ನವದೆಹಲಿ: ಬಿ.ಎಸ್. ಯಡಿಯೂರಪ್ಪ ಅವರನ್ನು ಮತ್ತೆ ಮುಖ್ಯಮಂತ್ರಿ ಮಾಡಲೇಬೇಕೆಂದು ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರದ ವಿರುದ್ಧ ತಿಂಗಳಾನುಗಟ್ಟಲೆ ಬಂಡೆದ್ದಿದ್ದು ಮಂತ್ರಿ ಮತ್ತು ಶಾಸಕ ಸ್ಥಾನ ತೊರೆದು ಛಲ ಬಿಡದ ವಿಕ್ರಮನಂತೆ ಶ್ರಮಿಸಿದ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಈಗ ಅದೇ ಯಡಿಯೂರಪ್ಪ ಅವರಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆಯೇ? ರಮೇಶ್ ಜಾರಕಿಹೊಳಿ ಅವರ ನಡೆಯಿಂದ ಇಂಥದೊಂದು ಅನುಮಾನ ಮೂಡಿದೆ.


COMMERCIAL BREAK
SCROLL TO CONTINUE READING

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS Yediyurappa) ರಾಜ್ಯ ಸಚಿವ ಸಂಪುಟ ಪುನರ್ರಚನೆ ಬಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡ (JP Nadda) ಅವರೊಂದಿಗೆ ಚರ್ಚಿಸಲು ನವೆಂಬರ್ 18ರಂದು ದೆಹಲಿಗೆ ಆಗಮಿಸಿದ್ದರು. ಆ ಸಂದರ್ಭದಲ್ಲಿ ಸಚಿವ ರಮೇಶ್ ಜಾರಕಿಹೊಳಿ ಕೂಡ ದೆಹಲಿಯಲ್ಲಿದ್ದರು. ಮುಖ್ಯಮಂತ್ರಿ ದೆಹಲಿಯಲ್ಲಿದ್ದಾಗ ಸಚಿವರು ಸಾಮಾನ್ಯವಾಗಿ ಏನೂ ಕೆಲಸ ಇಲ್ಲದಿದ್ದರೂ ಸೌಜನ್ಯದ ದೃಷ್ಟಿಯಿಂದ ಹೋಗಿ ಭೇಟಿ ಮಾಡುತ್ತಾರೆ. ಆದರೆ ರಮೇಶ್ ಜಾರಕಿಹೊಳಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಲೇ ಇಲ್ಲ. ಸಹಜವಾಗಿ ಇದು ಚರ್ಚೆಗೆ ಅವಕಾಶ ಮಾಡಿಕೊಟ್ಟಿತ್ತು.


ಜನ ಕಷ್ಟದಲ್ಲಿರುವಾಗ ಈ ನಿಗಮ-ಪ್ರಾಧಿಕಾರಗಳಿಗೆ ಹಣ ಎಲ್ಲಿಂದ ತರುತ್ತೀರಿ?: ಸಿದ್ದರಾಮಯ್ಯ


ಮುಖ್ಯಮಂತ್ರಿ ದೆಹಲಿಯಲ್ಲಿದ್ದರೂ ಭೇಟಿ ಮಾಡದ ರಮೇಶ್ ಜಾರಕಿಹೊಳಿ (Ramesh Jarakiholi) ಪಶ್ಚಿಮ ಬಂಗಾಳ ಪ್ರವಾಸದಲ್ಲಿದ್ದ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ (BL Santosh) ದೆಹಲಿಗೆ ಬರುವವರೆಗೆ ಮೂರು ದಿನ ಕಾದು ಗುರುವಾರ ಭೇಟಿ ಮಾಡಿದ್ದಾರೆ. ಇದರಿಂದ ರಮೇಶ್ ಜಾರಕಿಹೊಳಿ ಈಗ ಅದೇ ಯಡಿಯೂರಪ್ಪ ಅವರಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆಯೇ? ಎಂಬ ಅನುಮಾನವೂ ಹುಟ್ಟಿಕೊಂಡಿದೆ.


ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುತ್ತಾರೆ ಎಂಬ ಚರ್ಚೆಯೂ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಮುಖಾಂತರವೇ ಬಿಜೆಪಿಗೆ ಬಂದಿದ್ದ ರಮೇಶ್ ಜಾರಕಿಹೊಳಿ ಮುನ್ನೆಚ್ಚರಿಕೆಯಿಂದ ಈಗಲೇ ಬಣ ಬದಲಿಸುತ್ತಿದ್ದಾರಾ? ಬಿ.ಎಲ್. ಸಂತೋಷ್ ಪಾಳೆಯ ಸೇರುತ್ತಿದ್ದಾರಾ? ಎಂಬ ಪ್ರಶ್ನೆಗಳು ಉದ್ಭವಿಸತೊಡಗಿವೆ‌.


ಸ್ಥಳೀಯ ಸಂಸ್ಥೆ ಮೀಸಲಾತಿ ರದ್ದು: ಅಧ್ಯಕ್ಷ - ಉಪಾಧ್ಯಕ್ಷರಿಗೆ 'ಬಿಗ್ ಶಾಕ್'..!


ಇದಕ್ಕೆ ಪೂರಕವಾಗಿ ರಮೇಶ್ ಜಾರಕಿಹೊಳಿ ಆಗಾಗ ಬಿ.ಎಲ್. ಸಂತೋಷ್ ಅವರನ್ನು ಭೇಟಿ ಮಾಡುತ್ತಿರುತ್ತಾರೆ. ಸಂತೋಷ್ ಬಣದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಅವರನ್ನಂತೂ ವಾರಕ್ಕೊಮ್ಮೆ ಭೇಟಿಯಾಗುತ್ತಾರೆ.


ಇದಲ್ಲದೆ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರ ಕೆಡವಲು ತಮ್ಮೊಂದಿಗೆ ಕೈ‌ಜೋಡಿಸಿದ್ದ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಅವರಿಗೆ ಮಂತ್ರಿ ಸ್ಥಾನ ಕೊಡಿಸಲು ರಮೇಶ್ ಜಾರಕಿಹೊಳಿ ಬಹಳಷ್ಟು ಕಸರತ್ತು ನಡೆಸುತ್ತಿದ್ದಾರೆ. ಯಡಿಯೂರಪ್ಪ ಬಣದವರು 'ನೀವು ಸಿಪಿ ಯೋಗೇಶ್ವರ್ ಪರ ನಿಲ್ಲಬೇಡಿ' ಎಂಬ ಒತ್ತಡ ಹೇರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬಿ.ಎಲ.‌ ಸಂತೋಷ್ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡ ಮೂಲಕ ಸಿ.ಪಿ. ಯೋಗೇಶ್ವರ್ ಗೆ ಸಚಿವ ಸ್ಥಾನ‌ ಕೊಡಿಸಲು ಪ್ರಯತ್ನಿಸುತ್ತಿರುವ ಸಾಧ್ಯತೆಗಳಿವೆ.