ಕೊಡಗು ಪ್ರವಾಹ: ಮನೆ ಕಳೆದುಕೊಂಡವರಿಗೆ 2 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ ಕುಮಾರಸ್ವಾಮಿ
ಪ್ರವಾಹದಿಂದಾಗಿ ಮನೆಗಳನ್ನು ಕಳೆದುಕೊಂಡ ಅರ್ಹ ಫಲಾನುಭವಿಗಳನ್ನು ಗುರುತಿಸಿ ತಕ್ಷಣವೇ 2 ಲಕ್ಷ ರೂ.ಗಳವರೆಗೆ ಪರಿಹಾರ ಒದಗಿಸಲು ಸೂಚಿಸಲಾಗಿದೆ ಎಂದು ಸಿಎಂ ತಿಳಿಸಿದರು.
ಬೆಂಗಳೂರು: ಕೊಡಗು ಜಿಲ್ಲೆಯಲ್ಲಿ ಉಂಟಾಗಿರುವ ಭೀಕರ ಪ್ರವಾಹದಲ್ಲಿ ಸಿಲುಕಿಕೊಂಡವರಲ್ಲಿ 3500 ಮಂದಿಯನ್ನು ಈಗಾಗಲೇ ರಕ್ಷಣೆ ಮಾಡಲಾಗಿದ್ದು, ಪರಿಹಾರ ಕಾರ್ಯಕ್ಕೆ 100 ಕೋಟಿ ರೂ.ಗಳನ್ನು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಘೋಷಿಸಿದ್ದಾರೆ.
ಬೆಂಗಳೂರಿನ ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಉನ್ನತ ಮಟ್ಟದ ಅಧಿಕಾರಿಗಳು ಮತ್ತು ಸಚಿವರೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ 3,500ಕ್ಕೂ ಹೆಚ್ಚು ಪ್ರವಾಹ ಸಂತ್ರಸ್ತರನ್ನು ರಕ್ಷಿಸಲಾಗಿದ್ದು, 31 ಗಂಜಿ ಕೇಂದ್ರಗಳಲ್ಲಿ 2250 ಜನರು ಆಶ್ರಯ ಪಡೆದಿದ್ದಾರೆ. ಜೋಡುಪಾಲದಲ್ಲಿ 347 ಜನರನ್ನು ರಕ್ಷಿಸಲಾಗಿದೆ. ಕೊಡಗು ಭಾಗದಲ್ಲೂ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಪ್ರವಾಹದಿಂದ ಮನೆಗಳನ್ನು ಕಳೆದುಕೊಂಡ ಅರ್ಹ ಫಲಾನುಭವಿಗಳನ್ನು ಗುರುತಿಸಿ ತಕ್ಷಣವೇ 2 ಲಕ್ಷ ರೂ.ಗಳವರೆಗೆ ಪರಿಹಾರ ಒದಗಿಸಲು ಸೂಚಿಸಲಾಗಿದೆ ಎಂದು ಸಿಎಂ ತಿಳಿಸಿದರು.
ಭರ್ತಿಯಾದ ಜಲಾಶಯಗಳು
ಕಳೆದ ಕೆಲ ದಿನಗಳಿಂದ ಸುರಿದ ಭಾರೀ ಮಳೆಯಿಂದಾಗಿ ಜಲಾಶಯಗಳು ಭರ್ತಿಯಾದ ಹಿನ್ನೆಲೆಯಲ್ಲಿ ಶಿವಮೊಗ್ಗ, ಹಾಸನ, ಮೈಸೂರು ಜಿಲ್ಲೆಯ ಕೆಲ ಭಾಗಗಳಲ್ಲಿ ಹಾನಿಯಾಗಿದೆ. ಹಾನಿಯ ಬಗ್ಗೆ ಸಮಗ್ರ ಮಾಹಿತಿಯನ್ನು ಪಡೆದಿದ್ದೇನೆ. ಈ ಭಾಗಗಳಲ್ಲಿ ಅಡಿಕೆ, ಕಾಫಿ ಬೆಳೆಗಳಿಗೆ ಭಾರೀ ನಷ್ಟವಾಗಿದೆ. ಆದರೆ ಅತಿ ಹೆಚ್ಚು ನಷ್ಟ ಆಗಿರುವುದು ಕೊಡಗು ಜಿಲ್ಲೆಯಲ್ಲಿ. ಭೂಕುಸಿತದಿಂದ ಕೆಲವು ಸ್ಥಳಗಳಿಗೆ ತಲುಪಲು ಇನ್ನೂ ಸಾಧ್ಯವಾಗುತ್ತಿಲ್ಲ. ಮಣ್ಣು ತೆರವುಗೊಳಿಸಲು ಐವತ್ತಕ್ಕೂ ಹೆಚ್ಚು ಜೆಸಿಬಿಗಳ ಬಳಕೆ ಮಾಡಲಾಗುತ್ತಿದೆ ಎಂದು ಹೇಳಿದರು.
