ಮಹಾಕುಂಭ ಮೇಳ: ಮಂಡ್ಯದ ಕೆ.ಆರ್.ಪೇಟೆ ತಾಲೂಕಿನಲ್ಲಿ ಅಂಬಿಗರಹಳ್ಳಿಯ ತ್ರಿವೇಣಿ ಸಂಗಮದಲ್ಲಿ ಇಂದಿನಿಂದ (ಅಕ್ಟೋಬರ್ 13)  ಅಕ್ಟೋಬರ್ 16ರವರೆಗೆ  ಮಹಾಕುಂಭ ಮೇಳ ಮಹೋತ್ಸವ ನಡೆಯಲಿದೆ. ಕುಂಭ ಮೇಳದಲ್ಲಿ ಮಲೆ ಮಹದೇಶ್ವರ ಜಯಂತಿ, ಮಂಡ್ಯ ಜಿಲ್ಲಾ ಉತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು ಜಿಲ್ಲಾಡಳಿತದಿಂದ ಸಕಲ ಸಿದ್ದತೆ ಪೂರ್ಣಗೊಂಡಿದೆ. ಕುಂಭಮೇಳದ ಹಿನ್ನಲೆಯಲ್ಲಿ ಕೆ.ಆರ್.ಪೇಟೆ ಪಟ್ಟಣಕ್ಕೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. 


COMMERCIAL BREAK
SCROLL TO CONTINUE READING

ಮಲೆ ಮಹದೇಶ್ವರ ಬೆಟ್ಟದಿಂದ ಹೊರಟಿರುವ 3 ಜ್ಯೋತಿಗಳು ಇಂದು (ಅ. 13)  ತ್ರೀವೇಣಿ ಸಂಗಮದಲ್ಲಿ ಸೇರಲಿವೆ. ಇಂದು ಬೆಳಗ್ಗೆ 5ಗಂಟೆಗೆ  ಬ್ರಾಹ್ಮಿ ಮುಹೂರ್ತದಲ್ಲಿ ದೇವಾಲಯ ಪ್ರವೇಶ, ಭಗವಾಧ್ವಜ ಸ್ಥಾಪನೆ, ಹೋಮ ಹವನಗಳ ಮೂಲಕ ದೇವಾಲಯದಲ್ಲಿ ಪೂಜಾ ಕಾರ್ಯಕ್ರಮಗಳು ಆರಂಭವಾಗಿವೆ. ಮಧ್ಯಾಹ್ನ 2.30ಕ್ಕೆ ಕೆ.ಆರ್.ಪೇಟೆ ಪಟ್ಟಣದಲ್ಲಿ ಕರ್ನಾಟಕ ಹಾಗೂ ಹೊರ ರಾಜ್ಯಗಳ 112 ಸಾಂಸ್ಕೃತಿಕ ಕಲಾತಂಡಗಳೊಂದಿಗೆ 3 ಜ್ಯೋತಿ ರಥಗಳ ಮೆರವಣಿಗೆ ಜರುಗಲಿದೆ. ಸಂಜೆ 6 ಗಂಟೆಗೆ ಜಿಲ್ಲಾ ಉತ್ಸವ ಉದ್ಘಾಟನೆ ನಡೆಯಲಿದ್ದು, ಸಂಜೆ 6.30ಕ್ಕೆ ಕೆ.ಆರ್.ಪೇಟೆ ಪಟ್ಟಣದಲ್ಲಿ ಆಳ್ವಾಸ್‌ ಸಂಸ್ಥೆ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. 


ಮಹಾಕುಂಭ ಮೇಳ ಕಾರ್ಯಕ್ರಮವನ್ನು ಉದ್ಘಾಟಿಸಲಿರುವ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ:
ನಾಳೆ ಎಂದರೆ ಅಕ್ಟೋಬರ್ 14 ರಂದು ಬೆಳಗ್ಗೆ 11 ಗಂಟೆಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ಮಹಾಕುಂಭ ಮೇಳ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಅಕ್ಟೋಬರ್ 15 ರಂದು ಬೆಳಗ್ಗೆ 11 ಗಂಟೆಗೆ ಕುಂಭ ಮೇಳದ ಧಾರ್ಮಿಕ ಸಭೆ ಉದ್ಘಾಟನೆ ನಡೆಯಲಿದೆ. 


