ಬೆಂಗಳೂರು: ಓಲಾ ಕ್ಯಾಬ್ ಸಂಚಾರವನ್ನು ಆರು ತಿಂಗಳು ನಿಷೇಧಿಸಿ ಪರವಾನಗಿ ರದ್ದುಗೊಳಿಸಿದ್ದ ಆದೇಶವನ್ನು ಕರ್ನಾಟಕ ಸರ್ಕಾರದ ಸಾರಿಗೆ ಇಲಾಖೆ ಭಾನುವಾರ ವಾಪಸ್ ಪಡೆದಿದೆ.


COMMERCIAL BREAK
SCROLL TO CONTINUE READING

ಸಂಚಾರ ತಂತ್ರಜ್ಞಾನ ಅಗ್ರಿಗೇಟರ್ ನಿಯಮಗಳನ್ನು ಉಲ್ಲಂಘಿಸಿ ಓಲಾ ಕಂಪನಿ, ಬೈಕ್ ಟ್ಯಾಕ್ಸಿಗಳನ್ನು ಕಾರ್ಯಾಚರಣೆಗಿಳಿಸಿದೆ ಎಂದು ಕಂಪನಿಗೆ ನೀಡಿದ್ದ ಪರವಾನಗಿಯನ್ನು ಆರು ತಿಂಗಳು ನಿಷೇಧಿಸಿ ಸರ್ಕಾರ ಆದೇಶಿಸಿತ್ತು. 


ಅನಿ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ (ಓಲಾ ಕ್ಯಾಬ್ಸ್), ಬೆಂಗಳೂರು, 2016 ರ ಕರ್ನಾಟಕ ಆನ್ ಬೇಡಿಕೆ ಸಾರಿಗೆ ತಂತ್ರಜ್ಞಾನ ಸಂಗ್ರಾಹಕರ ನಿಯಮಗಳನ್ನು ಉಲ್ಲಂಘಿಸಿದೆ ಎಂಬ ಡೆಪ್ಯುಟಿ ಟ್ರಾನ್ಸ್ಪೋರ್ಟ್ ಕಮೀಷನರ್ ಮತ್ತು ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಬೆಂಗಳೂರು (ದಕ್ಷಿಣ) ವರದಿಯ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿತ್ತು.


ಇದೀಗ ಕ್ಯಾಬ್ ಅಗ್ರಿಗೇಟರ್ ಓಲಾ ತನ್ನ ಸೇವೆ ಪುನರಾರಂಭಿಸಲು ಅವಕಾಶ ಮಾಡಿಕೊಡಲಾಗಿದೆ. ಓಲಾ ಕ್ಯಾಬ್ ಎಂದಿನಂತೆ ಸಂಚರಿಸಲಿವೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ ಖರ್ಗೆ ಟ್ವೀಟ್ ಮಾಡಿದ್ದಾರೆ.



ಈ ಸಂಬಂಧ ಶುಕ್ರವಾರ ರಾತ್ರಿಯೇ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಸೇರಿದಂತೆ ಸಾರಿಗೆ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ. 'ಏಕಾಏಕಿ ಇಂತಹ ನಿರ್ಧಾರ ಕೈಗೊಳ್ಳುವುದರಿಂದ ಸಾರ್ವಜನಿಕರಿಗೆ ಅನಾನುಕೂಲವಾಗುತ್ತದೆ. ಸಾರ್ವಜನಿಕರಿಗೆ ತೊಂದರೆಯಾಗುವುದನ್ನು ತಪ್ಪಿಸುವ ಸಲುವಾಗಿ ಕ್ಯಾಬ್ ಸೇವೆಗೆ ಅವಕಾಶ ಕಲ್ಪಿಸಬೇಕೆಂದು ಸೂಚಿಸಲಾಗಿದೆ. ಹೀಗಾಗಿ ಎಂದಿನಂತೆ ಕ್ಯಾಬ್ ಸೇವೆ ದೊರೆಯಲಿದೆ ಎಂದು ಸಚ್ವಿಯ ಪ್ರಿಯಾಂಕ ಖರ್ಗೆ ತಿಳಿಸಿದ್ದಾರೆ.