Karnataka Budget 2024: ಜಲಸಂಪನ್ಮೂಲ ಇಲಾಖೆಗೆ ವಿಶೇಷ ಆದ್ಯತೆ-ಮೇಕೆದಾಟು ಯೋಜನೆಯ ಅನುಷ್ಠಾನಕ್ಕೆ ಪ್ರತ್ಯೇಕ ಯೋಜನಾ ವಿಭಾಗ
Karnataka state budget 2024 Updates: ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯಡಿ ದೊಡ್ಡನಗರದ ಬಳಿಯ ವಿತರಣಾ ತೊಟ್ಟಿಯವರೆಗೆ ಪೂರ್ವ ಪರೀಕ್ಷಾರ್ಥವಾಗಿ (Pre-Commissioning Test) ನೀರು ಹರಿಸಿ ಚಾಲನೆಗೊಳಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಯೋಜನೆಯ ಎಲ್ಲಾ ಲಿಫ್ಟ್ ಕಾಮಗಾರಿಗಳನ್ನು ಪೂರ್ಣಗೊಳಿಸಿ ಗುರುತ್ವ ಕಾಲುವೆಗೆ ನೀರು ಹರಿಸಲಾಗುವುದರ ಜೊತೆ ಸಮತೋಲನಾ ಜಲಾಶಯದ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು ಎಂದರು.
Latest news on Karnataka state budget 2024: ಕಾವೇರಿ ಕಣಿವೆಯ ಮಹತ್ವಾಕಾಂಕ್ಷಿ ಯೋಜನೆಯಾದ ಮೇಕೆದಾಟು ಸಮತೋಲನ ಜಲಾಶಯ ಹಾಗೂ ಕುಡಿಯುವ ನೀರಿನ ಯೋಜನೆಯ ಅನುಷ್ಠಾನಕ್ಕಾಗಿ ಒಂದು ಪ್ರತ್ಯೇಕ ಯೋಜನಾ ವಿಭಾಗವನ್ನು ಹಾಗೂ 2 ಉಪ ವಿಭಾಗಗಳನ್ನು ಈಗಾಗಲೇ ಸ್ಥಾಪಿಸಲಾಗಿದೆ. ಈ ಯೋಜನೆಯಡಿ ಮುಳುಗಡೆಯಾಗುವ ಭೂಮಿಯನ್ನು ಗುರುತಿಸುವ ಸರ್ವೆ ಹಾಗೂ ಮರಗಳ ಎಣಿಕೆ ಪ್ರಕ್ರಿಯೆಯನ್ನು ಚಾಲನೆಗೊಳಿಸಿದ್ದು ಉಳಿದ ಅಗತ್ಯ ತೀರುವಳಿಗಳನ್ನು ಸಕ್ಷಮ ಪ್ರಾಧಿಕಾರಗಳಿಂದ ಪಡೆದು ಶೀಘ್ರವಾಗಿ ಪ್ರಾರಂಭಿಸಲು ಆದ್ಯತೆ ಮೇರೆಗೆ ಕ್ರಮವಹಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡನೆಯಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: Karnataka Budget 2024 Live Updates: ಮದ್ಯದ ಬೆಲೆ ಏರಿಸಲು ಮತ್ತಷ್ಟು ರಾಜ್ಯ ಸರ್ಕಾರದ ನಿರ್ಧಾರ!
ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯಡಿ ದೊಡ್ಡನಗರದ ಬಳಿಯ ವಿತರಣಾ ತೊಟ್ಟಿಯವರೆಗೆ ಪೂರ್ವ ಪರೀಕ್ಷಾರ್ಥವಾಗಿ (Pre-Commissioning Test) ನೀರು ಹರಿಸಿ ಚಾಲನೆಗೊಳಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಯೋಜನೆಯ ಎಲ್ಲಾ ಲಿಫ್ಟ್ ಕಾಮಗಾರಿಗಳನ್ನು ಪೂರ್ಣಗೊಳಿಸಿ ಗುರುತ್ವ ಕಾಲುವೆಗೆ ನೀರು ಹರಿಸಲಾಗುವುದರ ಜೊತೆ ಸಮತೋಲನಾ ಜಲಾಶಯದ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು ಎಂದರು.
