ಬೆಂಗಳೂರು: ಕೊರೋನಾ ನೆಪ ಮಾಡಿಕೊಂಡು ರಾಜ್ಯದಲ್ಲಿ ಹಿಂದೆಂದೂ ಕಂಡು ಕೇಳರಿಯದಂತ ಭ್ರಷ್ಟಾಚಾರ ನಡೆದಿದೆ. ಸ್ವತಃ ವೈದ್ಯರಾಗಿರುವ, ಅಲ್ಲದೇ ಅನೇಕ ವೈದ್ಯಕೀ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವ ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವರಾಗಿರುವ ಸಿ.ಅಶ್ವಥ್ ನಾರಾಯಣ ಅವರು ವೈದ್ಯಕೀಯ ಪರಿಕರಗಳ ಖರೀದಿಯಲ್ಲಿ 2 ಸಾವಿರ ಕೋಟಿಯಷ್ಟು ಭ್ರಷ್ಟಾಚಾರ ನಡೆಯಲು ಹೇಗೆ ಅನುವು ಮಾಡಿಕೊಟ್ಟರು ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ‌ ಎಂದು ಆಮ್ ಆದ್ಮಿ ಪಕ್ಷ ರಾಜ್ಯ ಮಾಧ್ಯಮ ಸಂಚಾಲಕರಾದ ಜಗದೀಶ್ ವಿ ಸದಂ ಅವರು ವ್ಯಂಗ್ಯವಾಡಿದರು.


COMMERCIAL BREAK
SCROLL TO CONTINUE READING

ಸ್ವತಃ ವೈದ್ಯರಾಗಿರುವ ಅಶ್ವತ್ಥ ನಾರಾಯಣ ಅವರಿಗೆ ಯಾವ ಯಾವ ಉಪಕರಣ ಎಷ್ಟೆಷ್ಟು ಮೌಲ್ಯಕ್ಕೆ ದೊರೆಯುತ್ತದೆ ಎನ್ನುವ ಪ್ರಾಥಮಿಕ ಜ್ಞಾನ ಇದ್ದೇ ಇರುತ್ತದೆ. ಇವರು ಈ ಹಗರಣವನ್ನು ತಡೆಯಬಹುದಿತ್ತು, ಆದರೆ ಈ *ವೈದ್ಯಕೀಯ ಪರಿಕರಗಳ ಖರೀದಿ ಹಗರಣದಿಂದ ಕರ್ನಾಟಕದ ಮಾನ ರಾಷ್ಟ್ರ ಮಟ್ಟದಲ್ಲಿ ಹರಾಜಾಗಿದೆ, ಕನ್ನಡಿಗರ ಸ್ವಾಭಿಮಾನಕ್ಕೆ ದಕ್ಕೆ ಆಗಿದೆ ಎಂದು ಹೇಳಿದರು.


ಇದನ್ನೂ ಓದಿ:ಪತ್ರಕರ್ತರಿಗೂ ವಿಮಾ ಸೌಲಭ್ಯ ಕಲ್ಪಿಸುವಂತೆ ಕೇಂದ್ರಕ್ಕೆ ಶಿಫಾರಸ್ಸು: ಡಿಸಿಎಂ ಅಶ್ವಥನಾರಾಯಣ್


ಆಪರೇಷನ್ ಕಮಲದ ಮೂಲಕ ಅಧಿಕಾರ ಹಿಡಿದ ಯಡಿಯೂರಪ್ಪ ಅವರು ಹಿಂದಿನ ಕಾಂಗ್ರೆಸ್ ಸರ್ಕಾರ ಹಾಳು ಮಾಡಿದ ಲೋಕಾಯುಕ್ತ ಸಂಸ್ಥೆಯನ್ನು  "ನಾನು ಕೇವಲ 24 ಗಂಟೆಯಲ್ಲಿ ಮರಳಿ ತರುವೆ" ಎಂದು ವೀರಾವೇಶದಿಂದ ಹೇಳಿದ್ದರು. ಆದರೆ ಈ ಮಿಶ್ರತಳಿ ಸರ್ಕಾರ 1 ವರ್ಷ ಪೂರೈಸುವ ಹೊತ್ತಿಗಾಗಲೇ ಜನರ ತೆರಿಗೆ ಹಣವನ್ನು ನುಂಗಿ ನೀರು ಕುಡಿಯಲು ಪ್ರಾರಂಭಿಸಿದೆ, ಲೋಕಾಯುಕ್ತವನ್ನು ಮರೆತಿದೆ ಎಂದು ಆರೋಪ ಮಾಡಿದರು.