ರಕ್ಷಣಾ ತಂಡಗಳಿಂದ ನಿರಂತರ ಕಾರ್ಯಾಚರಣೆ
ಭೂಕುಸಿತದಿಂದ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗಿದ್ದು, ಪ್ರವಾಹ ಪೀಡಿತ ಪ್ರದೇಶಗಳಲ್ಲಿ 1000ಕ್ಕೂ ಹೆಚ್ಚು ರಕ್ಷಣಾ ಸಿಬ್ಬಂದಿ, 50 ಜೆಸಿಬಿಗಳು, 75 ಸೇನಾ ಇಂಜಿನಿಯರ್ಗಳು, NDRFನ 31, 550 ಮಂದಿ ಹೋಮ್ ಗಾರ್ಡ್'ಗಳು, ಅಗ್ನಿಶಾಮಕ ದಳ, ನೌಕಾ ಪಡೆ, NCC ಕೆಡೆಟ್ಗಳೂ ಸೇರಿ 920 ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ರಕ್ಷಣಾ ಕಾರ್ಯಕ್ಕೆ ಬೋಟ್‍ಗಳನ್ನು ಬಳಸಲಾಗುತ್ತಿದೆ. ಸೇನೆಯ ಹೆಲಿಕಾಫ್ಟರ್ ಮೂಲಕ ಜನರನ್ನು ರಕ್ಷಿಸಲಾಗಿದ್ದು, ಆಹಾರ ಪೂರೈಕೆಯನ್ನು ಮಾಡಲಾಗುತ್ತಿದೆ. ಸಂತ್ರಸ್ತರಿಗೆ ಶುದ್ಧ ಕುಡಿಯುವ ನೀರನ್ನು ಪೂರೈಸುವಂತೆ ಸೂಚಿಸಲಾಗಿದೆ. ಸಂತಸ್ತರಿಗೆ ಆಹಾರದ ಪೊಟ್ಟಣಗಳನ್ನು ರವಾನೆ ಮಾಡಲಾಗುತ್ತಿದೆ. ಅಧಿಕಾರಿಗಳು 24 ಗಂಟೆಯೂ ಕೆಲಸ ಮಾಡುತ್ತಿದ್ದಾರೆ ಎಂದು ಸಿಎಂ ತಿಳಿಸಿದರು.
ಅಗತ್ಯ ವಸ್ತುಗಳ ಪೂರೈಕೆಗೆ ಕ್ರಮ
ಕೊಡಗಿನಲ್ಲಿ ದೊಡ್ಡಮಟ್ಟದಲ್ಲಿ ಅನಾಹುತವಾಗಿದ್ದು, ತುರ್ತಾಗಿ ಅಗತ್ಯವಿರುವ ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್, ಸೀಮೆಎಣ್ಣೆಯನ್ನು ಆದ್ಯತೆ ಮೇರೆಗೆ ಪೂರೈಸಲು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಎಟಿಎಂಗಳಲ್ಲಿ ಹಣ ಪೂರೈಕೆ ಮಾಡುವಂತೆ ಬ್ಯಾಂಕ್ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಶುದ್ಧ ಕುಡಿಯುವ ನೀರು, ಮಕ್ಕಳಿಗೆ ಪೌಡರ್, ಹೊದಿಕೆ ಸೇರಿ ಎಲ್ಲಾ ಮೂಲ ಸೌಲಭ್ಯಗಳನ್ನು ನಿರಂತರವಾಗಿ ಒದಗಿಸಲಾಗುತ್ತಿದೆ ಎಂದು ಕುಮಾರಸ್ವಾಮಿ ವಿವರಿಸಿದರು.
ಮಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ 275 ದುರಸ್ತಿ
ಮಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿ 275 ಬಿರುಕು ಬಿಟ್ಟಿದ್ದು ಕುಸಿಯುತ್ತಿರುವುದರಿಂದ ತಾಂತ್ರಿಕ ತಜ್ಞರನ್ನು ನಿಯೋಜಿಸಲಾಗುತ್ತಿದೆ. ಜಿಲ್ಲೆಯಲ್ಲಿ 800ಕ್ಕೂ ಹೆಚ್ಚು ಮನೆಗಳು ಸಂಪೂರ್ಣ ನಾಶವಾಗಿದ್ದು, ಸಂತ್ರಸ್ತರ ದಾಖಲೆಗಳು ನಾಶವಾಗಿದೆ. ತಕ್ಷಣವೇ ಅವುಗಳ ನಕಲು ಪ್ರತಿಗಳನ್ನು ನೀಡಲು ವ್ಯವಸ್ಥೆ ಮಾಡಲಾಗುತ್ತಿದೆ. ಪಶ್ಚಿಮಘಟ್ಟ ಭಾಗದಲ್ಲಿ ಭೂಪರಿವರ್ತನೆ ಕಾರ್ಯಗಳನ್ನು ತಕ್ಷಣವೇ ಸ್ಥಗಿತಗೊಳಿಸಲು ಸೂಚಿಸಲಾಗಿದೆ. ಅತಿವೃಷ್ಟಿಯಿಂದ ಆಗಿರುವ ಸಮಸ್ಯೆಗಳಿಗೆ ಪ್ರಕೃತಿ ವಿಕೋಪದೊಂದಿಗೆ ಮಾನವ ನಿರ್ಮಿತ ಲೋಪದೋಷಗಳೂ ಕಾರಣ ಎನ್ನುವ ಬಗ್ಗೆ ಕೂಲಂಕುಷವಾಗಿ ಅಧ್ಯಯನ ನಡೆಸಿ, ಮುನ್ನೆಚ್ಚರಿಕೆ ವಹಿಸಲು ಸೂಚಿಸಿರುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.
ರಾಜ್ಯಾದ್ಯಂತ 11 ಸಾವಿರ ಮನೆಗಳಿಗೆ ಹಾನಿ, 153 ಮಂದಿ ಸಾವು
ಕಳೆದ ಏಪ್ರಿಲ್‍ನಿಂದ ಇಲ್ಲಿಯವರೆಗೆ ರಾಜ್ಯದಲ್ಲಿ ಮಳೆ ಅನಾಹುತಕ್ಕೆ 153 ಮಂದಿ ಮೃತಪಟ್ಟಿದ್ದು, 11,427 ಮನೆಗಳು ಹಾನಿಗೀಡಾಗಿವೆ. 723 ಜಾನುವಾರುಗಳು ಮೃತಪಟ್ಟಿವೆ. ಕೊಡಗಿನಲ್ಲಿ ಇದುವರೆಗೂ 6 ಮಂದಿ ಮೃತಪಟ್ಟಿದ್ದು, 800ಕ್ಕೂ ಹೆಚ್ಚು ಮನೆಗಳು ನಾಶವಾಗಿವೆ. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರಿನಲ್ಲಿ ನಿರಂತರವಾಗಿ ಮಳೆ ಬೀಳುತ್ತಿದ್ದು, ಅಡಿಕೆ, ಕಾಫಿ, ಕಾಳು ಮೆಣಸು ಬೆಳೆಗಳು ಹಾನಿಗೀಡಾಗಿವೆ. ಈ ಬಗ್ಗೆ ನಷ್ಟದ ವರದಿ ನೀಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಕುಮಾರಸ್ವಾಮಿ ಹೇಳಿದರು.