ಉತ್ತರ ಕರ್ನಾಟಕದ ಪ್ರಮುಖ ಯೋಜನೆಯಾಗಿರುವ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3 ಯೋಜನೆಯಡಿಯ ಉಪ ಯೋಜನೆಗಳನ್ನು ಪೂರ್ಣಗೊಳಿಸಲು ಹಾಗೂ ಇದರಡಿ ಭೂಸ್ವಾಧೀನ ಮತ್ತು ಪುನರ್ ವಸತಿ ಹಾಗೂ ಪುನರ್ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು. ಕೃಷ್ಣಾ ನ್ಯಾಯಾಧಿಕರಣ-2ರ ಅಂತಿಮ ತೀರ್ಪಿನ ಬಾಕಿಯಿರುವ ಗೆಜೆಟ್ ಅಧಿಸೂಚನೆ ಹೊರಡಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವುದರೊಂದಿಗೆ ಅಗತ್ಯವಿರುವ ಕಾನೂನಾತ್ಮಕ ಕ್ರಮಗಳನ್ನು ಮುಂದುವರೆಸಲಾಗುವುದು ಎಂದರು.
ಭದ್ರಾ ಮೇಲ್ದಂಡೆ ಯೋಜನೆಯ ಅನುಷ್ಠಾನಕ್ಕಾಗಿ ಕೇಂದ್ರ ಸರ್ಕಾರವು ತನ್ನ 2023-24ನೇ ಸಾಲಿನ ಆಯವ್ಯಯದಲ್ಲಿ 5,300 ಕೋಟಿ ರೂ. ಅನುದಾನ ಘೋಷಿಸಿಲಾಗಿತ್ತು. ಆದರೆ ಈವರೆಗೆ ಯಾವುದೇ ಅನುದಾನ ಬಿಡುಗಡೆಯಾಗಿರುವುದಿಲ್ಲ. ಹಾಗೆಯೇ ಹಿಂದಿನ ರಾಜ್ಯ ಸರ್ಕಾರ ತನ್ನ ಆಯವ್ಯಯ ಘೋಷಣೆಯಲ್ಲಿ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಮಾನ್ಯತೆ ನೀಡಲಾಗುತ್ತಿರುವುದರಿಂದ ಮಾನ್ಯ ಪ್ರಧಾನಮಂತ್ರಿಗಳಿಗೆ ಅಭಿನಂದನೆಗಳನ್ನು ತಿಳಿಸಲಾಗಿತ್ತು, ಆದರೆ ಈವರೆಗೆ ರಾಷ್ಟ್ರೀಯ ಯೋಜನೆಯಾಗಿ ಕೇಂದ್ರ ಸರ್ಕಾರವು ಘೋಷಿಸದೆ ಇರುವುದರಿಂದ ಇದು ಹುಸಿಯಾದ ಘೋಷಣೆಯಾಗಿದೆ. ಪ್ರಸಕ್ತ ಸಾಲಿನಲ್ಲಿ ಈ ಯೋಜನೆಯಡಿ ರಾಜ್ಯ ಸರ್ಕಾರವು ಚಿತ್ರದುರ್ಗ ಜಿಲ್ಲೆಯ ಸುಮಾರು 75,000 ಎಕರೆ ನೀರಾವರಿ ಸಾಮರ್ಥ್ಯ ಕಲ್ಪಿಸಲು ಯೋಜಿಸಿದ್ದು, ಆಯವ್ಯಯದಲ್ಲಿ ಘೋಷಿಸಿದಂತೆ ಅನುದಾನವನ್ನು ಬಿಡುಗಡೆ ಮಾಡಿ ಯೋಜನೆಯನ್ನು ರೈತರಿಗೆ ತಲುಪಿಸಲು ಸಹಕಾರಿಯಾಗುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಘೋಷಿಸಿದ್ದಾರೆ.
