ಜನ ಕಷ್ಟದಲ್ಲಿರುವಾಗ ಈ ನಿಗಮ-ಪ್ರಾಧಿಕಾರಗಳಿಗೆ ಹಣ ಎಲ್ಲಿಂದ ತರುತ್ತೀರಿ?: ಸಿದ್ದರಾಮಯ್ಯ

ಮರಾಠ ಅಭಿವೃದ್ಧಿ ನಿಗಮ ಹಾಗೂ ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪಿಸಿರುವ ರಾಜ್ಯ ಸರ್ಕಾರದ ನಡೆಗೆ ವ್ಯಾಪಾಕ ಖಂಡನೆಯಾಗುತ್ತಿದ್ದು, ವಿಪಕ್ಷ ನಾಯಕ ಸಿದ್ದರಾಮಯ್ಯ ಸರಣಿ ಟ್ವೀಟ್ ಮಾಡಿ ಖಡಕ್ ಆಗಿ ಪ್ರಶ್ನಿಸಿದ್ದಾರೆ.

Last Updated : Nov 18, 2020, 03:02 PM IST
  • ಗಡಿಭಾಗದಲ್ಲಿ ಕನ್ನಡ ಮತ್ತು ಮರಾಠಿಗರ ನಡುವೆ ಆಗಾಗ ಸಂಘರ್ಷ ನಡೆದರೂ, ರಾಜ್ಯಾದ್ಯಂತ ಎರಡೂ ಸಮುದಾಯಗಳು ಸೌಹಾರ್ದತೆಯಿಂದ ಬದುಕುತ್ತಿವೆ.
  • ಮೀಸಲಾತಿ, ಸಾಮಾಜಿಕ ನ್ಯಾಯದ ಬಗ್ಗೆ ನಾವು ಮಾತನಾಡಿದಾಗ ನಮ್ಮನ್ನು ಜಾತಿವಾದಿಗಳೆಂದು ಟೀಕಿಸುವ, ಹಂಗಿಸುವ ಬಿಜೆಪಿ ಈಗ ಮಾಡುತ್ತಿರುವುದೇನು?
  • ಜಾತಿ-ಜಾತಿ ನಡುವೆ ಮಾತ್ರವಲ್ಲ ಭಾಷೆ-ಭಾಷೆ ನಡುವೆ ಕೂಡಾ ಜಗಳ ಹುಟ್ಟುಹಾಕುತ್ತಿದೆ.
ಜನ ಕಷ್ಟದಲ್ಲಿರುವಾಗ ಈ ನಿಗಮ-ಪ್ರಾಧಿಕಾರಗಳಿಗೆ ಹಣ ಎಲ್ಲಿಂದ ತರುತ್ತೀರಿ?: ಸಿದ್ದರಾಮಯ್ಯ title=
File Image

ಬೆಂಗಳೂರು: ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುವ ಯೋಗ್ಯತೆ ಇಲ್ಲ. ವೃದ್ಧಾಪ್ಯವೇತನ, ವಿಧವಾ ವೇತನ, ಅಂಗವಿಕಲ ವೇತನಕ್ಕೆ ದುಡ್ಡಿಲ್ಲ, ಅತಿವೃಷ್ಟಿಯಿಂದ ಕಷ್ಟ-ನಷ್ಟಕ್ಕೀಡಾಗಿರುವ ಜನ ಬೀದಿಯಲ್ಲಿದ್ದಾರೆ, ಕೋರೊನಾ ಸೋಂಕಿನಿಂದ ಜನ ಸಾಯುತ್ತಿದ್ದಾರೆ. ಇವೆಲ್ಲಕ್ಕೂ ಸರ್ಕಾರದ ಬಳಿ ಹಣ ಇಲ್ಲ, ಜಾತಿ ನಿಗಮ-ಪ್ರಾಧಿಕಾರಕ್ಕೆ ನೂರಾರು ಕೋಟಿ ಎಲ್ಲಿಂದ ಬಂತು? ಎಂದು 13 ಬಾರಿ ರಾಜ್ಯದ ಬಜೆಟ್ ಮಂಡನೆ ಮಾಡಿದ್ದ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಮರಾಠ ಅಭಿವೃದ್ಧಿ ನಿಗಮ ಹಾಗೂ ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪಿಸಿರುವ ರಾಜ್ಯ ಸರ್ಕಾರದ ನಡೆಗೆ ವ್ಯಾಪಾಕ ಖಂಡನೆಯಾಗುತ್ತಿದ್ದು, ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಸರಣಿ ಟ್ವೀಟ್ ಮಾಡಿ ಖಡಕ್ ಆಗಿ ಪ್ರಶ್ನಿಸಿದ್ದಾರೆ.

