ಹುಬ್ಬಳ್ಳಿ: ಕಳಸಾ ಬಂಡೂರಿ- ಮಹದಾಯಿ ಯೋಜನೆ ಕಾರ್ಯಗತ ನರೇಂದ್ರ ಮೋದಿ ಸರ್ಕಾರದ ಅವಧಿಯಲ್ಲೇ ಆಗುತ್ತದೆ. ಇದು ನಮ್ಮ ಜವಾಬ್ದಾರಿ ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಶಿ ಘೋಷಿಸಿದರು.


COMMERCIAL BREAK
SCROLL TO CONTINUE READING

ಅಣ್ಣಿಗೇರಿ, ನವಲಗುಂದ ರೈಲ್ವೆ ಕಾಮಗಾರಿ ಚಾಲನೆ ಕಾರ್ಯಕ್ರಮದಲ್ಲಿ ಕಳಸಾ ಬಂಡೂರಿ ಅನುಷ್ಠಾನಕ್ಕೆ ಸಲ್ಲಿಸಿದ ಮನವಿ ಸ್ವೀಕರಿಸಿ ಮಾತನಾಡಿ, ಈ ಯೋಜನೆ ನರೇಂದ್ರ ಮೋದಿ ಅವರನ್ನು ಬಿಟ್ಟರೆ ಬೇರೆ ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.


ಮಹದಾಯಿ ಯೋಜನೆಗೆ ಬಿಜೆಪಿ ಸರ್ಕಾರ ಇದ್ದಾಗಲೇ ಅನುದಾನ ಸಹ ಇಟ್ಟಿದ್ದೇವೆ. ಇದರಲ್ಲಿ ಅವರಿವರ ಮೇಲೆ ಹೇಳುವ ಪ್ರಶ್ನೆಯೇ ಇಲ್ಲ. ಮೋದಿ ಅವರ ಅವಧಿಯಲ್ಲಿ ನಾವಿದನ್ನು ಕಾರ್ಯಗತ ಮಾಡೇ ಮಾಡುತ್ತೇವೆ ಎಂದು ಭರವಸೆ ನೀಡಿದರು.


ಪರಿಸರ ಇಲಾಖೆಯಿಂದ ವಿನಾಯಿತಿಯನ್ನೇ ಕೊಡಿಸಿದೆ: ಕಳಸಾ ಬಂಡೂರಿಗೆ ಪರಿಸರ ಕ್ಲಿಯರೆನ್ಸ್ ಸಿಕ್ಕಿಲ್ಲ ಮಿಸ್ಟರ್ ಜೋಶಿ.. ಎಂದು ಸಿಎಂ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಆದರೆ, ಅವರಿಗೆ ಸರಿ ಮಾಹಿತಿಯೇ ಇಲ್ಲ. ಮೊದಲು ಸರಿಯಾದ ಮಾಹಿತಿ ಕೊಡಲು ಅಧಿಕಾರಿಗಳಿಗೆ ಹೇಳಿ. ಕ್ಲಿಯರೆನ್ಸ್ ಅಲ್ಲ ಕೇಂದ್ರದಿಂದ ಪರಿಸರ ವಿನಾಯಿತಿಯನ್ನೇ   ಕೊಡಿಸಿದ್ದೇನೆ ಎಂದು ಸಚಿವ ಜೋಶಿ ಸ್ಪಷ್ಟಪಡಿಸಿದರು.


ಬೇಕಿರುವುದೇನು?:


ಅರಣ್ಯ ಮತ್ತು ವನ್ಯಜೀವಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಹುಲಿ ಕಾರಿಡಾರ್ ಕಡೆಯಿಂದ ಕ್ಲಿಯರೆನ್ಸ್ ಬೇಕಿದೆ. ಮತ್ತು ಇದಕ್ಕೆ ಸಂಬಂಧಿಸಿದ ಮಾಹಿತಿ ಬೇಕಿದೆ. ಕರ್ನಾಟಕ ಸರ್ಕಾರ ಇದನ್ನಿನ್ನೂ ಕೊಟ್ಟಿಲ್ಲ. ರಾಜ್ಯ ಸರ್ಕಾರದ ಅಧಿಕಾರಿಗಳಿಗೂ ಹೇಳಿದ್ದೇನೆ. ಆದಷ್ಟು ಬೇಗ ಈ ಕ್ಲಿಯರೆನ್ಸ್ ಮತ್ತು ಅಗತ್ಯ ಮಾಹಿತಿಯನ್ನು ರಾಜ್ಯ ಸರ್ಕಾರ ಪೂರೈಸಲಿ ಎಂದು ಹೇಳಿದರು.


