ಭಾರತದ ಬಾಹ್ಯಾಕಾಶ ಯೋಜನೆಗಳಲ್ಲಿ ಇಸ್ರೋದ ದಾಪುಗಾಲು ಮುಂದುವರಿದಿದ್ದು, ಈಗ ಇಸ್ರೋದ ಜೊತೆಗೂಡಿ, ಕರ್ನಾಟಕದ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಸಹ ಬಾಹ್ಯಾಕಾಶದಲ್ಲಿ ತನ್ನ ಹೆದ್ದೆರೆಗಳನ್ನು ಮೂಡಿಸುತ್ತಿದೆ. ಆದಿಚುಂಚನಗಿರಿ ಶಿಕ್ಷಣ ಟ್ರಸ್ಟಿನ ಚಿಕ್ಕಬಳ್ಳಾಪುರ ಎಸ್‌ಜೆಸಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಬೆಂಗಳೂರಿನ ಆರ್‌ವಿ ಇಂಜಿನಿಯರಿಂಗ್ ಕಾಲೇಜುಗಳು ಇಸ್ರೋದ ಮಹತ್ವಾಕಾಂಕ್ಷಿ ಸ್ಪೇಸ್ ಡಾಕಿಂಗ್ ಎಕ್ಸ್‌ಪರಿಮೆಂಟ್ (ಸ್ಪೇಡೆಕ್ಸ್) ಯೋಜನೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿವೆ. ಈ ಯೋಜನೆ ಬಾಹ್ಯಾಕಾಶದಲ್ಲಿ ಭಾರತದ ಸಾಮರ್ಥ್ಯವನ್ನು ಮರು ರೂಪಿಸುವ ಸಾಮರ್ಥ್ಯ ಹೊಂದಿದೆ. ಇಸ್ರೋ ಡಿಸೆಂಬರ್ 30ರಂದು ಭಾರತೀಯ ಕಾಲಮಾನದಲ್ಲಿ ರಾತ್ರಿ 9:58ಕ್ಕೆ ಸ್ಪೇಡೆಕ್ಸ್ ಉಡಾವಣೆಗೆ ಸಿದ್ಧತೆ ನಡೆಸುತ್ತಿದ್ದು, ಸಮಸ್ತ ಭಾರತವೇ ಬಾಹ್ಯಾಕಾಶ ಅನ್ವೇಷಣೆಯಲ್ಲಿ ಸ್ಪೇಡೆಕ್ಸ್‌ನ ನವಯುಗ ಆರಂಭವಾಗುವುದನ್ನು ಕಾತರದ ಕಣ್ಣುಗಳಿಂದ ಕಾಯುತ್ತಿದೆ.


COMMERCIAL BREAK
SCROLL TO CONTINUE READING

ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮಿಯವರ ಆಶೀರ್ವಾದ ಮತ್ತು ಸ್ವತಃ ಪ್ರತಿಷ್ಠಿತ ಐಐಟಿಯಿಂದ ಪದವಿ ಪಡೆದಿರುವ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾ ಸ್ವಾಮೀಜಿಯವರ ದೂರದೃಷ್ಟಿಯ ಮಾರ್ಗದರ್ಶನದಲ್ಲಿ ಎಸ್‌ಜೆಸಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸ್ಪೇಡೆಕ್ಸ್ ಯೋಜನೆಯ ಮೂಲಕ ಬಾಹ್ಯಾಕಾಶ ಅನ್ವೇಷಣೆಯಲ್ಲಿ ತನ್ನ ಹೊಸ ಅಧ್ಯಾಯವನ್ನು ಆರಂಭಿಸಿದೆ. ಎಸ್‌ಜೆಸಿ ಸಂಸ್ಥೆ ಅಭಿವೃದ್ಧಿ ಪಡಿಸಿರುವ ಬಿಜಿಎಸ್ ಅರ್ಪಿತ್ ಪೇಲೋಡ್ ಸಂವಹನ ಇಂಜಿನಿಯರಿಂಗ್ ನಲ್ಲಿ ಹೊಸ ಅದ್ಭುತವಾಗಿದೆ. ಬಿಜಿಎಸ್ ಅರ್ಪಿತ್ ಪೇಲೋಡ್ ಧ್ವನಿ, ಸಂದೇಶ ಮತ್ತು ಛಾಯಾಚಿತ್ರಗಳನ್ನು ಬಾಹ್ಯಾಕಾಶದಿಂದ ಎಫ್ಎಂ ಸಂಕೇತಗಳು ಮತ್ತು ವಿಎಚ್ಎಫ್ ಬ್ಯಾಂಡ್ ಮೂಲಕ ಭೂಮಿಗೆ ಕಳುಹಿಸುವ ಸಲುವಾಗಿ ವಿನ್ಯಾಸಗೊಂಡಿದ್ದು, ಇದು ಜಾಗತಿಕ ಅಮೆಚೂರ್ ರೇಡಿಯೋ ಸೇವೆಗಳಿಗೂ ಉತ್ತೇಜನ ನೀಡಲಿದೆ.