ಮೀಸಲಾತಿ, ಸಾಮಾಜಿಕ ನ್ಯಾಯದ ಬಗ್ಗೆ ನಾವು ಮಾತನಾಡಿದಾಗ ನಮ್ಮನ್ನು ಜಾತಿವಾದಿಗಳೆಂದು ಟೀಕಿಸುವ, ಹಂಗಿಸುವ ಬಿಜೆಪಿ ಈಗ ಮಾಡುತ್ತಿರುವುದೇನು? ಜಾತಿ-ಜಾತಿ ನಡುವೆ ಮಾತ್ರವಲ್ಲ ಭಾಷೆ-ಭಾಷೆ ನಡುವೆ ಕೂಡಾ ಜಗಳ ಹುಟ್ಟುಹಾಕುತ್ತಿದೆ. ಇಂತಹ ತುಘಲಕ್ ನಿರ್ಧಾರದಿಂದ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿದೆ ಎಂದು ಹೇಳಿದ್ದಾರೆ.

ಗಡಿಭಾಗದಲ್ಲಿ ಕನ್ನಡ ಮತ್ತು ಮರಾಠಿಗರ ನಡುವೆ ಆಗಾಗ ಸಂಘರ್ಷ ನಡೆದರೂ, ರಾಜ್ಯಾದ್ಯಂತ ಎರಡೂ ಸಮುದಾಯಗಳು ಸೌಹಾರ್ದತೆಯಿಂದ ಬದುಕುತ್ತಿವೆ. ಸರ್ಕಾರ ಮರಾಠ ಅಭಿವೃದ್ದಿ ಪ್ರಾಧಿಕಾರ ಘೋಷಿಸಿ ಅನಗತ್ಯವಾಗಿ ಕನ್ನಡಿಗರನ್ನು ಕೆರಳಿಸುವ ಮೂರ್ಖತನ ತೋರಿದೆ. ಇದರಿಂದಾಗಿ ರಾಜ್ಯದ ಶಾಂತಿ-ಸುವ್ಯವಸ್ಥೆಗೆ ಭಂಗ ಉಂಟಾದಲ್ಲಿ ಅದಕ್ಕೆ ಮುಖ್ಯಮಂತ್ರಿಗಳೇ ಹೊಣೆ ಎಂದು ಸಿದ್ದರಾಮಯ್ಯ ಎಚ್ಚರಿಸಿದ್ದಾರೆ.

ರೈತರ ಆದಾಯ ದುಪ್ಪಟ್ಟುಗೊಳಿಸ್ತೀವಿ ಅಂತ ಈಗ ಬೆಂಬಲ ಬೆಲೆಯನ್ನೂ ನೀಡದೆ ಸರ್ಕಾರ ಕೈತೊಳೆದುಕೊಂಡಿದೆ-ಸಿದ್ಧರಾಮಯ್ಯ

ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆಗೆ ನಮ್ಮ ವಿರೋಧ ಇಲ್ಲ. ಜಾತಿ-ಧರ್ಮಗಳನ್ನು ಮೀರಿದ್ದು ಬಡತನ. ತಳಸಮುದಾಯಗಳಲ್ಲಿ ಮಾತ್ರವಲ್ಲ ಮೇಲ್ಜಾತಿಗಳಲ್ಲಿಯೂ ಬಡವರಿದ್ದಾರೆ. ಎಲ್ಲ ಜಾತಿ-ಧರ್ಮಗಳ ಬಡವರ ಕಲ್ಯಾಣ ಕಾರ್ಯಕ್ರಮಗಳಿಗೆ ನನ್ನ ಸ್ವಾಗತವಿದೆ. ಕೇವಲ ರಾಜಕೀಯ ಲಾಭಕ್ಕಾಗಿ ನಡೆಸುವ ಇಂತಹ ಕ್ಷುಲ್ಲಕ ಬುದ್ದಿಯ ಕಸರತ್ತುಗಳನ್ನು ಖಂಡಿಸುತ್ತೇನೆ ಎಂದಿದ್ದಾರೆ.

ಬಡತನ ನಿರ್ಮೂಲನೆಯ ಕಾರ್ಯಕ್ರಮಗಳಿಗೆ ವೈಜ್ಞಾನಿಕವಾದ ಅಧ್ಯಯನ ಆಧಾರಿತವಾಗಬೇಕು. ಮುಖ್ಯಮಂತ್ರಿಗಳು ಬಡತನ ನಿರ್ಮೂಲನೆಯ ಪ್ರಾಮಾಣಿಕ ಕಾಳಜಿ ಹೊಂದಿದ್ದರೆ ಈಗಾಗಲೇ ಅವರ ಮುಂದಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಒಪ್ಪಿಕೊಂಡು ಕಾರ್ಯಕ್ರಮಗಳನ್ನು ರೂಪಿಸಲಿ ಎಂದು ಸಲಹೆ ನೀಡಿದ್ದಾರೆ.

ಮಹಾರಾಷ್ಟ್ರ ಡಿಸಿಎಂಗೆ 'ಖಡಕ್ ಎಚ್ಚರಿಕೆ' ನೀಡಿದ ಸಿಎಂ ಬಿಎಸ್‍ವೈ!

