ಬೆಂಗಳೂರು: ರಾಜ್ಯದ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

73ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಗರದ ಮಾಣಿಕ್ ಷಾ ಪೆರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಸಿಎಂ, ಗಾಂಧಿಜಿಯವರ 150ನೇ ವರ್ಷಾಚರಣೆ ವೇಳೆ ಧ್ವಜಾರೋಹಣ ಮಾಡುತಿರುವುದು ಧನ್ಯತಾ ಭಾವ ಮೂಡಿಸಿದೆ ಎಂದು ಹೇಳಿದರು. 


ಮುಂದುವರೆದು ಮಾತನಾಡುತ್ತಾ, ರಾಜ್ಯದ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಆದ್ಯತೆ ನೀಡುತ್ತಿಲ್ಲ ಎಂಬ ದೂರುಗಳು ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ರಾಜ್ಯದ ಉದ್ಯೋಗಳಲ್ಲಿ ಕನ್ನಡಿಗರಿಗೇ ಹೆಚ್ಚಿನ ಸ್ಥಾನ ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದರಲ್ಲದೆ, ಬೇರೆ ರಾಜ್ಯಗಳಿಂದ ಬಂದು ಕರ್ನಾಟಕದಲ್ಲಿ ನೆಲೆಸಿರುವ ಜನರು ಇಲ್ಲಿನ ಭಾಷೆ, ಸಂಸ್ಕೃತಿಗೆ ಹೊಂದಿಕೊಂಡು ಕನ್ನಡವನ್ನು ಗೌರವಿಸಬೇಕಿದೆ ಎಂದು ಯಡಿಯೂರಪ್ಪ ಕರೆ ನೀಡಿದರು.


ರಾಜ್ಯದಲ್ಲಿ ಬಿಕಾ ಪ್ರವಾಹದಿಂದಾಗಿ ಜನತೆ ತತ್ತರಿಸಿದ್ದಾರೆ, ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಪರಿಸ್ಥಿತಿಯನ್ನು ಎದುರಿಸಲು ಸರ್ಕಾರ ಸನ್ನದ್ಧವಾಗಿದೆ. ರಾಜ್ಯದ 103 ತಾಲ್ಲೂಕುಗಳು ಭೀಕರ ಪ್ರವಾಹಕ್ಕೆ ಸಿಲುಕಿದ್ದು, ಇದುವರೆಗೆ 61 ಮಂದಿ ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಪರಿಹಾರ ಕ್ರಮಗಳಿಗಾಗಿ ಕೇಂದ್ರದಿಂದ ಅನುದಾನ ತರುವುದರ ಜೊತೆಗೆ ಜನರ ಸಂಕಷ್ಟಕ್ಕೆ ಸರ್ಕಾರ ಸದಾ ಸ್ಪಂದಿಸಲಿದೆ. ಎಲ್ಲ ವರ್ಗಗಳ ಜನರ ಅಭಿವೃದ್ದಿಯೇ ನಮ್ಮ ಸರ್ಕಾರದ ಮುಖಿ ಧ್ಯೇಯ ಎಂದು ಸಿಎಂ ಯಡಿಯೂರಪ್ಪ ಹೇಳಿದರು.