ಕಳಸಾ ಮತ್ತು ಬಂಡೂರಾ ನಾಲಾ ತಿರುವು ಯೋಜನೆ:
ಕಳಸಾ ಮತ್ತು ಬಂಡೂರಾ ನಾಲಾ ತಿರುವು ಯೋಜನೆಗಳಡಿ 3.9 TMC ನೀರಿನ ಬಳಕೆಗಾಗಿ ವಿವರವಾದ ಯೋಜನಾ ವರದಿಗಳಿಗೆ ಕೇಂದ್ರ ಜಲ ಆಯೋಗದ ತೀರುವಳಿ ದೊರಕಿದ್ದು, ಪ್ರಸ್ತುತ ರಾಷ್ಟ್ರೀಯ ವನ್ಯಜೀವಿ ಮಂಡಳಿಯಿಂದ ಅರಣ್ಯ ತೀರುವಳಿ ನಿರೀಕ್ಷಿಸಿ ರಾಜ್ಯ ಸರ್ಕಾರವು ಟೆಂಡರ್ ಪ್ರಕ್ರಿಯೆಯನ್ನು ಚಾಲನೆಗೊಳಿಸಲಾಗಿರುತ್ತದೆ. ಆದರೆ ಈ ನಡುವೆ ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿ ಸಭೆಯಲ್ಲಿ ಅರಣ್ಯ ತೀರುವಳಿಯನ್ನು ಅನುಮೋದಿಸದೇ ಮುಂದೂಡಲಾಗಿರುತ್ತದೆ.
ತುಂಗಭದ್ರಾ ಜಲಾಶಯದಲ್ಲಿ ಹೂಳಿನ ಸಂಗ್ರಹಣೆಯಿಂದ ಉಂಟಾಗಿರುವ ನೀರು ಸಂಗ್ರಹಣೆ ಸಾಮರ್ಥ್ಯದ ಕೊರತೆ ನಿವಾರಿಸಲು ಜಲಾಶಯ ವ್ಯಾಪ್ತಿಯಲ್ಲಿನ ರೈತರ ಬಹುದಿನದ ಬೇಡಿಕೆಯಾದ ಕೊಪ್ಪಳ ಜಿಲ್ಲೆಯ ನವಲಿ ಬಳಿ ಸಮತೋಲನಾ ಜಲಾಶಯ ನಿರ್ಮಾಣ ಯೋಜನೆಯ 15,600 ಕೋಟಿ ರೂ. ಮೊತ್ತದ ವಿವರವಾದ ಯೋಜನಾ ವರದಿ ಸಿದ್ಧವಾಗಿದ್ದು, ಸದರಿ ಯೋಜನೆಯ ಅನುಷ್ಠಾನ ಸಂಬಂಧ ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳೊಂದಿಗೆ ಸಮಾಲೋಚನೆ ಪ್ರಕ್ರಿಯೆ ಚಾಲನೆಗೊಳಿಸಿದ್ದು, ಯೋಜನೆ ಕಾರ್ಯಗತಗೊಳಿಸಲು ಆದ್ಯತೆ ನೀಡಲಾಗುವುದು.
ಪ್ರತಿಷ್ಠಿತ ಕೃಷ್ಣರಾಜಸಾಗರ ಅಣೆಕಟ್ಟೆಯ ಬೃಂದಾವನ ಉದ್ಯಾನವನವನ್ನು ವಿಶ್ವದರ್ಜೆಯ ಪ್ರವಾಸೋದ್ಯಮ ಆಕರ್ಷಣೀಯ ಕೇಂದ್ರವನ್ನಾಗಿ ಉನ್ನತೀಕರಿಸುವ ಯೋಜನೆಯನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಕೈಗೆತ್ತಿಕೊಳ್ಳಲಾಗುವುದು.
ಧಾರವಾಡದಲ್ಲಿರುವ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆಯನ್ನು (ವಾಲ್ಮಿ) ಪ್ರಸಕ್ತ ಸಾಲಿನಲ್ಲಿ Centre of Excellence in Water Management ಆಗಿ ಉನ್ನತೀಕರಿಸಲಾಗುವುದು.
ಪಾವಗಡ ಸೋಲಾರ್ ಪಾರ್ಕ್ ಮಾದರಿಯಲ್ಲಿ ಜಲಸಂಪನ್ಮೂಲ ಇಲಾಖೆಯ ಮಾಲೀಕತ್ವವಿರುವ ಜಮೀನಿನಲ್ಲಿ ಮತ್ತು ಜಲಾಶಯಗಳ ಹಿನ್ನೀರಿನಲ್ಲಿ ಸೂಕ್ತ ಮಾದರಿಯ ಸೋಲಾರ್ ಪಾರ್ಕ್ಗಳನ್ನು ಸ್ಥಾಪಿಸುವ ಯೋಜನೆಗಳನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಕೈಗೆತ್ತಿಕೊಳ್ಳಲಾಗುವುದು.