ನಾನು ಮುಖ್ಯಮಂತ್ರಿಯಾಗಿ ಅನುಷ್ಠಾನಗೊಳಿಸಿರುವ ಅನ್ನಭಾಗ್ಯ (Anna Bhagya), ಕ್ಷೀರಭಾಗ್ಯ, ಕ್ಷೀರಧಾರೆ, ಕೃಷಿಭಾಗ್ಯ, ಪಶುಭಾಗ್ಯ, ಇಂದಿರಾ ಕ್ಯಾಂಟೀನ್ (Indira Canteen) ಮೊದಲಾದ ಕಾರ್ಯಕ್ರಮಗಳು ನಿರ್ದಿಷ್ಠ ಜಾತಿ-ಧರ್ಮಕ್ಕೆ ಸೀಮಿತವಾದುದಲ್ಲ. ಇವೆಲ್ಲವೂ ಸರ್ವಾಜನಾಂಗದ ಬಡವರ ಕಲ್ಯಾಣ ಕಾರ್ಯಕ್ರಮಗಳು. ನಾನು ಜಾತಿ-ಜಾತಿ ನಡುವೆ ವೈಷಮ್ಯ ಹುಟ್ಟಿಸುವ ಕೆಲಸ ಮಾಡಿಲ್ಲ‌ ಎಂದು ಹೇಳಿದ್ದಾರೆ.

ಯಾವುದೇ ವೈಜ್ಞಾನಿಕ ಅಧ್ಯಯನಗಳಿಲ್ಲದೆ ಜಾತಿ ಆಧಾರಿತ ನಿಗಮ-ಪ್ರಾಧಿಕಾರ ಸ್ಥಾಪನೆ ಸಮಾಜ ವಿರೋಧಿ ಮಾತ್ರವಲ್ಲ, ಪ್ರಜಾಪ್ರಭುತ್ವ ವಿರೋಧಿ ತೀರ್ಮಾನ ಕೂಡ ಹೌದು. ಚುನಾವಣೆಗಳನ್ನು ಸಾಧನೆಯ ಬಲದಿಂದ ಗೆಲ್ಲಲಾಗದ ರಾಜ್ಯದ ಮತಿಹೀನ ಬಿಜೆಪಿ ಸರ್ಕಾರ ಇಂತಹ ಅಗ್ಗದ ತಂತ್ರ-ಕುತಂತ್ರಗಳನ್ನು ಮಾಡಿ ಸಮಾಜವನ್ನು ಒಡೆಯಲು ಹೊರಟಿದೆ ಎಂದು ಆರೋಪಿಸಿದ್ದಾರೆ.

ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 30,000 ಮರಾಠ ಸಮುದಾಯದ ಮತದಾರರಿದ್ದಾರೆ, ಅವರ ಓಲೈಕೆಗಾಗಿ ಸರ್ಕಾರ ಅಭಿವೃದ್ಧಿ ಪ್ರಾಧಿಕಾರ ರಚನೆಯ ನಿರ್ಧಾರ ಮಾಡಿದೆಯೇ ಹೊರತು ಅವರ ಸಾಮಾಜಿಕ ಹಾಗೂ ಆರ್ಥಿಕ ಪರಿಸ್ಥಿತಿ ಸುಧಾರಣೆ ಮಾಡುವ ನೈಜ ಕಾಳಜಿ ಬಿಜೆಪಿ (BJP) ಸರ್ಕಾರಕ್ಕೆ ಇಲ್ಲ ಎಂದು ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಏಳು ಖಾಲಿ ಸಚಿವ ಸ್ಥಾನಕ್ಕೆ 10 ಶಾಸಕರ ಲಾಬಿ: ಇಲ್ಲಿದೆ ಸಚಿವಾಕಾಂಕ್ಷಿಗಳ ಪಟ್ಟಿ..!

ರಾಜ್ಯದಲ್ಲಿ ಹಲವಾರು ಹಿಂದುಳಿದ ಸಮುದಾಯಗಳು ಇನ್ನೂ ಇವೆ, ಅವುಗಳ ಅಭಿವೃದ್ಧಿಗೂ ಸರ್ಕಾರ ಪ್ರಾಧಿಕಾರ ರಚನೆ ಮಾಡಲಿ. ಮತ ಓಲೈಕೆ ಕಾರಣಕ್ಕಾಗಿ ಯಾವುದೋ ಒಂದು ಸಮುದಾಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುವುದು ಸರಿಯಲ್ಲ. ಅಭಿವೃದ್ಧಿಯ ಹಾದಿಯಲ್ಲಿ ಎಲ್ಲರು ಒಂದಾಗಿ ಸಾಗಿದಾಗ ಮಾತ್ರ ಸಮಾನತೆ ತರಲು ಸಾಧ್ಯ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

Trending News