ಭೂಪೇಂದ್ರ ಯಾದವ್ ಅವರೊಂದಿಗೂ ಮಾತಾಡಿದ್ದೇನೆ. ಇದರಿಂದ ಹಿಂದೆ ಸರಿದಿಲ್ಲ ಅಥವಾ ಕೇಂದ್ರ ಸರ್ಕಾರ ತಿರಸ್ಕರಿಸಿಯೂ ಇಲ್ಲ. ಇದು ನಮ್ಮ ಜವಾಬ್ದಾರಿ ಇದೆ. ನಾವು ಮಾಡುತ್ತೇವೆ. ಮೋದಿ ಸರ್ಕಾರ ಹೇಳೋದೊಂದು, ಮಾಡೋದೊಂದು ಮಾಡುವುದಿಲ್ಲವೆಂದು ಸಚಿವ ಜೋಶಿ ಸ್ಪಷ್ಟಪಡಿಸಿದರು.


ಇಲ್ಲಿನ ಅಧಿಕಾರಿಗಳು 6 ತಿಂಗಳ ಸಮಯ ಕೇಳಿದ್ದಾರೆ: ಕಳಸಾ ಬಂಡೂರಿಗೆ ಬಾಕಿ ಇರುವ ಕ್ಲಿಯರೆನ್ಸ್ ಮತ್ತು ಅಗತ್ಯ ಮಾಹಿತಿ ಒದಗಿಸಲು ರಾಜ್ಯದ ಅಧಿಕಾರಿಗಳು 6 ತಿಂಗಳ ಸಮಯ ಕೇಳಿದ್ದಾರೆ. ಆದಷ್ಟು ಬೇಗ ಅಗತ್ಯ ಮಾಹಿತಿ ಒದಗಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಅಧಿಕಾರಿಗಳಿಗೆ ಹೇಳಲಿ ಎಂದು  ಸಚಿವ ಜೋಶಿ ಹೇಳಿದರು.


ಇದನ್ನೂ ಓದಿ- ಮಕ್ಕಳು ಬಾಲ ನಟ, ನಟಿಯಾಗಿ ನಟನಾ ಕೆಲಸ ಮಾಡಲು ಅನುಮತಿ ಕಡ್ಡಾಯ


ಕಳಸಾ ಬಂಡೂರಿಗೆ ನಮ್ಮ ಸರ್ಕಾರದಿಂದಲೇ ಪ್ರಯತ್ನ:


ಕಳಸಾ ಬಂಡೂರಿ, ಮಹದಾಯಿ ಹೋರಾಟ ಮತ್ತು ಪ್ರಯತ್ನ ನಮ್ಮ ಸರ್ಕಾರದಿಂದಲೇ ಆಗಿರುವುದು. ಈ ಯೋಜನೆ ಅನುಷ್ಠಾನ ಸಹ ನಮ್ಮ ಸರ್ಕಾರದ ಅವಧಿಯಲ್ಲೇ ನಡೆಯುತ್ತಿರುವುದು ಸಂತಸ ತಂದಿದೆ ಎಂದು ಸಚಿವ ಪ್ರಹ್ಲಾದ ಜೋಶಿ ಹೇಳಿದರು.


ಕಳಸಾ ಬಂಡೂರಿ ಕಾರ್ಯಗತಕ್ಕೆ ಹಿಂದಿನ ಮನಮೋಹನ್ ಸಿಂಗ್ ಸರ್ಕಾರದಲ್ಲಿ ಯಾವುದೇ ಸ್ಪಂದನೆ ಸಿಗಲಿಲ್ಲ. ಕಾಂಗ್ರೆಸ್ ಸಂಸದರನ್ನೂ ಕರೆದೋಯ್ದು  ನ್ಯಾಯಾಧಿಕರಣಕ್ಕೆ ವಹಿಸದಂತೆ  ಮನವಿ ಮಾಡಿದೆವು. ಕುಡಿಯುವ ನೀರು ಕೊಟ್ಟ ಬಳಿಕ ನ್ಯಾಯಾಧಿಕರಣಕ್ಕೆ ಕೊಡುವಂತೆ ಪರಿ ಪರಿಯಾಗಿ ಕೇಳಿದ್ದೇವೆ. ಆದರೆ ಯುಪಿಎ ಸರ್ಕಾರ ಕೇಳಲಿಲ್ಲ ಎಂದು ಆರೋಪಿಸಿದರು.ಕಾಂಗ್ರೆಸ್ ನಿಂದಲೇ ಅನ್ಯಾಯ: ನ್ಯಾಯಾಧಿಕರಣಕ್ಕೆ ಕೊಟ್ಟ ಮೇಲೂ ನ್ಯಾಯಾಧೀಶರನ್ನು ನೇಮಿಸಲಿಲ್ಲ. ಕಚೇರಿ ಕೊಡಲಿಲ್ಲ. ಅಗತ್ಯ ಸಿಬ್ಬಂದಿ, ಹಣಕಾಸು ಏನೊಂದನ್ನೂ ಒದಗಿಸಲಿಲ್ಲ. ಸೋನಿಯಾ ಗಾಂಧಿ ಗೋವಾಕ್ಕೆ ಹೋಗಿ ಕರ್ನಾಟಕಕ್ಕೆ ಹನಿ ನೀರೂ ಕೊಡಬೇಡಿ ಎಂದಿದ್ದರು. ಕಾಂಗ್ರೆಸ್ ಯಾವತ್ತೂ ಇದರಲ್ಲಿ ರಾಜಕೀಯ, ಅನ್ಯಾಯ ಮಾಡುತ್ತಲೇ ಬಂದಿದೆ ಎಂದು ಸಚಿವ ಜೋಶಿ ದೂರಿದರು.