ಎಸ್‌ಜೆಸಿ ಸಂಸ್ಥೆಯ ಜೊತೆಗೆ ಕೈಜೋಡಿಸಿರುವ ಆರ್‌ವಿ ಕಾಲೇಜ್ ಆಫ್ ಇಂಜಿನಿಯರಿಂಗ್ ಸಹ ಸ್ಪೇಡೆಕ್ಸ್ ಯೋಜನೆಯಲ್ಲಿ ಮಹತ್ವದ ಜೀವಶಾಸ್ತ್ರೀಯ ಅಧ್ಯಯನ ನಡೆಸಲಿದೆ. ಆರ್‌ವಿ ಸಂಸ್ಥೆ ಬಾಹ್ಯಾಕಾಶದ ವಿಶಿಷ್ಟ ವಾತಾವರಣದಲ್ಲಿ ಕರುಳಿನ ಬ್ಯಾಕ್ಟೀರಿಯಾಗಳು ಹೇಗೆ ಬೆಳೆಯುತ್ತವೆ ಎಂಬುದರ ಅಧ್ಯಯನ ನಡೆಸಲಿದ್ದು, ಇದರ ಫಲಿತಾಂಶಗಳು ಗಗನಯಾತ್ರಿಗಳ ಆರೋಗ್ಯ ರಕ್ಷಣೆ ಮತ್ತು ಆಧುನಿಕ ಜೈವಿಕ ಪ್ರಕ್ರಿಯೆಗಳಿಗೆ ಬಹಳಷ್ಟು ನೆರವು ನೀಡಲಿವೆ.


ಇದನ್ನೂ ಓದಿ: Diabetes: ಮಜ್ಜಿಗೆಗೆ ಈ ಪುಡಿ ಬೆರಸಿ ಕುಡಿದರೆ ನಿಮಿಷಗಳಲ್ಲಿ ಕಂಟ್ರೋಲ್‌ಗೆ ಬರುತ್ತೆ ಬ್ಲಡ್‌ ಶುಗರ್‌..!


ಕರ್ನಾಟಕದ ಇಂಜಿನಿಯರಿಂಗ್ ಕಾಲೇಜುಗಳ ಇಂತಹ ಅಸಾಧಾರಣ ಕೊಡುಗೆಗಳು ಸ್ಪೇಡೆಕ್ಸ್ ಯೋಜನೆಯ ವಿಶಾಲ ಶ್ರೇಣಿಯಲ್ಲಿ ಸೂಕ್ತವಾಗಿ ಸೇರಿಸಲ್ಪಟ್ಟಿವೆ. ಸ್ಪೇಡೆಕ್ಸ್ ಯೋಜನೆಯೂ ಕಡಿಮೆ ವೆಚ್ಚದಾಯಕ ಯೋಜನೆಯಾಗಿದ್ದು, ನಂಬಿಕಾರ್ಹ ಪಿಎಸ್ಎಲ್‌ವಿ ರಾಕೆಟ್ ಮೂಲಕ ಬಾಹ್ಯಾಕಾಶಕ್ಕೆ ಸಾಗಿ, ಆ ಮ‌ೂಲಕ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಭಾರತದ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಲಿದೆ. ಸ್ಪೇಡೆಕ್ಸ್ ಯೋಜನೆ ಬಾಹ್ಯಾಕಾಶ ಡಾಕಿಂಗ್, ಅಂದರೆ ಬಾಹ್ಯಾಕಾಶದಲ್ಲಿ ಎರಡು ಬಾಹ್ಯಾಕಾಶ ನೌಕೆಗಳನ್ನು ಒಂದಕ್ಕೊಂದು ಜೋಡಿಸುವ ಅಸಾಧಾರಣ ಕೌಶಲವನ್ನು ಪ್ರದರ್ಶಿಸುವ ಗುರಿ ಹೊಂದಿದೆ. ಈ ಸಾಮರ್ಥ್ಯ ಕೇವಲ ತಾಂತ್ರಿಕ ಸಾಧನೆ ಮಾತ್ರವಲ್ಲದೆ, ಭಾರತದ ಭವಿಷ್ಯದ ಬಾಹ್ಯಾಕಾಶ ಮಹತ್ವಾಕಾಂಕ್ಷೆಗಳಾದ ಚಂದ್ರನ ಮೇಲೆ ಮಾನವ ಸಹಿತ ಪ್ರಯಾಣ, ಚಂದ್ರನಿಂದ ಮಾದರಿ ಸಂಗ್ರಹಣೆ, ಭಾರತೀಯ ಅಂತರಿಕ್ಷ ಸ್ಟೇಷನ್ (ಬಿಎಎಸ್) ಸೇರಿದಂತೆ, ವಿವಿಧ ಯೋಜನೆಗಳಿಗೆ ಅತ್ಯಂತ ಅವಶ್ಯಕವಾಗಿದೆ.


