ನೂತನ ಗೃಹ ಸಚಿವರಿಗೆ ತಲೆ ನೋವಾದ ಮಂಗಳೂರು ಚಲೋ ಚಳುವಳಿ..
ನಾವು ಬಳ್ಳಾರಿಗೆ ನಡೆದುಕೊಂಡು ಹೋಗಿದ್ದೆವು, ಅಂತೆಯೇ ಬಿಜೆಪಿಯವರೂ ಮಂಗಳೂರಿಗೆ ನಡೆದುಕೊಂಡು ಹೋಗಲಿ. ನಡೆದುಕೊಂಡು ಹೋದಾಗ ಟ್ರಾಫಿಕ್ ನಿಯಮಾವಳಿ ಅನ್ವಯವಾಗುವುದಿಲ್ಲ ಎಂದು ರ್ಯಾಲಿ ಬಗ್ಗೆ ಗೃಹ ಸಚಿವ ರಾಮಲಿಂಗರೆಡ್ಡಿ ಹೇಳಿಕೆ ನೀಡಿದ್ದಾರೆ.
ಬೆಂಗಳೂರು: ಗೃಹ ಸಚಿವರಾದ ಎರಡೇ ದಿನದಲ್ಲಿ ರಾಮಲಿಂಗಾ ರೆಡ್ಡಿಗೆ 'ಮಂಗಳೂರು ಚಲೋ' ಚಳುವಳಿಯು ದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ವಿಷಯದಲ್ಲಿ ಸ್ಬಲ್ಪ ಹೆಚ್ಚು ಕಮ್ಮಿ ಆದರೂ ಅದು ಸರ್ಕಾರಕ್ಕೆ ಕುತ್ತು ತರುವ ಸಂಭವವಿದೆ.
ಒಂದು ಕಡೆ ಬಿಜೆಪಿಯಿಂದ ಮಂಗಳೂರು ಚಳುವಳಿ, ಮತ್ತೊಂದು ಕಡೆ ಚಳುವಳಿ ಹತ್ತಿಕ್ಕಲು ಕಾಂಗ್ರೆಸ್ ಪಕ್ಷದಿಂದ ಒತ್ತಡ. ರಾಮಲಿಂಗಾರೆಡ್ಡಿಗೆ ಎರಡನ್ನು ಸಮರ್ಥವಾಗಿ ನಿಭಾಯಿಸಬೇಕಾದ ಅನಿವಾರ್ಯತೆ ಈಗ ಎದುರಾಗಿದೆ.
ಈ ಸವಾಲನ್ನು ಮೆಟ್ಟಿ ನಿಲ್ಲಲು ರಾಮಲಿಂಗಾ ರೆಡ್ಡಿ ಗಂಭೀರ ಸಮಾಲೋಚನೆ ನಡೆಸಿದ್ದಾರೆ. ಪೊಲೀಸ್ ಇಲಾಖೆಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿರುವ ಗೃಹ ಸಚಿವ ರಾಮಲಿಂಗಾ ರೆಡ್ಡಿ,ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಗೃಹ ಸಚಿವರು ಪೊಲೀಸ್ ಇಲಾಖೆಯ ಅಧಿಕಾರಿಗಳೊಂದಿಗೆ ಖುದ್ದು ಸಂಪರ್ಕದಲ್ಲಿದ್ದು, ಪರಿಸ್ಥಿತಿ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.
ಈ ಬಗ್ಗೆ ನಿನ್ನೆ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಟಿ ನಡೆಸಿದ ರಾಮಲಿಂಗರೆಡ್ಡಿ, ಬಿಜೆಪಿ ಯುವ ಮೋರ್ಚ ರ್ಯಾಲಿ ನಡೆಸಲು ಅನುಮತಿ ಕೇಳಿದೆ. ಇದನ್ನು ಆಯಾಯಾ ಜಿಲ್ಲಾ ಪೊಲೀಸ್ ವರಿಷ್ಟರು ನಿರ್ಧರಿಸುತ್ತಾರೆ. ರಾಹುಲ್ ಗಾಂಧಿ ಬೆಂಗಳೂರಿಗೆ ಬಂದಾಗಲೂ ನಾವು ಅನುಮತಿ ತೆಗೆದುಕೊಂಡಿದ್ದೆವು.
ಪೊಲೀಸರು, ಎಷ್ಟು ಜನ ರ್ಯಾಲಿಯಲ್ಲಿ ಹೋಗ್ತಾರೆ ? ಟ್ರಾಫಿಕ್ ವಿಚಾರಗಳ ಬಗ್ಗೆ ಸ್ಪಷ್ಟನೆ ಕೇಳಿದ್ದಾರೆ. ಪೊಲೀಸ್ ಆಯುಕ್ತರಿಗೆ ವಿವರ ನೀಡಿದರೆ ರ್ಯಾಲಿಗೆ ಅನುಮತಿ ನೀಡಬಹುದು ಎಂದು ಸಚಿವರು ತಿಳಿಸಿದರು.