ಇದನ್ನೂ ಓದಿ- Invest Karnataka: ಇನ್ವೆಸ್ಟ್ ಕರ್ನಾಟಕ ಕಾರ್ಯಕ್ರಮದಿಂದ ಸಾವಿರಾರು ಉದ್ಯೋಗ ಸೃಷ್ಟಿ


ಸಮಾರೋಪಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್:
ಅಕ್ಟೋಬರ್ 16 ರಂದು ಬೆಳಗ್ಗೆ 11 ಗಂಟೆಗೆ ಮಹಾಕುಂಭ ಮೇಳ ಸಮಾರೋಪ ಸಮಾರಂಭ ನಡೆಯಲಿದ್ದು, ಈ ಸಮಾರಂಭದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್  ಭಾಗಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವೇಳೆ ರಾಜ್ಯದ ಮುಖ್ಯಮಂತ್ರಿಗಳಾದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರವರು ಕೂಡ ಭಾಗಿಯಾಗಲಿದ್ದಾರೆ. 


ಮಹಾ ಕುಂಭಮೇಳದ ಪುಣ್ಯ ಸ್ನಾನ:
ಅಕ್ಟೋಬರ್ 16 ರಂದು ಬೆಳಗ್ಗೆ 9.30ಕ್ಕೆ ಮಹಾಕುಂಭ ಮೇಳದ ಪುಣ್ಯ ಸ್ನಾನ ನಡೆಯಲಿದೆ. ಈ ಕುಂಭ ಮೇಳದಲ್ಲಿ 300ಕ್ಕೂ ಹೆಚ್ಚು ಧಾರ್ಮಿಕ ಗುರುಗಳು, 3 ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳು ಭಾಗಿಯಾಗುವ ನಿರೀಕ್ಷೆ ಇದೆ. ನಿರ್ಮಲಾನಂಧನಾಥ ಸ್ವಾಮೀಜಿ, ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಶಿವಾನಂದಪುರಿ ಸ್ವಾಮೀಜಿ ಸೇರಿದಂತೆ 30ಕ್ಕೂ ಹೆಚ್ಚು ಸ್ವಾಮೀಜಿಗಳ ದಿವ್ಯ ಸಾನ್ನಿಧ್ಯದಲ್ಲಿ ಪ್ರತಿ ದಿನ 2 ಲಕ್ಷದಂತೆ ಒಟ್ಟು 6 ಲಕ್ಷ ಜನರು ಭಾಗವಹಿಸುವ ನಿರೀಕ್ಷೆಯಿದೆ. ಇನ್ನು ಮಹಾ ಕುಂಭಮೇಳದಲ್ಲಿ ಸ್ವಾಮೀಜಿಗಳು, ಸಾಧು ಸಂತರು, ಅತಿ ಗಣ್ಯ ವ್ಯಕ್ತಿಗಳು ಹಾಗೂ ಭಕ್ತರಿಗೆ ಪ್ರತ್ಯೇಕ ಸ್ನಾನ ಘಟ್ಟದ ವ್ಯವಸ್ಥೆ ಮಾಡಲಾಗಿದೆ. ಇದಲ್ಲದೆ, ಮುನ್ನೆಚ್ಚರಿಕಾ ಕ್ರಮವಾಗಿ ಸಂಗಮದಲ್ಲಿ ನುರಿತ ಈಜುಗಾರರು, ಮುಳುಗು ತಜ್ಞರ ನಿಯೋಜನೆಯನ್ನು ಕೂಡ ಮಾಡಲಾಗಿದೆ. 


ಇದನ್ನೂ ಓದಿ- ಸ್ಪೂರ್ತಿದಾಯಕ ನಾಯಕರಿಗೆ ಸ್ಪಿರಿಟ್ ಆಫ್ ಟೈ ಟ್ರೈಲ್ ಬ್ಲೇಜರ್ಸ್ ಪ್ರಶಸ್ತಿ ಪ್ರದಾನ


ನಾಲ್ಕು ದಿನಗಳ ಕಾಲ ನಡೆಯಲಿರುವ ಈ ಮಹಾಕುಂಭ ಮೇಳದಲ್ಲಿ ಭಾಗವಹಿಸುವವರಿಗಾಗಿ ಊಟದ ವ್ಯವಸ್ಥೆ ಮಾಡಲಾಗಿದೆ. 200ಕ್ಕೂ ಹೆಚ್ಚು ಬಯೋ ಟಾಯ್ಲೆಟ್ ವ್ಯವಸ್ಥೆ ಮಾಡಲಾಗಿದ್ದು, ಯಾತ್ರಾರ್ಥಿಗಳಿಗೆ ಉಚಿತ ವೈ ಫೈ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಇದಲ್ಲದೆ, 200 ಸಾಧುಗಳ ವಾಸ್ತವ್ಯಕ್ಕೆ ಟೆಂಟ್ ನಿರ್ಮಾಣ ಮಾಡಲಾಗಿದ್ದು, ಭದ್ರತೆಗಾಗಿ 2000 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.