುಕಡ್ಡಿ ಕೂಡ ಒಟ್ಟಾಗಿ ಸೇರಿದರೆ ಹಗ್ಗವಾಗುತ್ತದೆ. ಆಗ ಆನೆಯನ್ನೂ ಎಳೆಯಬಹುದು. ನಮ್ಮ ಕಡೆ ಸಗಣಿಗೆ ಹುಲ್ಲು ಹಾಕಿದರೆ ಅದನ್ನು ಗಣೇಶ ಎಂದು ಪೂಜೆ ಮಾಡುತ್ತೇವೆ.


ನಾನು ಇಲ್ಲಿ ನಾಯಕನಾಗಿ ನಿಂತಿದ್ದರೂ ನನಗೆ ಈ ಕೋಟು, ಬಟ್ಟೆ, ಕ್ಷೌರ, ಚಪ್ಪಲಿ ಬೇಕು. ನಾನು ಹೀಗೆ ಸಿಂಗಾರ ಆಗಲು ಕಾರಣರು ಯಾರು? ಹುಟ್ಟುವಾಗ ನಮ್ಮ ಬಳಿ ಏನೂ ಇರುವುದಿಲ್ಲ. ಹುಟ್ಟಿದಾಗ ಮಗು ಅಳುತ್ತಿದ್ದರೆ, ಬೇರೆಯವರು ನಗುತ್ತಿರುತ್ತಾರೆ.ವ್ಯಕ್ತಿ ಸತ್ತಾಗ ಸಮಾಜ ಅಳುತ್ತಿರುತ್ತದೆ.ಈ ಮಧ್ಯೆ ಆ ವ್ಯಕ್ತಿ ಸಾಧನೆ ಏನು ಎಂದು ನಾವೆಲ್ಲ ಮೆಲುಕು ಹಾಕುತ್ತಿರುತ್ತೇವೆ.


ಇದನ್ನೂ ಓದಿ: ವಿದ್ಯಾರ್ಥಿಗಳಲ್ಲಿ ಗೊಂದಲ ಸೃಷ್ಟಿಸಿದ ಕರ್ನಾಟಕ ಕಾನೂನು ವಿವಿಯ ಅಧಿಸೂಚನೆಗಳು..!


ದೊಡ್ಡ ಶ್ರೀಮಂತರು ಎಂದರೆ ಅದಾನಿ, ಅಂಬಾನಿ ಎನ್ನುತ್ತಾರೆ. ಅವರಿಗೆ ನಮ್ಮ ಸಂವಿಧಾನದಲ್ಲಿ 1 ಮತ ಹಾಕುವ ಹಕ್ಕು ನೀಡಲಾಗಿದೆ. ಪೇಪರ್ ಹಾಕುವುದು, ಬಟ್ಟೆ ಹೊಲಿಯುವುದು, ಒಗೆಯುವುದು ಅಪಮಾನದ ಕೆಲಸವಲ್ಲ. ಅದು ಸ್ವಾಭಿಮಾನದ ಬದುಕು.


ಕರ್ನಾಟಕ ಕಾನೂನು ವಿವಿ ಪರೀಕ್ಷೆಗಳಿಗೆ ಮಧ್ಯಂತರ ತಡೆಯಾಜ್ಞೆ ನೀಡಿದ ಹೈಕೋರ್ಟ್


ಈ ಸರಕಾರದ ಕೈಯಲ್ಲಿ 5 ಸಾವಿರ ರು. ಪರಿಹಾರ ಕೊಡಲು ಆಗಲಿಲ್ಲ ಎಂದರೆ ಆ ಸರ್ಕಾರವನ್ನು ತೆಗೆಯಬೇಕು. ಇದಕ್ಕಾಗಿ ನೀವು ತಯಾರಾಗಬೇಕು.ಅಸಂಘಟಿತ ಕಾರ್ಮಿಕರ ಪ್ರತ್ಯೇಕ ಘಟಕ ಸ್ಥಾಪಿಸಲು ಅವಕಾಶ ಇದೆ.ನೀವು ಮನೆ, ಮನೆಗೂ ಹೋಗಿ ಮತದಾರರ ಜತೆ ಸಂಪರ್ಕ ಇಟ್ಟುಕೊಳ್ಳಬೇಕು. ಜನರ ಕಷ್ಟಕ್ಕೆ ಸ್ಪಂದಿಸಿ, ಜನರ ವಿಶ್ವಾಸ ಗೆಲ್ಲಬೇಕು.