ಪ್ರಗತಿಯಲ್ಲಿರುವ ಏತ ನೀರಾವರಿ ಯೋಜನೆಗಳಾದ ಬೂದಿಹಾಳ್-ಪೀರಾಪುರ ಹಂತ-1, ಶ್ರೀ ವೆಂಕಟೇಶ್ವರ ಹಾಗೂ ಕೆಂಪವಾಡ ಬಸವೇಶ್ವರ ಹಾಗೂ ಕೆರೆ ತುಂಬಿಸುವ ಯೋಜನೆಗಳಾದ ಮುಂಡಗೋಡ, ತುಪರೀಹಳ್ಳ, ಸಾಸಿವೆಹಳ್ಳಿ, ದೇವದುರ್ಗ ಮತ್ತು ಗುರುಮಿಠಕಲ್ ಯೋಜನೆಗಳನ್ನು ಪ್ರಸಕ್ತ ಸಾಲಿನಲ್ಲಿ ಪೂರ್ಣಗೊಳಿಸಲಾಗುವುದು.
ಪ್ರಗತಿಯಲ್ಲಿರುವ ಹೇಮಾವತಿ ಯೋಜನೆ ವೈನಾಲೆಯಡಿ 5.45 ಕಿ.ಮೀ ಉದ್ದದ ಹಾಗೂ ತುಮಕೂರು ಶಾಖಾ ನಾಲೆಯಡಿ 166.90 ಕಿ.ಮೀ. ಉದ್ದದ ನಾಲೆಯ ಆಧುನೀಕರಣ ಕಾಮಗಾರಿಗಳನ್ನು ಪ್ರಸಕ್ತ ಸಾಲಿನಲ್ಲಿ ಪೂರ್ಣಗೊಳಿಸಲಾಗುವುದು. ಇದರಿಂದ ನೀರಿನ ಬಳಕೆಯ ದಕ್ಷತೆಯು ವೃದ್ಧಿಸಲಿದೆ.
ಕರ್ನಾಟಕ ನೀರಾವರಿ ನಿಗಮದಡಿ ಏತ ನೀರಾವರಿ ಯೋಜನೆಗಳಾದ ಕಲಬುರಗಿಯ ಯಡಳ್ಳಿ ಹಾಗೂ ತೆರ್ನಳ್ಳಿ, ಉಡುಪಿ ಜಿಲ್ಲೆಯ ಸ್ವರ್ಣ ಹಾಗೂ ಸಿದ್ದಾಪುರ, ಬಾಗಲಕೋಟೆ ಜಿಲ್ಲೆಯ ಮೆಳ್ಳಿಗೇರಿ-ಹಲಗಲಿ, ಸಸಾಲಟ್ಟಿ-ಶಿವಲಿಂಗೇಶ್ವರ, ಶಿರೂರು, ಹನವಾಳ, ಬೆಳಗಾವಿಯ ಜಿಲ್ಲೆಯ ಅಥಣಿ-ಕೊಟ್ಟಲಗಿ-ಅಮ್ಮಾಜೇಶ್ವರಿ, ಶ್ರೀ ಚನ್ನವೃಷಭೇಂದ್ರ, ಮಹಾಲಕ್ಷ್ಮಿ, ಸತ್ತಿಗೇರಿ, ಮಾರ್ಕಂಡೇಯ, ಬೈಲಹೊಂಗಲ ವಿಧಾನಸಭಾ ಕ್ಷೇತ್ರದ ಹಳೆಯ ಏತ ನೀರಾವರಿ ಯೋಜನೆಗಳ ಪುನಶ್ಚೇತನ ಹಾಗೂ ಕೆರೆ ತುಂಬಿಸುವ ಯೋಜನೆಗಳಾದ ರಾಯಚೂರು ಜಿಲ್ಲೆಯ ಗುಂಜಳ್ಳಿ, ಕಲಬುರಗಿ ಜಿಲ್ಲೆಯ ಆಳಂದ, ಬೀದರ್ ಜಿಲ್ಲೆಯ ಔರಾದ್, ಬೆಳಗಾವಿ ಜಿಲ್ಲೆಯ ಅರಬಾವಿ, ಹಿರೆಬಾಗೇವಾಡಿ, ಸಂತಿ ಬಸ್ತವಾಡ, ಕಾಗವಾಡ, ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ, ಕಿರವತ್ತಿ, ಗದಗ ಜಿಲ್ಲೆಯ ಜಾಲವಾಡಗಿ ಯೋಜನೆಗಳನ್ನು ಪ್ರಸಕ್ತ ಸಾಲಿನಲ್ಲಿ 7,280 ಕೋಟಿ ರೂ. ಅಂದಾಜು ಮೊತ್ತದಲ್ಲಿ ಅನುಷ್ಠಾನಗೊಳಿಸಲಾಗುವುದು. ಪ್ರಸ್ತಾಪಿತ ಯೋಜನೆಗಳಿಂದ ಬಾಧಿತ ಅಚ್ಚುಕಟ್ಟು ಪ್ರದೇಶವೂ ಒಳಗೊಂಡಂತೆ 97,698 ಹೆಕ್ಟರ್ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರೆಯಲಿದೆ.
ಕೃಷ್ಣಾ ಭಾಗ್ಯ ಜಲ ನಿಗಮದಡಿ ಏತ ನೀರಾವರಿ ಯೋಜನೆಗಳಾದ ಬಾಗಲಕೋಟೆ ಜಿಲ್ಲೆಯ ಕೆರೂರು, ವಿಜಯಪುರ ಜಿಲ್ಲೆಯ ಹೊರ್ತಿ-ರೇವಣಸಿದ್ದೇಶ್ವರ, ಚಿಮ್ಮಲಗಿ, ಮುಳವಾಡ, ಯಾದಗಿರಿ ಜಿಲ್ಲೆಯ ಭೀಮಾ ಪ್ಲಾಂಕ್, ಪ್ರಸಕ್ತ ಸಾಲಿನಲ್ಲಿ 3,779 ಕೋಟಿ ರೂ. ಮೊತ್ತದಲ್ಲಿ ಅನುಷ್ಠಾನಗೊಳಿಸಲಾಗುವುದು. ಈ ಯೋಜನೆಗಳಿಂದ ಬಾಧಿತ ಅಚ್ಚುಕಟ್ಟು ಪ್ರದೇಶವೂ ಒಳಗೊಂಡಂತೆ 1,09,350 ಹೆಕ್ಟರ್ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರೆಯಲಿದೆ.
ಕೊಪ್ಪಳ ಜಿಲ್ಲೆಯ ಯಲಬುರ್ಗಾ-ಕುಕನೂರು ತಾಲ್ಲೂಕಿನ 38 ಕೆರೆಗಳನ್ನು ಕುಡಿಯುವ ನೀರು ಹಾಗೂ ಅಂತರ ಜಲ ಅಭಿವೃದ್ಧಿಗಾಗಿ ಕೆರೆ ತುಂಬಿಸುವ ಯೋಜನೆಯನ್ನು ಪ್ರಸಕ್ತ ಸಾಲಿನಲ್ಲಿ 970 ಕೋಟಿ ರೂ. ಅಂದಾಜು ಮೊತ್ತದಲ್ಲಿ ಹಾಗೂ ರಾಯಚೂರು ಜಿಲ್ಲೆಯ ಮಸ್ಕಿ ತಾಲ್ಲೂಕಿನ ಪಾಮನಕಲ್ಲೂರು ಹಾಗೂ ಇತರ ಪ್ರದೇಶಗಳಿಗೆ ನಾರಾಯಣಪುರ ಬಲದಂಡೆ ಕಾಲುವೆಯಿಂದ ಅಂದಾಜು 990 ಕೋಟಿ ರೂ. ಮೊತ್ತದಲ್ಲಿ ನೀರಾವರಿ ಸೌಲಭ್ಯ ಕಲ್ಪಿಸುವ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು.
