ಬೆಂಗಳೂರು: ಕಳೆದ ಹಲವು ತಿಂಗಳಿಂದ ಮೌನ ವಹಿಸಿದ್ದ ಬಸವ ಧರ್ಮ ಪೀಠದ ಅಧ್ಯಕ್ಷೆ ಮಾತೆ ಮಹಾದೇವಿ ಲಿಂಗಾಯತ ಪ್ರತ್ಯೇಕ ಧರ್ಮದ ಬಗ್ಗೆ ಮತ್ತೆ ಧ್ವನಿಯೆತ್ತಿದ್ದಾರೆ.


COMMERCIAL BREAK
SCROLL TO CONTINUE READING

ಸೋಮವಾರ ನಗರದ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟಕ್ಕೆ ಚಾಲನೆ ನೀಡಲು ಮತ್ತು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ಸಲುವಾಗಿ ದೆಹಲಿಯಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮ ಸಮಾವೇಶ ನಡೆಸಲು ನಿರ್ಧರಿಸಿರುವುದಾಗಿ ತಿಳಿಸಿದರು.


ಹಿಂದಿನ ಸಿದ್ದರಾಮಯ್ಯ ಸರ್ಕಾರ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮ ಮಾನ್ಯತೆ ಸಿಗಬೇಕು ಎಂದು ತೀರ್ಮಾನಿಸಿ ಕೇಂದ್ರ ಸರ್ಕಾರಕ್ಕೆ ಕಡತವನ್ನು ಕಳುಹಿಸಿತ್ತು. ಆದರೆ, ಅದಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಲಿಲ್ಲ. ಇದೀಗ ಈ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಕೋಲ್ಡ್ ಸ್ಟೋರೇಜ್ ನಲ್ಲಿಟ್ಟಿದೆ. ಹಾಗಾಗಿ ಮತ್ತೆ ಕೇಂದ್ರದ ಮೇಲೆ ಒತ್ತಡ ಹಾಕಿ ಹೋರಾಟ ಮುಂದುವರೆಸುವುದಾಗಿ ಮಾತೆ ಮಹಾದೇವಿ ಹೇಳಿದರು.


ಈ ಹಿನ್ನೆಲೆಯಲ್ಲಿ ದೆಹಲಿಯ ತಾಲ್ಕಟೋರ ಒಳಾಂಗಣ ಕ್ರೀಡಾಂಗಣದಲ್ಲಿ ಇದೇ ಡಿಸೆಂಬರ್ 10, 11 ಮತ್ತು 12 ರಂದು ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ ಸಮಾವೇಶ ನಡೆಸಲು ತೀರ್ಮಾನಿಸಲಾಗಿದ್ದು, ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರ, ಗೋವಾ ರಾಜ್ಯಗಳಿಂದ ಬಸವ ತತ್ವ ಪ್ರತಿಪಾದಕರು ಈ ಸಮಾವೇಶದಲ್ಲಿ ಭಾಗಿಯಾಗುವ ನಿರೀಕ್ಷೆಯಿದೆ ಎಂದು ಮಾತೆ ಮಹಾದೇವಿ ತಿಳಿಸಿದರು.