'ನೀನು ನಿನ್ನನ್ನು ಗೆಲ್ಲಬೇಕಾದರೆ ನಿನ್ನ ಬುದ್ಧಿವಂತಿಕೆ ಉಪಯೋಗಿಸು, ಬೇರೆಯವರನ್ನು ಗೆಲ್ಲಬೇಕಾದರೆ ಹೃದಯವಂತಿಕೆ ಬಳಸು' ಎಂದು ಗಾಂಧೀಜಿ ಅವರು ಹೇಳಿದ್ದಾರೆ. ನೀವು ಅಸಂಘಟಿತ ಕಾರ್ಮಿಕರನ್ನು ತಲುಪಿ, ಅವರ ಬೆನ್ನಿಗೆ ನಿಂತು ಅವರ ವಿಶ್ವಾಸ ಗೆಲ್ಲಿ. ಇದು ನಿಮಗೆ ಸಿಕ್ಕಿರುವ ದೊಡ್ಡ ಅವಕಾಶ.ದೊಡ್ಡ ಸೈನ್ಯ ಕಟ್ಟಬಹುದು.


ನೀವು ಅಧಿಕಾರಕ್ಕಾಗಿ ಯಾರ ಮನೆ ಬಾಗಿಲಿಗೂ ಹೋಗಬೇಕಾಗಿಲ್ಲ. ನಿಮ್ಮ ಸಂಘಟನೆ ತೋರಿಸಿ, ನಿಮ್ಮ ಮನೆ ಬಾಗಿಲಿಗೆ ಅಧಿಕಾರ ಬರುತ್ತದೆ. ನಿಮಗೆ ಸೂಕ್ತ ಸ್ಥಾನ- ಮಾನ ನಾವು ಕೊಡುತ್ತೇವೆ.


ನಾನು ಅಧಿಕಾರ ವಹಿಸಿಕೊಂಡಾಗ, 'ಜತೆಗೂಡುವುದು ಆರಂಭ, ಜತೆಗೂಡಿ ಯೋಚಿಸುವುದು ಪ್ರಗತಿ, ಜತೆಗೂಡಿ ಕೆಲಸ ಮಾಡುವುದು ಯಶಸ್ಸು' ಎಂದು ಹೇಳಿದ್ದೆ. ನಿಮಗೆ ಸಹನೆ ಇದ್ದರೆ ಸಕಲವು ನಿಮ್ಮದೆ. ವಿನಯ ಇದ್ದರೆ ವಿಜಯ ನಿಮ್ಮದೆ. ನೀವೆಲ್ಲ ಒಗ್ಗಟ್ಟಿನಿಂದ ಕೆಲಸ ಮಾಡಬೇಕು.ಕೋವಿಡ್ ಸಮಯದಲ್ಲಿ ನಾನು ನಿಮ್ಮನ್ನು ಅಸಂಘಟಿತ ಕಾರ್ಮಿಕರು ಎಂದು ಕರೆಯಲಿಲ್ಲ. ದೇಶ ನಿರ್ಮಾಣ ಮಾಡುವವರು ಎಂದೆ.


ಸರ್ಕಾರ ಸುಲಿಗೆ ಮಾಡಲು ನಿಂತಾಗ ನಾವು 1 ಕೋಟಿ ಚೆಕ್ ಕೊಟ್ಟು ಸರ್ಕಾರದ ಮೇಲೆ ಒತ್ತಡ ಹಾಕಿದೆವು. ಸರ್ಕಾರ ಒತ್ತಡಕ್ಕೆ ಮಣಿದು ರಾಜ್ಯದ ಎಲ್ಲ ಕಾರ್ಮಿಕರಿಗೆ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಿತು.


ನಾನು ಚಪ್ಪಲಿ ಹೊಲಿಯುವವನು, ಕುಂಬಾರ, ಚಾಲಕ ಎಂಬ ಕೀಳರಿಮೆ, ಅಳಕು ಬೇಡ. ನಾನು ಒಂದು ಕಡೆಯಿಂದ ಮನೆಗೆ ಹೋಗಿ ತಲುಪಬೇಕಾದರೆ ಚಾಲಕ ಮುಖ್ಯ. ನಾನು ಚೆನ್ನಾಗಿ ಕಾಣಲು ಬಟ್ಟೆ ಹೊಲಿಯುವವರು ಮುಖ್ಯ. ಅವರನ್ನು ನಾವು ಕೀಳಾಗಿ ಕಾಣಬಾರದು. 


ನಮಗೆ ಮನುಷ್ಯತ್ವ, ಮಾನವೀಯತೆ ಹಾಗೂ ವಿಶ್ವಮಾನವ ತತ್ವ ಬೇಕು.ನೀವೆಲ್ಲ ಪಕ್ಷದ ಆಧಾರ ಸ್ತಂಭವಾಗಬೇಕು ಎಂದು ನಮ್ರತೆಯಿಂದ ಮನವಿ ಮಾಡುತ್ತೇನೆ.ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರವಲ್ಲ,ನಿಮ್ಮ ಕಾಣಿಕೆ ಮುಖ್ಯ. ಎಲ್ಲ ವರ್ಗದ ಜನರ ಪ್ರೀತಿ ವಿಶ್ವಾಸ ನಮಗೆ ಬೇಕು.  


