ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಡಿಸಿರುವ ಬಜೆಟ್ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಮಾಜಿ ಸಚಿವ ಹಾಗೂ ಕಾಂಗ್ರೆಸ್ ನಾಯಕ ಎಂ.ಬಿ.ಪಾಟೀಲ್ ರಾಜ್ಯ ಸರ್ಕಾರದ ಬಜೆಟ್ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಜೆಟ್ ಕುರಿತಾಗಿ ಅವರು ಮಾಡಿರುವ ಸರಣಿ ಟ್ವೀಟ್ ಗಳ ಗುಚ್ಛ ಇಲ್ಲಿದೆ.


COMMERCIAL BREAK
SCROLL TO CONTINUE READING

'ರಾಜ್ಯ ಬಜೆಟ್ ಸತ್ವ ಇಲ್ಲದ ನೀರಸ ಬಜೆಟ್. ಹಳೆಯ ಯೋಜನೆಗಳನ್ನು ಬಿಟ್ಟರೆ ಹೊಸ ಯೋಜನೆಗಳಿಲ್ಲ. ಕೇಂದ್ರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯವನ್ನು ಪ್ರಶ್ನೆ ಮಾಡುವ ತಾಕತ್ತು ಯಾರಿಗೂ ಇಲ್ಲ. ಹಣವೇ ಇಲ್ಲ ಎಂದ ಮೇಲೆ ಬಜೆಟ್ ನಲ್ಲಿನ ಯೋಜನೆಗಳನ್ನು ಹೇಗೆ ಪೂರೈಸುತ್ತಾರೆ. ರೈತರಿಗೆ ಈ ಬಜೆಟ್ ನಲ್ಲಿ ಅನ್ಯಾಯ ಮಾಡಲಾಗಿದೆ' ಎಂದು ಎಂ.ಬಿ.ಪಾಟೀಲ್ ಕಿಡಿಕಾರಿದ್ದಾರೆ.



ಇದೇ ವೇಳೆ ರಾಜ್ಯದ ಬಿಜೆಪಿ ಸಂಸದರನ್ನು ತರಾಟೆಗೆ ತೆಗೆದುಕೊಂಡು ಅವರು 'ಕೇಂದ್ರದಿಂದ ರಾಜ್ಯಕ್ಕೆ ಕಾನೂನು ಪ್ರಕಾರ ಸಿಗಬೇಕಾದ ಹಣ ಇನ್ನೂ ಸಿಕ್ಕಿಲ್ಲ. ಇದರ ವಿರುದ್ಧ ಪ್ರಶ್ನೆಮಾಡುವ ತಾಕತ್ತು ರಾಜ್ಯದ ಯಾವ ಬಿಜೆಪಿ ನಾಯಕರಿಗೂ ಇಲ್ಲ. 25 ಬಿಜೆಪಿ ಸಂಸದರು ಇದ್ದೂ ಏನೂ ಪ್ರಯೋಜನವಾಗಿಲ್ಲ. ಪ್ರಶ್ನೆ ಮಾಡಿದರೆ ತಮ್ಮ ಖುರ್ಚಿಗೆ ಆಪತ್ತು ಬರುತ್ತೋ ಎಂಬ ಭಯದಲ್ಲೇ ಬದುಕುತ್ತಿದ್ದಾರೆ' ಎಂದು ವ್ಯಂಗ್ಯವಾಡಿದ್ದಾರೆ.



ಇನ್ನೊಂದೆಡೆಗೆ ಕೃಷ್ಣಾ ಮೇಲ್ದಂಡೆಗೆ ಹಣ ಮೀಸಲಿಡುವ ವಿಚಾರವಾಗಿ ರಾಜ್ಯ ಸರ್ಕಾರ ಆಸಕ್ತಿ ತೋರದಿರುವುದಕ್ಕೆ ಅವರು ತಮ್ಮ ಟ್ವೀಟ್ ನಲ್ಲಿ ನೇರವಾಗಿ ಸಿಎಂ ಯಡಿಯೂರಪ್ಪನವರನ್ನು ವ್ಯಂಗ್ಯವಾಡಿದ್ದಾರೆ. 'ಬಿ.ಎಸ್ ಯಡಿಯೂರಪ್ಪ ಅವರೆ ನಿಮ್ಮ ಸರ್ಕಾರ ಕೃಷ್ಣಾ ಮೇಲ್ದಂಡೆ ಯೋಜನೆಗೆ ಬಜೆಟ್ ನಲ್ಲಿ ಪ್ರತ್ಯೇಕ 20,000 ಕೋಟಿ ಹಣ ಮೀಸಲಿಡುತ್ತೇವೆ ಎಂದಿದ್ದಿರಿ. ಆ ಹಣ ಈಗ ಎಲ್ಲಿ ಮಾಯವಾಯಿತು...ಗೋವಿಂದಾ ಗೋವಿಂದ! ಯುಕೆಪಿ 3ನೇ ಹಂತದ ಯೋಜನೆಗಳಿಗೆ ಹಣ ಒದಗಿಸಿಲ್ಲ, ಈ ಬಗ್ಗೆ ಉಪಮುಖ್ಯಮಂತ್ರಿಗಳು ಗೋವಿಂದ್ ಕಾರಜೋಳ ಅವರು ಏನು ಹೇಳುತ್ತೀರಿ?' ಎಂದು ಪ್ರಶ್ನಿಸಿದ್ದಾರೆ.