ಸ್ಪೇಡೆಕ್ಸ್ ಯೋಜನೆ ಚೇಸರ್ ಮತ್ತು ಟಾರ್ಗೆಟ್ ಎಂಬ ಹೆಸರಿನ, ತಲಾ 220 ಕೆಜಿ ತೂಕ ಹೊಂದಿರುವ ಎರಡು ಸಣ್ಣ ಉಪಗ್ರಹಗಳನ್ನು ಹೊಂದಿದ್ದು, ಇವುಗಳು ಭೂಮಿಯ ಕೆಳ ಕಕ್ಷೆಯಲ್ಲಿ ಸೂಕ್ಷ್ಮವಾಗಿ ಆಯೋಜಿಸುವ ಪ್ರಕ್ರಿಯೆಗಳನ್ನು ಕೈಗೊಳ್ಳಲಿದೆ. ಇವೆರಡೂ ಉಪಗ್ರಹಗಳು ಜೊತೆಯಾಗಿ ಉಡಾವಣೆಗೊಂಡರೂ, ಆರಂಭದಲ್ಲಿ ಅವೆರಡೂ ಪರಸ್ಪರ ದೂರಾಗಿರಲಿವೆ. ಬಳಿಕ, ಡಾಕಿಂಗ್ ಪ್ರಕ್ರಿಯೆಗೆ ಅವಶ್ಯಕವಾದ ನಿಖರ ಚಲನೆಗಳನ್ನು ಪ್ರದರ್ಶಿಸಲಿವೆ. ಈ ಪ್ರಕ್ರಿಯೆಯನ್ನು 'ಫಾರ್ ರೆಂಡೆಜ್ವಸ್' ಎಂದು ಕರೆಯಲಾಗುತ್ತದೆ. ಈ ಮೂಲಕ, ಅವುಗಳ ನಡುವಿನ ಅಂತರ ಹಂತ ಹಂತವಾಗಿ ಕಡಿಮೆಗೊಳಿಸುತ್ತಾ, ಭಾರತದ ಕಕ್ಷೀಯ ಚಲನೆಯ ಸಾಮರ್ಥ್ಯವನ್ನು ಪ್ರದರ್ಶಿಸಲಾಗುತ್ತದೆ. ಈ ಉಭಯ ಉಪಗ್ರಹಗಳು ಆರಂಭದಲ್ಲಿ ಪ್ರತಿ ಗಂಟೆಗೆ 28,800 ಕಿಲೋಮೀಟರ್ ವೇಗದಲ್ಲಿ ಚಲಿಸಲಿದ್ದು, ಅಂತಿಮವಾಗಿ ಪ್ರತಿ ಸೆಕೆಂಡಿಗೆ 10 ಮಿಲಿಮೀಟರ್ ವೇಗಕ್ಕೆ ಇಳಿಯಲಿವೆ.


ಸ್ಪೇಡೆಕ್ಸ್ ಯೋಜನೆ ಕೇವಲ ಬಾಹ್ಯಾಕಾಶ ಡಾಕಿಂಗ್ ಪ್ರಕ್ರಿಯೆಗೆ ಮಾತ್ರವೇ ಸೀಮಿತವಾಗಿರದೆ, ಬಾಹ್ಯಾಕಾಶ ನೌಕೆಗಳು ಕಕ್ಷೆಯಲ್ಲಿ ಪರಸ್ಪರ ವಿದ್ಯುತ್ ಶಕ್ತಿಯನ್ನು ಹಂಚಿಕೊಂಡು, ಸಹಯೋಗದೊಡನೆ ಕಾರ್ಯಾಚರಿಸಲಿವೆ. ಈ ಯೋಜನೆಯ ಪಿಎಸ್ಎಲ್‌ವಿ ಆರ್ಬಿಟಲ್ ಎಕ್ಸ್‌ಪರಿಮೆಂಟಲ್ ಮಾಡ್ಯುಲ್ - 4 (ಪಿಒಇಎಂ-4) 24 ಪೇಲೋಡ್‌ಗಳನ್ನು ಹೊಂದಿರಲಿದೆ. ಅವುಗಳಲ್ಲಿ 14 ಪೇಲೋಡ್‌ಗಳನ್ನು ಇಸ್ರೋ ನಿರ್ಮಿಸಿದ್ದರೆ, 10 ಪೇಲೋಡ್‌ಗಳನ್ನು ಖಾಸಗಿ ಸಂಸ್ಥೆಗಳು ಅಭಿವೃದ್ಧಿಪಡಿಸಿವೆ. ಇದು ಇನ್-ಸ್ಪೇಸ್ ಸಂಸ್ಥೆ ಭಾರತದ ಬಾಹ್ಯಾಕಾಶ ಸಾಮರ್ಥ್ಯವನ್ನು ವೃದ್ಧಿಸುತ್ತಿರುವುದಕ್ಕೆ ಕೈಗನ್ನಡಿಯಾಗಿದೆ.


