`ನಾನು ಮಣ್ಣಿಗೆ ಹೋಗುವುದರೊಳಗೆ ಜೆಡಿಎಸ್ನಿಂದ ದಲಿತ ಸಿಎಂ ಮಾಡುವೆ’
ನನಗೆ 5 ವರ್ಷ ಅಧಿಕಾರ ಕೊಡಿ. ನೀವು ನೆನಪಿನಲಿಟ್ಟುಕೊಳ್ಳುವಂತಹ ಕೆಲಸ ಮಾಡುತ್ತೇನೆ. ಯಾವುದೇ ಪಕ್ಷದ ಜೊತೆಗೆ ಮೈತ್ರಿ ಮಾಡಿಕೊಳ್ಳುವ ಹಂಗಿನ ಸರ್ಕಾರ ಖಂಡಿತ ಬೇಡವೆಂದು ಕುಮಾರಸ್ವಾಮಿ ಹೇಳಿದ್ದಾರೆ.
ಮಳವಳ್ಳಿ: ಜೆಡಿಎಸ್ ಪಕ್ಷದಿಂದ ನನ್ನ ಜೀವಿತಾವಧಿಯೊಳಗೆ ದಲಿತರೊಬ್ಬರನ್ನು ಮುಖ್ಯಮಂತ್ರಿ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ.
ಮಳವಳ್ಳಿಯಲ್ಲಿ ಗುರುವಾರ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಈ ಹಿಂದೆ ನಮ್ಮ ಪಕ್ಷ ಹಾಸನ ಜಿಲ್ಲಾ ಪಂಚಾಯಿತಿಗೆ ದಲಿತರೊಬ್ಬರನ್ನು ಅಧ್ಯಕ್ಷರನ್ನಾಗಿ ಮಾಡಿತ್ತು. ಆಮೇಲೆ ಅನೇಕ ದಲಿತ ನಾಯಕರು ಪಕ್ಷದಲ್ಲಿ, ಸರ್ಕಾರಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದರು’ ಎಂದು ಹೇಳಿದರು.
ಇದನ್ನೂ ಓದಿ: "ಸಂತೋಷ್ ಆತ್ಮಹತ್ಯೆ ಹಿಂದಿನ ಕಿಂಗ್‌ಪಿನ್ ಡಿಕೆಶಿ ಏಕೆ ಆಗಿರಬಾರದು?"
ಆ ಸಂದರ್ಭದಲ್ಲಿ ನನ್ನ ಸಹೋದರ ರೇವಣ್ಣ ಅವರೂ ಮೊದಲ ಬಾರಿಗೆ ಜಿಲ್ಲಾ ಪಂಚಾಯ್ತಿಗೆ ಗೆದ್ದು ಬಂದಿದ್ದರು. ಆದರೆ, ಎಚ್.ಡಿ.ದೇವೇಗೌಡರು ಎಂಎ ಪದವೀಧರನಾಗಿದ್ದ ದಲಿತ ಅಭ್ಯರ್ಥಿಯನ್ನು ಜಿಲ್ಲಾ ಪಂಚಾಯ್ತಿ ಅಧ್ಯಕ್ಷರನ್ನಾಗಿ ಮಾಡಿದ್ದರು. ಮುಂದಿನ ದಿನಗಳಲ್ಲಿ ಜಾತ್ಯತೀತ ಜನತಾದಳದಿಂದ ದಲಿತ ನಾಯಕರೊಬ್ಬರನ್ನು ಮುಖ್ಯಮಂತ್ರಿ ಮಾಡುವ ಅವಕಾಶ ಬಂದೇ ಬರುತ್ತದೆ. ನಾನು ಭೂಮಿಯಿಂದ ಹೋಗುವ ಮುನ್ನ ದಲಿತ ಮುಖ್ಯಮಂತ್ರಿಯನ್ನು ಮಾಡೇ ಮಾಡುತ್ತೇನೆ. ಈ ನಿರೀಕ್ಷೆಯನ್ನು ಜೆಡಿಎಸ್ ಸಾಕಾರಗೊಳಿಸುತ್ತದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ನಾನು ಮೊದಲಿನಿಂದಲೂ ಜಾತ್ಯತೀತ, ಧರ್ಮಾತೀತವಾಗಿ ಕೆಲಸ ಮಾಡಿಕೊಂಡು ಬರುತ್ತಿದ್ದೇನೆ. ದಿನನಿತ್ಯವೂ ಸಾವಿರಾರು ಜನರು ರಾಜ್ಯದ ಮೂಲೆ ಮೂಲೆಗಳಿಂದಲೂ ಬಂದು ನನ್ನನ್ನು ಭೇಟಿ ಮಾಡುತ್ತಾರೆ. ಅವರನ್ನೆಲ್ಲ ನೀವು ಯಾವ ಜಾತಿ? ಯಾವ ಧರ್ಮ? ಎಂದು ನಾನು ಎಂದೂ ಕೇಳಿಲ್ಲ. ನಿಮ್ಮ ಕಷ್ಟವೇನು? ಎಂದಷ್ಟೇ ಕೇಳುತ್ತೇನೆ. ಇದು ನಾನು ಹಿಂದಿನಿಂದಲೂ ಪಾಲಿಸಿಕೊಂಡು ಬಂದಿರುವ ಧರ್ಮ ಎಂದು ಎಚ್‍ಡಿಕೆ ಹೇಳಿದರು.
ಇದನ್ನೂ ಓದಿ: ಡಿಕೆ ಶಿವಕುಮಾರ್- ಸುರ್ಜೇವಾಲ ಪೊಲೀಸರ ವಶಕ್ಕೆ!
ನನಗೆ 5 ವರ್ಷ ಅಧಿಕಾರ ಕೊಡಿ. ನೀವು ನೆನಪಿನಲಿಟ್ಟುಕೊಳ್ಳುವಂತಹ ಕೆಲಸ ಮಾಡುತ್ತೇನೆ. ಯಾವುದೇ ಪಕ್ಷದ ಜೊತೆಗೆ ಮೈತ್ರಿ ಮಾಡಿಕೊಳ್ಳುವ ಹಂಗಿನ ಸರ್ಕಾರ ಖಂಡಿತ ಬೇಡ. ರಾಜ್ಯವು ಕಳೆದ 75 ವರ್ಷಗಳಲ್ಲಿ ನೀರಾವರಿ ವಿಷಯಕ್ಕೆ ಸಂಬಂಧಿಸಿದಂತೆ ಅನ್ಯಾಯಕ್ಕೆ ತುತ್ತಾಗಿದೆ. ನನಗೆ 5 ವರ್ಷ ಅಧಿಕಾರ ಕೊಟ್ಟು ನೋಡಿ, ಆ ಅನ್ಯಾಯವನ್ನು ಐದೇ ವರ್ಷಗಳಲ್ಲಿ ಸರಿ ಮಾಡುತ್ತೇನೆ. ಇಲ್ಲವಾದರೆ ನಮ್ಮ ಪಕ್ಷವನ್ನೇ ವಿಸರ್ಜನೆ ಮಾಡುತ್ತೇನೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಳವಳ್ಳಿ ಶಾಸಕ ಡಾ.ಅನ್ನದಾನಿ, ಮಂಡ್ಯ ಜಿಲ್ಲೆಯ ಪಕ್ಷದ ಮುಖಂಡರು, ಅಸಂಖ್ಯಾತ ಕಾರ್ಯಕರ್ತರು ಹಾಜರಿದ್ದರು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.