ಕಾವೇರಿ ನೀರಾವರಿ ನಿಗಮದಡಿ ವಿಶ್ವೇಶ್ವರಯ್ಯ ನಾಲಾ ಜಾಲದ ಹೆಬ್ಬಕವಾಡಿ, ನಿಡಘಟ್ಟ, ತುರುಗನೂರು, ಮಳವಳ್ಳಿ ತಾಲ್ಲೂಕಿನ ಮಾದವಮಂತ್ರಿ ನಾಲೆಗಳ ಹಾಗೂ ಮದ್ದೂರು ತಾಲ್ಲೂಕು ಕೆಮ್ಮಣ್ಣುನಾಲಾ ಆಧುನೀಕರಣ, ಹುಣಸೂರು ತಾಲ್ಲೂಕಿನ ಮರದೂರು, ಕನಕಪುರದ ಹೆಗ್ಗನೂರು ಕೆರೆ ತುಂಬಿಸುವ ಯೋಜನೆಗಳು, ಶ್ರೀರಂಗ ಕುಡಿಯುವ ನೀರು ಯೋಜನೆಗೆ ಪೈಪ್ಲೈನ್ ಮೂಲಕ ನೀರು ಒದಗಿಸುವ ಯೋಜನೆ, ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ನಾಲೆಗಳ ಅಭಿವೃದ್ಧಿ, ಗುಬ್ಬಿಯ ಮಠದಹಳ್ಳಿ ಕುಡಿಯುವ ನೀರು ಯೋಜನೆ, ರಾಮನಗರದ ಬಳಿ ಅರ್ಕಾವತಿ River Front Development ಯೋಜನೆಗಳನ್ನು ಅಂದಾಜು 2,000 ಕೋಟಿ ರೂ. ಮೊತ್ತದಲ್ಲಿ ಪ್ರಸಕ್ತ ಸಾಲಿನಲ್ಲಿ ಕೈಗೆತ್ತಿಕೊಳ್ಳಲಾಗುವುದು.
ಕಲಬುರಗಿ ನಗರಕ್ಕೆ ಕುಡಿಯುವ ನೀರು ಸರಬರಾಜಿಗಾಗಿ ಬೆಣ್ಣೆತೊರಾ ಜಲಾಶಯಕ್ಕೆ ಭೀಮಾ ಮತ್ತು ಕಾಗಿಣಾ ನದಿಗಳಿಂದ ನೀರು ತುಂಬಿಸುವ 365 ಕೋಟಿ ರೂ. ಮೊತ್ತದ ಯೋಜನೆಯನ್ನು ಪ್ರಸಕ್ತ ಸಾಲಿನಲ್ಲಿ ಕೈಗೆತ್ತಿಕೊಳ್ಳಲಾಗುವುದು.
ಧಾರವಾಡ ಜಿಲ್ಲೆಯಲ್ಲಿ ಬೆಣ್ಣೆಹಳ್ಳದಿಂದ ಪ್ರವಾಹ ಪೀಡಿತ ಗ್ರಾಮಗಳಿಗೆ ತಡೆಗೋಡೆ ನಿರ್ಮಾಣ ಮಾಡಲು ರಾಜ್ಯ ವಿಪತ್ತು ಉಪಶಮನ ನಿಧಿಯಿಂದ (SDMF) ಯೋಜನೆ ರೂಪಿಸಲಾಗುವುದು.
ಸಣ್ಣ ನೀರಾವರಿ
ಮಳೆಯ ಕೊರತೆಯಿಂದಾಗಿ ಸಣ್ಣ ನೀರಾವರಿ ಕೆರೆಗಳ ವಿನ್ಯಾಸಿತ ಅಚ್ಚುಕಟ್ಟು ಪ್ರದೇಶಕ್ಕೆ ನೀರು ದೊರೆಯುತ್ತಿಲ್ಲ. ಅಲ್ಲದೆ, ಕುಡಿಯುವ ನೀರಿಗೂ ತೊಂದರೆಯಾಗುತ್ತಿದೆ. ಇಂತಹ ಕೆರೆಗಳನ್ನು ಸಮೀಪದ ಜೀವನದಿಗಳಿಂದ ತುಂಬಿಸಲು ಯೋಜನೆಗಳನ್ನು ಕೈಗೊಳ್ಳಲು ಗಣನೀಯ ಪ್ರಮಾಣದ ವೆಚ್ಚ ಮಾಡಲಾಗಿದೆ.