ಸ್ಪೇಡೆಕ್ಸ್ ಮೂಲಕ ಭಾರತ ಕೇವಲ ಒಂದು ಪ್ರಯೋಗವನ್ನು ಮಾತ್ರವೇ ನಡೆಸುತ್ತಿಲ್ಲ. ಬದಲಿಗೆ ಭಾರತ ತನ್ನದೇ ಆದ ಪರಂಪರೆಯೊಂದನ್ನು ಸೃಷ್ಟಿಸುತ್ತಿದೆ. ಯೋಜನೆಯ ಯಶಸ್ಸಿನ ಮೂಲಕ, ಭಾರತ ಬಾಹ್ಯಾಕಾಶ ಡಾಕಿಂಗ್ ಸಾಮರ್ಥ್ಯ ಹೊಂದಿರುವ ಜಗತ್ತಿನ ಕೇವಲ ನಾಲ್ಕನೇ ರಾಷ್ಟ್ರವಾಗಿ ಹೊರಹೊಮ್ಮಲಿದೆ. ಆ ಮೂಲಕ ಭಾರತ ತಾನು ಬಾಹ್ಯಾಕಾಶ ತಂತ್ರಜ್ಞಾನದ ನವಯುಗಕ್ಕೆ ಸಿದ್ಧವಾಗಿರುವುದಾಗಿ ಸಂದೇಶ ನೀಡಲಿದೆ. ಈ ಯೋಜನೆ ಭಾರತದ ವೈಜ್ಞಾನಿಕ ಅಭಿವೃದ್ಧಿ, ತಾಂತ್ರಿಕ ನಾವೀನ್ಯತೆ, ಅಂತಾರಾಷ್ಟ್ರೀಯ ಸಹಯೋಗಕ್ಕೆ ಬದ್ಧತೆ ಪ್ರದರ್ಶಿಸಿದೆ.


ಇದನ್ನೂ ಓದಿ: ಟಿ20 ಬಳಿಕ ಟೆಸ್ಟ್‌ಗೂ ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾ ನಿವೃತ್ತಿ..!? ಬಿಸಿಸಿಐನಿಂದಲೇ ಹೊರಬಿತ್ತು ಶಾಕಿಂಗ್‌ ಅಪ್ಡೇಟ್


ಯೋಜನೆಯ ಉಡಾವಣೆಗೆ ಇನ್ನೇನು ಸಮಯ ಸಮೀಪಿಸುತ್ತಿದ್ದು, ಸಮಸ್ತ ಜಗತ್ತು ಭಾರತದತ್ತ ದೃಷ್ಟಿ ನೆಟ್ಟಿದೆ. ಸ್ಪೇಡೆಕ್ಸ್ ಯೋಜನೆಗೆ ಆದಿಚುಂಚನಗಿರಿಯ ಎಸ್‌ಜೆಸಿ ಇನ್ಸ್ಟಿಟ್ಯೂಟ್ ಮತ್ತು ಆರ್‌ವಿ ಕಾಲೇಜ್ ಆಫ್ ಇಂಜಿನಿಯರಿಂಗ್‌ಗಳೂ ಕೈಜೋಡಿಸಿವೆ. ಈ ಯೋಜನೆಯ ಮೂಲಕ ಕೇವಲ ಭಾರತದ ಬಾಹ್ಯಾಕಾಶ ಅಭಿವೃದ್ಧಿ ಮಾತ್ರವಲ್ಲದೆ, ಸಂಪೂರ್ಣ ಮಾನವ ಜನಾಂಗದ ಮಹತ್ವಾಕಾಂಕ್ಷೆಗಳೂ ಸಾಧಿಸಲ್ಪಡಲಿವೆ.


- ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