ಬೆಂಗಳೂರು : ನ್ಯಾಯಮೂರ್ತಿಗಳ ನೇಮಕಕ್ಕೆ ಆಗ್ರಹಿಸಿ ಕೇಂದ್ರ ಸರ್ಕಾರ ಮತ್ತು ಸುಪ್ರೀಂ ಕೋರ್ಟ್ ವಿರುದ್ಧ ಬೆಂಗಳೂರು ಹೈಕೋರ್ಟ್ ಮುಂದೆ ವಕೀಲರು ಸರಣಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. 


COMMERCIAL BREAK
SCROLL TO CONTINUE READING

ಬೆಂಗಳೂರು ವಕೀಲರ ಸಂಘ, ಬಾರ್ ಕೌನ್ಸಿಲ್ ಹಾಗೂ ಹಿರಿಯ ವಕೀಲ ಬಿ.ವಿ.ಆಚಾರ್ಯ ಅವರು ಸೇರಿದಂತೆ ನೂರಾರು ಸಂಖ್ಯೆಯಲ್ಲಿ ವಕೀಲರು ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದಾರೆ. 


ಹೈಕೋರ್ಟ್ ನಲ್ಲಿರುವ 62 ನ್ಯಾಯಮೂರ್ತಿಗಳ ಸ್ಥಾನಗಳ ಪೈಕಿ 38 ಸ್ಥಾನಗಳು ಖಾಲಿಯಿದ್ದು, ಆ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡುವಂತೆ ಒತ್ತಾಯಿಸಿ 8 ದಿನಗಳ ಧರಣಿ ಉಪವಾಸ ಸತ್ಯಾಗ್ರಹವನ್ನು ವಕೀಲರು ಆರಂಭಿಸಿದ್ದಾರೆ. 


ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ವಕೀಲ ಬಿ.ವಿ.ಆಚಾರ್ಯ ಅವರು, ಕರ್ನಾಟಕ ಹೈಕೋರ್ಟ್ನಲ್ಲಿ ಮೂರು ಲಕ್ಷಕ್ಕೂ ಹೆಚ್ಚಿನ ಪ್ರಕರಣಗಳು ಬಾಕಿ ಉಳಿದಿದ್ದು, ಈ ಪ್ರಕರಣಗಳನ್ನು ವಿಲೇವಾರಿ ಮಾಡಲು ಕನಿಷ್ಟವೆಂದರೂ 15 ವರ್ಷಗಳು ಬೇಕಾಗುತ್ತದೆ. ಇದರಿಂದ ಅರ್ಜಿದಾರರು ಸಮಸ್ಯೆ ಎದುರಿಸಲಿದ್ದಾರೆ.. ಹಾಗಾಗಿ ಕೂಡಲೇ ನ್ಯಾಯಮೂರ್ತಿಗಳ ನೇಮಕ ಮಾಡಬೇಕೆಂದು ಎಂದು ಒತ್ತಾಯಿಸಿದರು. 


ಮುಂದುವರೆದು ಮಾತನಾಡಿದ ಅವರು, ಒಂದು ವಾರದ ನಂತರವೂ ಸಮಸ್ಯೆ ಪರಿಹರಿಸದಿದ್ದರೆ ದೆಹಲಿಯ ಸಂಸತ್ ಭವನದ ಮುಂದೆ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. 


ಏತನ್ಮಧ್ಯೆ, ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, ಕೇಂದ್ರ ಸರ್ಕಾರ ನ್ಯಾಯಾಧೀಶರ ನೇಮಕದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಪ್ರಧಾನಿ ಮತ್ತು ಕಾನೂನು ಸಚಿವರನ್ನು ಭೇಟಿ ಮಾಡಿ ಕೇಂದ್ರದ ಮೇಲೆ ಒತ್ತಡ ಹೇರಲಾಗುವುದು ಎಂದು ಭರವಸೆ ನೀಡಿದ್ದಾರೆ.