ಈ ಯೋಜನೆಗಳಿಂದಾಗಿ ಸ್ಥಳೀಯ ಅಂತರ್ಜಲ ಮಟ್ಟದ ವಸ್ತುಸ್ಥಿತಿ, ಸುತ್ತಲಿನ ರೈತರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗಳ ಆಧಾರದಲ್ಲಿ ಮೌಲ್ಯಮಾಪನ ಕಾರ್ಯ ಕೈಗೊಳ್ಳಲಾಗುವುದು.
ಕುಡಿಯುವ ನೀರು, ಕೃಷಿ ಹಾಗೂ ಕೈಗಾರಿಕೆಗಳಿಗೆ ನೀರನ್ನು ಸಮರ್ಪಕವಾಗಿ ಪೂರೈಸಲು ಕೆರೆಗಳ ಅಭಿವೃದ್ಧಿ, ಚೆಕ್ ಡ್ಯಾಂ ಮತ್ತು ಬ್ರಿಡ್ಜ್ ಕಂ ಬ್ಯಾರೇಜ್ ನಂತಹ 115 ಕಾಮಗಾರಿಗಳನ್ನು 200 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಪ್ರಸಕ್ತ ಸಾಲಿನಲ್ಲಿ ಕೈಗೆತ್ತಿಕೊಳ್ಳಲಾಗುವುದು.
ಪ್ರಗತಿಯಲ್ಲಿರುವ 455 ಕೋಟಿ ರೂ. ಮೊತ್ತದ ಕೆ.ಸಿ ವ್ಯಾಲಿ 2ನೇ ಹಂತದ ಉದ್ದೇಶಿತ 272 ಕೆರೆ ತುಂಬಿಸುವ ಯೋಜನೆಯನ್ನು ಪ್ರಸಕ್ತ ಸಾಲಿನಲ್ಲಿ ಪೂರ್ಣಗೊಳಿಸಲಾಗುವುದು.
ಇದನ್ನೂ ಓದಿ: Karnataka Budget 2024: ರಾಜ್ಯ ರೈತರಿಗಾಗಿ "ರೈತ ಸಮೃದ್ಧಿ ಯೋಜನೆ" ಜಾರಿ
ರಾಯಚೂರು ಜಿಲ್ಲೆಯ ಚಿಕ್ಕಲಪರ್ವಿ ಹತ್ತಿರ ತುಂಗಭದ್ರಾ ನದಿಗೆ ಬಿ.ಸಿ.ಬಿ ನಿರ್ಮಾಣ, ಮಾನ್ವಿ ತಾಲ್ಲೂಕಿನ ಕುರ್ಡಿ ಕೆರೆ ತುಂಬಿಸುವ ಯೋಜನೆ, ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲ್ಲೂಕಿನ ಕೆಸ್ತೂರು ಕೊಪ್ಪಲು ಏತ ನೀರಾವರಿ, ನಂಜನಗೂಡು ತಾಲ್ಲೂಕಿನ ದೇವನೂರು ಗ್ರಾಮದ ಬಳಿ ಏತ ನೀರಾವರಿ, ಚಿತ್ತಾಪುರ ತಾಲ್ಲೂಕಿನ ಕೆರೆ ತುಂಬಿಸುವ ಯೋಜನೆ, ಸೊರಬ ತಾಲ್ಲೂಕಿನ ವರದಾ ನದಿಗೆ ಅಡ್ಡಲಾಗಿ ಬ್ರಿಡ್ಜ್ ಕಂ ಬ್ಯಾರೇಜ್, ಜೇವರ್ಗಿ ತಾಲ್ಲೂಕಿನಲ್ಲಿ ಬಾಂದಾರು ಹಾಗೂ ಕೆರೆ ತುಂಬಿಸುವ ಕಾಮಗಾರಿ ಮತ್ತು ಕುಕನೂರು ಹಾಗೂ ಯಲಬುರ್ಗಾ ತಾಲ್ಲೂಕಿನಲ್ಲಿ ಕೆರೆ/ ಬ್ರಿಡ್ಜ್ ಕಂ ಬ್ಯಾರೇಜ್ ಯೋಜನೆಗಳನ್ನು 8೫0 ಕೋಟಿ ರೂ. ಅಂದಾಜು ಮೊತ್ತದಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದು ಬಜೆಟ್ ಮಂಡನೆಯಲ್ಲಿ ಸಿಎಂ ಉಲ್ಲೇಖಿಸಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.