ನಾನು ಪದಗ್ರಹಣ ಮಾಡುವಾಗ ದೀಪವನ್ನು ಸೇವಾದಳ, ಮಹಿಳಾ ಕಾಂಗ್ರೆಸ್, ಯೂಥ್ ಕಾಂಗ್ರೆಸ್, ವಿದ್ಯಾರ್ಥಿ ಘಟಕ - ಹೀಗೆ ಎಲ್ಲ ಘಟಕಗಳ ನಾಯಕರಿಂದ ಹಚ್ಚಿಸಿದ್ದೇನೆ. ಈ ಜ್ಯೋತಿ ಕೇವಲ ನನ್ನಿಂದ ಮಾತ್ರವಲ್ಲ, ಕಾಂಗ್ರೆಸ್ ಪಕ್ಷದ ಎಲ್ಲ ಘಟಕ, ವರ್ಗದ ಜನರಿಂದ ಬೆಳಗುತ್ತಿದೆ. ಕೆಪಿಸಿಸಿ ಪದಾಧಿಕಾರಿಗಳು ಎಷ್ಟು ಮುಖ್ಯವೋ ಹಾಗೆ ಎಲ್ಲ ಘಟಕಗಳೂ ಮುಖ್ಯ.


ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲ ವರ್ಗದವರು ಅಧಿಕಾರಕ್ಕೆ ಬಂದಂತೆ. 


ನೀವೆಲ್ಲಾ ನ‌.14 ರಂದು ಐತಿಹಾಸಿಕ ಸದಸ್ಯತ್ವ ನೋಂದಣಿ ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು. ನಾವು 75 ನೇ ಸ್ವಾತಂತ್ರ್ಯ ದಿನ ಆಚರಣೆ ಮಾಡುತ್ತಿದ್ದೇವೆ. ಕಾಂಗ್ರೆಸ್ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದೆ. ಕಾಂಗ್ರೆಸ್ ಧ್ವಜ ದೇಶದ ಧ್ವಜ ವಾಗಿದೆ. ಇದನ್ನು ನೀವು ಹಾಕಿಕೊಳ್ಳಬಹುದೇ ಹೊರತು, ಬಿಜೆಪಿ ಅಥವಾ ಬೇರೆ ಯಾವುದೇ ಪಕ್ಷದವರಿಂದಲ್ಲ.


ಒಬ್ಬ ಕಾರ್ಯಕರ್ತ, ಮುಖಂಡ ಸತ್ತರೆ ಈ ಧ್ವಜ ಹಾಕಿಕೊಳ್ಳಬಹುದು. ಈ ಬಾವುಟ ನಿಮ್ಮ ಮನೆ ಮೇಲೆ ಹಾಕಿಕೊಳ್ಳಬಹುದು. ನೀವು ಹೆದರಬೇಡಿ, ಸ್ವಾಭಿಮಾನದಿಂದ ಬದುಕಿ. ನಾಯಕರಾಗಿ, ಸಂಘಟನೆ ಮಾಡಿ. ಯಾರ ಹಣೆಯಲ್ಲಿ ಏನು ಬರೆದಿದೆಯೋ ಗೊತ್ತಿಲ್ಲ.


ಹುಟ್ಟುತ್ತಲೇ ಎಲ್ಲರೂ ದೊಡ್ಡ ನಾಯಕರಾಗಿಲ್ಲ. ಕೆಳಮಟ್ಟದಿಂದ ಬೆಳೆದು ಬಂದಿದ್ದೇವೆ.ನಾನು ಬ್ಲಾಕ್ ಅಧ್ಯಕ್ಷ,ವಿದ್ಯಾರ್ಥಿ ಘಟಕದ ಅಧ್ಯಕ್ಷನಾಗಿದ್ದೆ.ಈಗ ರಾಜ್ಯಾಧ್ಯಕ್ಷ. 7 ಬಾರಿ ಶಾಸಕನಾಗಿದ್ದೆ. ಮುನಿಯಪ್ಪ,ಧ್ರುವನಾರಾಯಣ, ಚಂದ್ರಪ್ಪ ಎಲ್ಲರೂ ಕೆಳಮಟ್ಟದಿಂದ ಬೆಳೆದು ಬಂದವರಾಗಿದ್ದಾರೆ ಎಂದು ಹೇಳಿದರು 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