ಬಿಜೆಪಿ ಸರ್ಕಾರದಲ್ಲಿ ಸಹಕಾರ: ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ನ್ಯಾಯಾಧಿಕರಣಕ್ಕೆ ನ್ಯಾಯಾಧೀಶರನ್ನು ನೇಮಿಸಿ, ಕಚೇರಿ, ಸಿಬ್ಬಂದಿ ಎಲ್ಲಾ ಒದಗಿಸಿಕೊಟ್ಟಿದೆ. ನಾಲ್ಕು ವರ್ಷದಲ್ಲಿ ಸಕಲ ಸೌಲಭ್ಯ ಕೊಟ್ಟು ತ್ವರಿತವಾಗಿ ವರದಿ ಸಲ್ಲಿಸುವಂತೆ ತಾಕೀತು ಮಾಡಿತು. ಅದರ ಫಲವಾಗಿ ಈಗ ಕಳಸಾ ಬಂಡೂರಿ, ಮಹದಾಯಿ ಅಂತಿಮ ಹಂತಕ್ಕೆ ಬಂದು ನಿಂತಿದೆ ಎಂದರು.


ಸಂಕೇಶ್ವರ್, ಶೆಟ್ಟರ್ ಹೋರಾಟ ಸ್ಮರಿಸಿದ ಜೋಶಿ: ನೈಋತ್ಯ ರೈಲ್ವೆ ವಲಯಕ್ಕೆ ತಾವು ಮತ್ತು ವಿಜಯ ಸಂಕೇಶ್ವರ್ ಹಾಗೂ ಆಗ ಶಾಸಕರಿದ್ದ ಜಗದೀಶ್ ಶೆಟ್ಟರ್ ಅವರ ಹೋರಾಟದ ಕೊಡುಗೆಯಿದೆ. ಎಲ್ಲರೂ ನೈಋತ್ಯ ರೈಲ್ವೆ ಅಸಾಧ್ಯ ಎನ್ನುತ್ತಿದ್ದರು. ಆದರೆ, ಬಿಜೆಪಿ ಕಡೆಯಿಂದ ನಾವೆಲ್ಲ ಕೇಂದ್ರಕ್ಕೆ ಬೆನ್ನತ್ತಿದ್ದರ ಫಲವಾಗಿಯೇ ರೈಲ್ವೆ ನೈಋತ್ಯ ವಲಯವಾಯಿತು. ಅಂತೆಯೇ ಹೈಕೋರ್ಟ್ ಪೀಠ ಅನೇಕ ಹೋರಾಟಗಾರರು ಮತ್ತು ತಮ್ಮ ಪ್ರಯತ್ನದಿಂದಾಗಿ ಸಾಕಾರಗೊಂಡಿತು. ಯಡಿಯೂರಪ್ಪ ಸರ್ಕಾರದಲ್ಲಿ ಹೈಕೋರ್ಟ ಪೀಠ ಸ್ಥಾಪನೆಯಾಯಿತು. ಬಿಜೆಪಿ ಹೀಗೆ ಸದಾ ಅಭಿವೃದ್ಧಿ ಪರ ನಿಲುವುಳ್ಳದ್ದಾಗಿದೆ ಎಂದು ಸಚಿವ ಪ್ರಹ್ಲಾದ ಜೋಶಿ ಹೇಳಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.