ಬೆಂಗಳೂರು: ರಾಜ್ಯ ಸರ್ಕಾರ ಜಾರಿಗೆ ತರಲು ಮುಂದಾಗಿರುವ ನೂತನ ಗೋಹತ್ಯೆ ನಿಷೇಧ ಮಸೂದೆಯು ರೈತರು ಹಾಗೂ ಚರ್ಮೊದ್ಯಮದ ಮೇಲೆ ತೀವ್ರ ಪರಿಣಾಮ ಬೀರಲಿದೆ. ಹೀಗಾಗಿ ವಯಸ್ಸಾದ ಜಾನುವಾರುಗಳನ್ನು ಸರ್ಕಾರವೇ ರೈತರಿಂದ ಖರೀದಿಸಿ, ಬಿಜೆಪಿ ಮುಖಂಡರ ಮನೆಯಲ್ಲೋ, ಜಮೀನಿನಲ್ಲೋ ಸಾಕಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ಆಗ್ರಹಿಸಿದ್ದಾರೆ.


COMMERCIAL BREAK
SCROLL TO CONTINUE READING

ವಿಧಾನಸೌಧದಲ್ಲಿ ಶುಕ್ರವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ನೂತನ ಗೋಹತ್ಯೆ ನಿಷೇಧ ಮಸೂದೆ ರೈತರು ಹಾಗೂ ಚರ್ಮೊದ್ಯಮದ ಮೇಲೆ ತೀವ್ರ ಪರಿಣಾಮ ಬೀರಲಿದ್ದು, ಗ್ರಾಮ ಪಂಚಾಯ್ತಿ ಚುನಾವಣೆ ನಂತರ ರಾಜ್ಯದ ಉದ್ದಗಲಕ್ಕೂ ಪ್ರತಿ ತಾಲೂಕು ಮಟ್ಟದಲ್ಲಿ ಜನಜಾಗೃತಿ ಕಾರ್ಯಕ್ರಮ ಮಾಡುತ್ತೇವೆ ಎಂದರು.


ಈ ಮಧ್ಯೆ ಮಯಸ್ಸಾದ ಹಾಗೂ ರೈತರಿಗೆ (Farmers) ಅನುಕೂಲವಾಗದ ಜಾನುವಾರುಗಳನ್ನು ರಾಜ್ಯ ಸರ್ಕಾರವೇ ಒಂದು ದರ ನಿಗದಿ ಮಾಡಿ ಅವರಿಂದ ಖರೀದಿ ಮಾಡಬೇಕು. ಹಸುಗಳ ಮಾಲೀಕತ್ವವನ್ನು ಸರಕಾರದ ಪ್ರತಿನಿಧಿಗಳೇ ಪಡೆದು, ಮಂತ್ರಿಗಳ ಮನೆಯಲ್ಲೋ, ಜಮೀನಿನಲ್ಲೋ ಸಾಕಲಿ ಎಂದು ಹೇಳಿದರು.


'ಕಾಂಗ್ರೆಸ್ ಪಕ್ಷದಲ್ಲಿ ವ್ಯಕ್ತಿ ಪೂಜೆಗೆ ಅವಕಾಶವಿಲ್ಲ, ಪಕ್ಷದ ಪೂಜೆ ಮಾಡಬೇಕು'


ಈ ಮಸೂದೆ ಚರ್ಮೊದ್ಯಮದ ಮೇಲೆ ಬಹಳ ಕೆಟ್ಟ ಪರಿಣಾಮ ಬೀರಲಿದೆ. ಇಡೀ ಪ್ರಪಂಚದ ಶೇಕಡಾ 11 ರಷ್ಟು ಚರ್ಮೊದ್ಯಮದ ಉತ್ಪಾದನೆ ಭಾರತದಲ್ಲಿದೆ. ಈಗ ಇಡೀ ಉದ್ಯಮ ಮುಚ್ಚಲಿದೆ. ಈ ವಲಯದಲ್ಲಿರುವ ಉದ್ಯೋಗಗಳ ಮೇಲೂ ಋಣಾತ್ಮಕ ಪರಿಣಾಮ ಬೀರಲಿದೆ. ಆ ಉದ್ಯೋಗಿಗಳಿಗೆ ಪರ್ಯಾಯ ಬದುಕಿನ ವ್ಯವಸ್ಥೆ ಕಲ್ಪಿಸಲು ಯಾವ ಯೋಜನೆ ರೂಪಿಸಲಾಗಿದೆ? ಎಂದು‌ ಪ್ರಶ್ನಿಸಿದರು.


'ಬಿಜೆಪಿ ಸರ್ಕಾರ ತನ್ನ ವೈಫಲ್ಯವನ್ನು ಮುಚ್ಚಿಹಾಕಿ ಜನರ ಗಮನ ಬೇರೆಡೆ ಸೆಳೆಯಲು ಗೋಹತ್ಯೆ ನಿಷೇಧ ಕಾಯ್ದೆ ತರುತ್ತಿದೆ'


ಇದು ಒಂದು ಸಮುದಾಯದವರನ್ನು ಟಾರ್ಗೆಟ್ ಮಾಡಲು ನಡೆದಿರುವ ಹುನ್ನಾರ. ಆದರಿದು ಒಂದು ಸಮುದಾಯಕ್ಕೆ ಸಂಬಂಧಿಸಿದ ವಿಚಾರವಲ್ಲ. ಈ ರಾಜ್ಯದ ರೈತರು, ಎಲ್ಲ ಸಮಾಜದ ವಿಚಾರ. ಅವರ ರಕ್ಷಣೆಗೆ ಯಾವ ರೀತಿ ಕಾರ್ಯಕ್ರಮ ರೂಪಿಸಬೇಕು ಎಂದು ಪಕ್ಷ ಚಿಂತನೆ ನಡೆಸಿದೆ. ನಾವು ಅಧಿಕಾರಕ್ಕೆ ಬಂದರೆ ಈ ಸರ್ಕಾರ ಜಾರಿಗೆ ತಂದಿರುವ ಎಲ್ಲಾ ಜನ ವಿರೋಧಿ ಕಾಯ್ದೆಗಳನ್ನು ಮುಲಾಜಿಲ್ಲದೆ ವಜಾಗೊಳಿಸುತ್ತೇವೆ ಎಂದು ಹೇಳಿದರು.