ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚಿಗೆ ವ್ಯಾಪಕವಾಗಿ ಹರಡುತ್ತಿರುವ ಕಿಕಿ ಚಾಲೆಂಜ್ ಎಂಬ ಅಪಾಯಕಾರಿ ಸವಾಲನ್ನು ಸ್ವೀಕರಿಸದಂತೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದರೂ, ಸಾರ್ವಜನಿಕರೂ ಅದರಲ್ಲಿಯೂ ಯುವಜನತೆ ಕಿಕಿ ಚಾಲೆಂಜ್ ಗೆ ಹೆಚ್ಚಾಗಿ ಆಕರ್ಷಿತರಾಗುತ್ತಿರುವುದರ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಪೊಲೀಸರು ರೋಡಲ್ಲಿ ಕಿಕಿ ಡಾನ್ಸ್ ಮಾಡಿದ್ರೆ, ಜೈಲಲ್ಲಿ ಖಾಕಿ ಡಾನ್ಸ್ ಮಾಡಬೇಕಾಗುತ್ತೆ ಎಂಬ ಎಚ್ಚರಿಕೆಯ ಸಂದೇಶ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಈ ಬಗ್ಗೆ ಸಾಮಾಜಿಕ ಜಾಲತಾಣದ ಮೂಲಕ ಸಾರ್ವಜನಿಕರಲ್ಲಿ ವಿನಂತಿ ಮಾಡಿರುವ ಬೆಂಗಳೂರು ನಗರ ಪೊಲೀಸರು, ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ #KIKICHALLENGE ಎಂಬ ಅಪಾಯಕಾರಿ ಸವಾಲೊಂದು ವ್ಯಾಪಕವಾಗಿ ಹರಡುತ್ತಿದ್ದು, ಈ ಸವಾಲಿನ ಅನುಸಾರ ರಸ್ತೆಗಳಲ್ಲಿ ಚಲಿಸುತ್ತಿರುವ ಕಾರಿನಿಂದ ಜಿಗಿದು ಕಾರಿನ ವೇಗಕ್ಕೆ ಸಮಾನವಾಗಿ 'Kiki' ಹಾಡಿಗೆ ನೃತ್ಯ ಮಾಡುವಂತಹ ಅಪಾಯಕಾರಿ ಸವಾಲಿನೆಡೆಗೆ ಸಾರ್ವಜನಿಕರು ಅದರಲ್ಲಿಯೂ ಯುವಜನತೆ ಹೆಚ್ಚಾಗಿ ಆಕರ್ಷಿತರಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.


#KIKICHALLENGE ಎಂಬುದು ಅತ್ಯಂತ ಅಪಾಯಕಾರಿ ಕ್ರಿಯೆಯಾಗಿದ್ದು, ಇದರಿಂದ ಪ್ರಾಣಾಪಾಯ, ಅಪಘಾತ, ಸುಗಮ ಸಂಚಾರಕ್ಕೆ ಅನಾನುಕೂಲ, ಸಾರ್ವಜನಿಕರಿಗೆ ತೊಂದರೆ ಹಾಗೂ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಸೇರಿದಂತೆ ಹಲವು ರೀತಿಯ ತೊಂದರೆಗಳಾಗುವುದರಿಂದ ನಗರದ ಯುವಜನತೆ/ಚಾಲಕರಲ್ಲಿ #KIKICHALLENGE ನ್ನು ಮಾಡದಂತೆ ಹಾಗೂ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸರಿಸದಂತೆ ಬೆಂಗಳೂರು ನಗರ ಪೊಲೀಸರು ಸೂಚಿಸಿದ್ದಾರೆ.


ಸಾರ್ವಜನಿಕ ಹಿತದೃಷ್ಟಿಯಿಂದ ಈ ಅಪಾಯಕಾರಿ #KIKICHALLENGE ಅನ್ನು ವಿರೋಧಿಸುವುದರೊಂದಿಗೆ ಈ ಕ್ರಿಯೆಯಲ್ಲಿ ತೊಡಗುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿರುವ ಬೆಂಗಳೂರು ನಗರ ಪೊಲೀಸರು, ಇಂತಹ ಘಟನೆಗಳು ಸಾರ್ವಜನಿಕವಾಗಿ ಕಂಡುಬಂದಲ್ಲಿ ಸಾರ್ವಜನಿಕರು ಕೂಡಲೇ 100ಕ್ಕೆ ಕರೆ ಮಾಡುವಂತೆ ಅಥವಾ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.