ಈ ಬಗ್ಗೆ ವಿವರಣೆ ನೀಡಿದ ಸಚಿವರು ಯಾವ್ಯಾವ ಜಿಲ್ಲೆಯಿಂದ ರ್ಯಾಲಿ ಪ್ರಾರಂಭವಾಗುತ್ತೋ ಅಲ್ಲಿ ಅನುಮತಿ ಕೇಳಬೇಕು. ಬೆಂಗಳೂರಿನಿಂದ 5 ಸಾವಿರ ಬೈಕ್ ಹೊರಡುತ್ತೆ ಎಂಬ ಮಾಹಿತಿ ಇದೆ. ಬೈಕ್ ರ್ಯಾಲಿ ಹೋಗುವ ರಸ್ತೆಯ ಟ್ರಾಫಿಕ್ ಡೈವರ್ಟ್ ಮಾಡಬೇಕಾಗುತ್ತದೆ ಹಾಗೂ ಇದರಿಂದ ರಾಷ್ಟ್ರೀಯ ಹೆದ್ದಾರಿ ಇಡೀ ದಿನ ಬ್ಲಾಕ್ ಆಗುತ್ತದೆ. ಆದುದರಿಂದ ಪೊಲೀಸರು ಸ್ಪಷ್ಟನೆ ಕೇಳಿದ್ದಾರೆ ಎಂದು ವಿವರಿಸಿದರು.
ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿಕೆ:
ನಾವು ಬಳ್ಳಾರಿಗೆ ನಡೆದುಕೊಂಡು ಹೋಗಿದ್ದೆವು, ಅಂತೆಯೇ ಬಿಜೆಪಿಯವರೂ ಮಂಗಳೂರಿಗೆ ನಡೆದುಕೊಂಡು ಹೋಗಲಿ. ನಡೆದುಕೊಂಡು ಹೋದಾಗ ಟ್ರಾಫಿಕ್ ನಿಯಮಾವಳಿ ಅನ್ವಯವಾಗುವುದಿಲ್ಲ ಎಂದು ರ್ಯಾಲಿ ಬಗ್ಗೆ ಗೃಹ ಸಚಿವ ರಾಮಲಿಂಗರೆಡ್ಡಿ ಹೇಳಿಕೆ ನೀಡಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ಮಾಡೋದಕ್ಕೆ ಎಲ್ಲರಿಗೂ ಅವಕಾಶ ಇದೆ. ನಾವು ಕೂಡ ಬಳ್ಳಾರಿಗೆ ಪಾದಯಾತ್ರೆ ಮಾಡಿದ್ದೇವು.
ಆಯಾ ಭಾಗದಲ್ಲಿ ಪೊಲೀಸರ ಅನುಮತಿಯನ್ನು ಕೇಳಿದ್ದಾರೆ. ಪೊಲೀಸರು ಕೆಲವೊಂದು ಸ್ಪಷ್ಟೀಕರಣವನ್ನು ಕೇಳಿದ್ದಾರೆ. ಎಷ್ಟು ಜನ ಸೇರುತ್ತಾರೆ? ಯಾವ ರಸ್ತೆಗಳಲ್ಲಿ ಹೋಗ್ತಾರೆ?ಎಲ್ಲಿ ವಿಶ್ರಾಂತಿ ಪಡೆಯುತ್ತಾರೆ ? ರಾಷ್ಟ್ರೀಯ ಹೆದ್ದಾರಿಗಳಲ್ಲಿ ರ್ಯಾಲಿ ಹೋಗ್ತಾರಾ..? ಎಂಬುದನ್ನು ಖಚಿತ ಪಡಿಸುವುದು ಮುಖ್ಯವಾಗಿದೆ. ಆದ್ದರಿಂದಲೇ ಪೊಲೀಸರು ಸ್ಪಷ್ಟೀಕರಣ ಕೇಳಿದ್ದಾರೆ ಎಂದು ಸಚಿವರು ಹೇಳಿಕೆ ನೀಡಿದ್ದಾರೆ. ಸೂಕ್ತ ಸ್ಪಷ್ಟೀಕರಣ ನೀಡಿದರೆ ಪೊಲೀಸರು ಅನುಮತಿ ನೀಡುವುದಾಗಿಯೂ ಸಚಿವರು ತಿಳಿಸಿದರು.
ಇದಲ್ಲದೆ ಐದು ಭಾಗದಿಂದ ಬೈಕ್ ರ್ಯಾಲಿ ಮಾಡೋದ್ರಿಂದ ಜನರಿಗೆ ಸಮಸ್ಯೆ ಆಗಲಿದೆ. ಬೈಕ್ ರ್ಯಾಲಿ ಮಾಡುವ ಬದಲು ಮಂಗಳೂರುನಲ್ಲೇ ಸಮಾವೇಶ ಮಾಡಿ ಎಂದು ನಾನು ಕೂಡ ಸಲಹೆ ನೀಡಿರುವುದಾಗಿ ಸಚಿವರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.