ಬೆಂಗಳೂರು: ಸೋಮವಾರ (ಜನವರಿ 20) ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಸಿಕ್ಕ ಪ್ರಕರಣಕ್ಕೆ ಸಂಬಂಧಿಸಿದಂತೆ ಆದಿತ್ಯ ರಾವ್ ಎಂಬ ವ್ಯಕ್ತಿ ಬೆಂಗಳೂರಿನಲ್ಲಿ ಬುಧವಾರ (ಜನವರಿ 22) ಪೊಲೀಸರ ಮುಂದೆ ಶರಣಾಗಿದ್ದಾನೆ. ರಾವ್ ಅವರು ಮಾನಸಿಕವಾಗಿ ಅಸ್ವಸ್ಥರಾಗಿರುವ ಕಾರಣ ಅವರ ಪ್ರಸ್ತುತ ಮಾನಸಿಕ ಸ್ಥಿತಿಯನ್ನು ನಾವು ಪರಿಶೀಲಿಸಬೇಕಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಈ ಪ್ರಕರಣಕ್ಕೆ ಸಂಬಂಧಿಸಿದ ಬೆಳವಣಿಗೆಗಳ ಬಗ್ಗೆ ತನಿಖೆ ನಡೆಸಲು ಪೊಲೀಸ್ ಅಧಿಕಾರಿಗಳ ತಂಡ ಶೀಘ್ರದಲ್ಲೇ ಬೆಂಗಳೂರಿಗೆ ತೆರಳಲಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಹರ್ಷ ಹೇಳಿದರು. ತಂಡವು ಶಂಕಿತನನ್ನು ವಿಚಾರಣೆ ನಡೆಸಿ ಮುಂದಿನ ಅಗತ್ಯ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.



ಸೋಮವಾರ, ಮಂಗಳೂರು ವಿಮಾನ ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ಕಾಣುವ ಬ್ಯಾಗ್ ಒಂದು ಪತ್ತೆಯಾಗಿತ್ತು. ವಿಮಾನ ನಿಲ್ದಾಣದ ಟಿಕೆಟ್ ಕೌಂಟರ್ ಬಳಿ ಪ್ರಯಾಣಿಕರಿ ವಿಶ್ರಾಂತಿ ಪ್ರದೇಶದಲ್ಲಿ ಚೀಲ ಪತ್ತೆಯಾಗಿತ್ತು. ಮಾಹಿತಿ ಬಂದ ಕೂಡಲೇ ಪೊಲೀಸರು ಮತ್ತು ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಕ್ರಮ ಕೈಗೊಂಡು ಬ್ಯಾಗ್ ಅನ್ನು ತಮ್ಮ ವಶಕ್ಕೆ ತೆಗೆದುಕೊಂಡರು. 


ಅನುಮಾನಾಸ್ಪದ ವಸ್ತುವಿನಲ್ಲಿ ಇಂಪ್ರೂವೈಸ್ಡ್ ಸ್ಫೋಟಕ ಸಾಧನ (ಐಇಡಿ) ಯ ಕುರುಹುಗಳಿವೆ ಎಂದು ಮಂಗಳೂರು ಪೊಲೀಸ್ ಡಿಐಜಿ ಅನಿಲ್ ಪಾಂಡೆ ದೃಢಪಡಿಸಿದರು ಮತ್ತು ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಬಾರಿ ಕಟ್ಟೆಚ್ಚರ ವಹಿಸಲಾಗಿತ್ತು. ಮಂಗಳೂರು ವಿಮಾನ ನಿಲ್ದಾಣದಲ್ಲಿ ಅನುಮಾನಾಸ್ಪದ ವಸ್ತು ಪತ್ತೆ ವಿಚಾರ ಭಾರೀ ಸಂಚಲನವನ್ನೇ  ಮೂಡಿಸಿತ್ತು.


