ತೀವ್ರಗೊಂಡ ಮಹದಾಯಿ ಹೋರಾಟ: ರೈತರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲು
ಬೆಂಗಳೂರು: ಮಹದಾಯಿ ಹಾಗೂ ಕಳಸಾ ಬಂಡೂರಿ ಯೊಜನೆಯ ಜಾರಿಗಾಗಿ ಹೋರಾಟ್ ತೀವ್ರ ಸ್ವರೂಪ ಪಡೆದು ಕೊಳ್ಳುತ್ತಿದ್ದು,ಈಗ ಈ ಯೋಜನೆಯ ಜಾರಿಗಾಗಿ ಒತ್ತಾಯಿಸಿ ರೈತರು ಮಲ್ಲೇಶ್ವರಂದಲ್ಲಿರುವ ಬಿಜೆಪಿಯ ಮುಖ್ಯ ಕಚೇರಿ ಎದುರು ಆಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಈ ಹೋರಾಟದಲ್ಲಿ ಭಾಗವಹಿಸಿದ್ದ ಹನುಮಂತಪ್ಪ ಎನ್ನುವವರು ಸೋಮವಾರ ತೀವ್ರ ಅಸ್ವಸ್ಥರಾಗಿದ್ದಾರೆ ಈ ಹಿನ್ನಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಹೋರಾತ್ರಿ ಧರಣಿ ನಡೆಸಿದ ಹಿನ್ನೆಲೆಯಲ್ಲಿ ರೈತ ಹನುಮಂತಪ್ಪ ಅವರು ಅಸ್ವಸ್ಥಗೊಂಡಿದ್ದರೆಂದು ಹೇಳಲಾಗುತ್ತಿದೆ.
ಇತ್ತೀಚಿಗೆ ಮಹಾದಾಯಿ ವಿಚಾರವಾಗಿ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ರವರು ನ್ಯಾಯಾಧಿಕರಣದ ಅಡಿಯಲ್ಲಿ ಕರ್ನಾಟಕಕ್ಕೆ ಮಹದಾಯಿ ನೀರನ್ನು ಹಂಚಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರಿಗೆ ಪತ್ರ ಬರೆದಿದ್ದರು. ಇದರ ವಿಚಾರವಾಗಿ ನದಿ ಸಮಸ್ಯೆ ಬಗೆ ಹರಿಸುವ ನಿಟ್ಟಿನಲ್ಲಿ ಸ್ಥಳ ಮತ್ತು ದಿನಾಂಕವನ್ನು ನಿಗದಿಪಡಿಸಿ ಎಂದು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೆ ರತ್ನಪ್ರಭಾ ಅವರು ಗೋವಾದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರು.ಆದರೆ ಇದಕ್ಕೆ ಇನ್ನು ಉತ್ತರ ಬಂದಿಲ್ಲ.
ಕಳೆದ ವಾರದಂದು ಮಹದಾಯಿ ವಿಷಯವನ್ನ್ನು ಬಗೆ ಹರಿಸುತ್ತೇವೆ ಎಂದು ಹುಬ್ಬಳ್ಳಿಯಲ್ಲಿ ನಡೆದ ಪರಿವರ್ತನಾ ರ್ಯಾಲಿಯಲ್ಲಿ ಯಡಿಯೂರಪ್ಪನವರು ಭರವಸೆ ನೀಡಿದ ಹಿನ್ನಲೆಯಲ್ಲಿ ರೈತ ಸೇನಾ ಕರ್ನಾಟಕ ಸಂಘಟನೆ ನೇತೃತ್ವದಲ್ಲಿ ರೈತರು ಕಳೆದೆರೆಡು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.
ಮಹದಾಯಿ ಹೋರಾಟಗಾರರ ಬಗ್ಗೆ ಹಗುರವಾಗಿ ಮಾತನಾಡಬೇಡಿ. ನೀರು ಕೊಡಿಸಲು ಆಗುವುದೋ ಇಲ್ಲವೋ ಎನ್ನುವುದನ್ನು ಮೊದಲು ಸ್ಪಷ್ಟಪಡಿಸಿ ಸ್ಪಷ್ಟಪಡಿಸಿ ಎಂದು ಬಿಜೆಪಿ ನಾಯಕರಿಗೆ ರೈತ ಮುಖಂಡ ವೀರೇಶ್ ಸೊಬರದ ಮಠ ಒತ್ತಾಯಿಸಿದ್ದಾರೆ. ಅಲ್ಲದೆ ಇದೆ 27 ರಂದು ಮಹದಾಯಿ ವಿಚಾರವಾಗಿ ಉತ್ತರ ಕರ್ನಾಟಕವನ್ನು ಬಂದ್ ಮಾಡುವುದರ ಮೂಲಕ ಈ ಸಮಸ್ಯೆ ಪರಿಹಾರಕ್ಕಾಗಿ ಆಗ್ರಹಿಸಲಾಗುವುದೆಂದು ರೈತ ಸಂಘಟನೆಗಳು ಹೇಳಿವೆ. ಈ ಹೋರಾಟವನ್ನು ಬೆಂಬಲಿಸಿ ಕನ್ನಡ ಪರ ಸಂಘಟನೆಗಳು ಸಹ ಭಾಗವಹಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.