ಬೆಂಗಳೂರು: ಸರ್ಕಾರಿ ಜಮೀನಿನಲ್ಲಿ ಮನೆ ಕಟ್ಟಿಕೊಂಡವರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಸರ್ಕಾರಿ ಜಮೀನಿನಲ್ಲಿ ಅನಧಿಕೃತವಾಗಿ ಕಟ್ಟಿಕೊಂಡಿರುವ ಮನೆಗಳಿಗೆ ಅಕ್ರಮ-ಸಕ್ರಮ ಯೋಜನೆಯಡಿ ಹಕ್ಕುಪತ್ರ ನೀಡಲು ರಾಜ್ಯ ಸರ್ಕಾರ ಮುಂದಾಗಿದ್ದು, 2012ರ ಜ.1ಕ್ಕಿಂತ ಮೊದಲು ಜಮೀನಿನಲ್ಲಿ ಕಟ್ಟಿಕೊಳ್ಳಲಾಗಿರುವ ಬಡವರ ಮನೆಗಳನ್ನು ಸಕ್ರಮಗೊಳಿಸಲು ನಿರ್ಧರಿಸಲಾಗಿದೆ.


COMMERCIAL BREAK
SCROLL TO CONTINUE READING

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಂದಾಯ ಸಚಿವ ಆರ್. ಅಶೋಕ್, ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಅನ್ವಯ ನಗರ ಪ್ರದೇಶಗಳಲ್ಲಿ 94ಸಿ, ಗ್ರಾಮೀಣ ಪ್ರದೇಶಗಳಲ್ಲಿ 94ಸಿಸಿ ಕಲಂಗಳನ್ನು ತಿದ್ದುಪಡಿ ಮಾಡಲಾಗಿದೆ ಎಂದು ತಿಳಿಸಿದರು. ಇದರ ಅನ್ವಯ ಸರ್ಕಾರಿ ಜಮೀನುಗಳಲ್ಲಿ ಅನಧಿಕೃತವಾಗಿ ನಿರ್ಮಿಸಿಕೊಂಡಿರುವ ಮನೆಗಳನ್ನು ಸಕ್ರಮ ಗೊಳಿಸಲಾಗುವುದು. 20X30 ಮತ್ತು 30X40 ಅಡಿ ಅಳತೆಯ ಮನೆಗಳಿಗೆ ಮಾತ್ರ ಇದು ಅನ್ವಯವಾಗಲಿದ್ದು, ರಾಜ್ಯಾದ್ಯಂತ ಈ ಪ್ರಕ್ರಿಯೆ ಆರಂಭವಾಗಲಿದೆ ಎಂದು ತಿಳಿಸಿದರು.


ಈ ಕಾಯ್ದೆ ಅನ್ವಯ ಅರ್ಹ ಫ‌ಲಾನುಭವಿಗಳನ್ನು ಗುರುತಿಸಲು ವೋಟರ್ ಐಡಿ, ಪಡಿತರ ಚೀಟಿ(ಬಿಪಿಎಲ್‌ ಕಾರ್ಡ್‌), ಆಧಾರ್‌ ಕಾರ್ಡ್‌, ಮನೆಗಳಿಗೆ ಪಡೆದಿರುವ ವಿದ್ಯುತ್‌ ಸಂಪರ್ಕ, ನೀರಿನ ಸಂಪರ್ಕ ಮುಂತಾದ ದಾಖಲೆಗಳನ್ನು ಈಗಾಗಲೇ ಪರಿಶೀಲಿಸಿ, ಅರ್ಹರನ್ನು ಮಾತ್ರ ಪರಿಗಣಿಸಲಾಗಿದೆ ಎಂದು ಸಚಿವ ಅಶೋಕ್‌ ಹೇಳಿದ್ದಾರೆ.


20 X 30 ಅಡಿ ವಿಸ್ತೀರ್ಣದ ನಿವೇಶನಗಳಿಗೆ ಹಕ್ಕುಪತ್ರ ನೀಡಲಿದ್ದು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ 2,500 ರೂ., ಸಾಮಾನ್ಯ ವರ್ಗದವರಿಗೆ 5,000 ರೂ. ಶುಲ್ಕ ವಿಧಿಸಲಾಗುವುದು. 30 X 40 ಅಳತೆಯ ನಿವೇಶನದಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ 5,000 ರೂ., ಸಾಮಾನ್ಯ ವರ್ಗದವರಿಗೆ 10,000 ರೂ.ನಿಗದಿ ಮಾಡಲಾಗಿದೆ ಎಂದು ಅವರು ತಿಳಿಸಿದರು.