ಇನ್ನು ಘಟನೆಗೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿದ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನೂ ಪಡೆದು ಆಟೋರಿಕ್ಷಾದಲ್ಲಿ ಬ್ಯಾಗ್ ಬಿಟ್ಟುಹೋದ ಶಂಕಿತನನ್ನು ಗುರುತಿಸಿದರು. ಈ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದರು. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಾಣಿಸಿಕೊಂಡಿದ್ದ ಶಂಕಿತ ಮತ್ತು ಆಟೋರಿಕ್ಷಾ ಛಾಯಾಚಿತ್ರವನ್ನು ಮಂಗಳೂರು ಪೊಲೀಸರು ಬಿಡುಗಡೆ ಮಾಡಿದ್ದರು.


ಅಲ್ಲದೆ ಆರೋಪಿ ಪತ್ತೆಗಾಗಿ ಮಂಗಳೂರು, ಬೆಂಗಳೂರು, ಮೈಸೂರು, ಉಡುಪಿ, ಹಾಸನ, ಶಿವಮೊಗ್ಗ ಸೇರಿದಂತೆ ಹಲವು ಪ್ರಮುಖ ನಗರಗಳಲ್ಲಿ ಪೊಲೀಸರು ಜಾಲ ಬೀಸಿದ್ದರು. ಆದರೆ ಪೊಲೀಸರ ಕೈಗೆ ಸಿಗದ ಆರೋಪಿ ಆಡಿತ್ಯರಾವ್ ವೇಷ ಮರೆಸಿಕೊಂಡು ಲಾರಿ ಹತ್ತಿ ಬೆಂಗಳೂರಿಗೆ ಬಂದು ಡಿಜಿ ಕಚೇರಿಯಲ್ಲಿ ಪೊಲೀಸರಿಗೆ ಶರಣಾಗಿದ್ದಾನೆ.


ಬೆಂಗಳೂರಿನಲ್ಲಿ ಡಿಜಿ ಕಚೇರಿಗೆ ಬಂದ ಈತ ಯಾರಿಗೂ ಯಾವ ಮಾಹಿತಿಯನ್ನೂ ನೀಡದೆ ತಾನು ಡಿಜಿ ಅವರನ್ನು ಭೇಟಿಯಾಗಬೇಕು ಎಂದಷ್ಟೇ ಹೇಳಿದ್ದಾನೆ. ಕಚೇರಿಯ ನಿಯಮದಂತೆ ರಿಜಿಸ್ಟರ್ ನಲ್ಲಿ ಎಂಟ್ರಿ ಮಾಡಲು ತಿಳಿಸಿದಾಗ ಆತ ತನ್ನ ಹೆಸರು ವಿಳಾಸ ಎಲ್ಲವನ್ನೂ ನಮೂದಿಸಿದ್ದಾನೆ. ಆತನ ಬಗ್ಗೆ ಪೊಲೀಸರು ವಿಚಾರಿಸಿದಾಗ ತಾನೇ ಮಂಗಳೂರಿನಲ್ಲಿ ಬಾಂಬ್ ಇಟ್ಟಿದ್ದು ಎಂದು ಆದಿತ್ಯ ರಾವ್ ಮಾಹಿತಿ ನೀಡಿದ್ದಾನೆ. ಬಳಿಕ ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು ಎಂದು ತಿಳಿದು ಬಂದಿದೆ. 



ಯಾರೀ ಬಂಧಿತ ಆರೋಪಿ ಆದಿತ್ಯ ರಾವ್?
ಆದಿತ್ಯ ರಾವ್ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸೆಕ್ಯೂರಿಟಿ ಆಗಿ ಕೆಲಸ ಮಾಡುತ್ತಿದ್ದರು. ಎಂಜಿನಿಯರಿಂಗ್ ಪದವೀದರರಾಗಿರುವ ಇವರು ವಿಮಾನ ನಿಲ್ದಾಣದಲ್ಲಿ ಕೆಲಸಕ್ಕಾಗಿ ಸಾಕಷ್ಟು ಪ್ರಯತ್ನ ಪಟ್ಟಿದ್ದು, ಕೆಲಸ ಸಿಗದೇ ಮಾನಸಿಕವಾಗಿ ಕುಗ್ಗಿದ್ದರು ಎನ್ನಲಾಗಿದೆ.