ಕೆಲವು ದಿನಗಳ ಹಿಂದೆ ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ವರ್ಗಾವಣೆ ಮಾಡಿ, ಅವರ ಮೇಲೆ  ಬೆಂಗಳೂರು ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಮೈದಾನದಲ್ಲಿ ಸ್ಥಾಪಿಸಿರುವ ಬೃಹತ್ ಆರೈಕೆ ಕೇಂದ್ರಕ್ಕೆ ಬೇಕಾದ ಅಗತ್ಯ ವಸ್ತುಗಳ ಖರೀದಿಯಲ್ಲಿ ಆದ ಭ್ರಷ್ಟಾಚಾರದ ಆರೋಪ ಹೊರಿಸಲಾಯಿತು.  ಈ ಹಗರಣದ ಬಗ್ಗೆ ಮುಖ್ಯಮಂತ್ರಿಗಳೇ ನೇರವಾಗಿ ಪ್ರಸ್ತಾಪ ಮಾಡಿದ್ದರೂ, ಒಬ್ಬ ಅಧಿಕಾರಿ ಇಷ್ಟೊಂದು ಬೃಹತ್ ಪ್ರಮಾಣದ ಹಗರಣವನ್ನು ಯಾವುದೇ ರಾಜಕಾರಣಿಗಳ ಕುಮ್ಮಕ್ಕಿಲ್ಲದೇ, ರಕ್ಷಣೆ ಇಲ್ಲದೇ ನಡೆಸಲು ಸಾಧ್ಯವಿಲ್ಲ. ಈ ಹಗರಣದ ಹಿಂದೆ ಇರುವುದು ಡಿಸಿಎಂ ಅಶ್ವಥ್ ನಾರಾಯಣ ಅವರೇ  ಎಂದು ಆಮ್ ಆದ್ಮಿ ಪಕ್ಷ ನೇರವಾಗಿ ಆರೋಪ ಮಾಡುತ್ತದೆ. ಬಿಜೆಪಿ ಸರ್ಕಾರ ವೈದ್ಯಕೀಯ ಉಪಕರಣಗಳ ಜತೆಗೆ ಇತರೇ ಕಣ್ಣಿಗೆ ಕಾಣದ ಸಾಕಷ್ಟು ಹಗರಣಗಳನ್ನು ನಡೆಸಿದೆ, ಇದೆಲ್ಲದರ ಹಿಂದೆ ಡಿಸಿಎಂ ಅಶ್ವಥ್ ನಾರಾಯಣ ಇದ್ದಾರೆ. ಈ ಹಗರಣದಲ್ಲಿ ತಮ್ಮ ಹಸ್ತಕ್ಷೇಪ ಇಲ್ಲದಿದ್ದರೆ, ಈ ಕೂಡಲೇ ರಾಜಿನಾಮೆ ಕೊಡಲಿ ಹಾಗೂ ತನಿಖೆಗೆ ಸಹಕರಿಸಲಿ ಹಾಗೂ ಹೈಕೋರ್ಟ್ ಮುಖ್ಯ ನ್ಯಾಯಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ಆಗಲಿ ಎಂದು ಆಗ್ರಹಿಸಿದರು.


ಈ ಹಗರಣದ ಬಗ್ಗೆ ಹೈಕೋರ್ಟಿನ ನ್ಯಾಯಾಧೀಶರ ನೇತೃತ್ವದ ಸಮಿತಿ ತನಿಖೆ ನಡೆಸಿದರೆ ಮಾತ್ರ ಸತ್ಯಾಂಶ ಹೊರಬರುವುದು ಎಂದರು.


ಸುವಿಧಾ ಕ್ಯಾಬಿನ್ ಹೆಸರಿನಲ್ಲಿ ಮತ್ತೊಂದು ಹಗರಣ


ಪೌರ ಕಾರ್ಮಿಕರಿಗೆ ಸುವಿಧಾ ಕ್ಯಾಬಿನ್ ಸ್ಥಾಪಿಸುವ ಹೆಸರಿನಲ್ಲಿ ಬೇನಾಮಿ ಕಂಪೆನಿಗೆ 16 ಕೋಟಿ ಮೌಲ್ಯದ ಗುತ್ತಿಗೆ ನೀಡಲು ಹೊರಟಿರುವುದರ ಹಿಂದೆ ಡಿಸಿಎಂ ಅಶ್ವಥ್ ನಾರಾಯಣ ಅವರೂ ಇದ್ದಾರೆ ಎಂದು ಪಕ್ಷದ ಮುಖಂಡ ಶರತ್ ಖಾದ್ರಿ ಆರೋಪ ಮಾಡಿದರು.


ಆಗ್ರ್ಯಾ ಇನ್‌ಫ್ರಾಟೆಕ್ ಎನ್ನುವ ಅಸ್ತಿತ್ವವೇ ಇಲ್ಲದ ಸಂಸ್ಥೆಗೆ ನೀಡಲಾಗುತ್ತಿದ್ದು, 20 ಅಡಿ ಉದ್ದ, 8.5 ಅಡಿ ಅಗಲ, 8 ಅಡಿ ಎತ್ತರದ ಈ ಕ್ಯಾಬೀನ್‌ನಲ್ಲಿ ಪೌರ ಕಾರ್ಮಿಕರಿಗೆ ಪ್ರತ್ಯೇಕ ಶೌಚಾಲಯ, ಊಟ ಮಾಡಲು ಹಾಗೂ ಬಟ್ಟೆ ಬದಲಾಯಿಸಲು ಸ್ಥಳಾವಕಾಶ ನೀಡುವುದು ಇದರ ಉದ್ದೇಶ ಆದರೆ, ಮಾರುಕಟ್ಟೆ ದರದಲ್ಲಿ ಈ ಕ್ಯಾಬಿನ್ ಗಳನ್ನು ತಯಾರಿಸಲು ಸುಮಾರು 80 ಸಾವಿರ ಖರ್ಚಾಗುತ್ತದೆ. ಆದರೆ ಯಾವುದೇ ಅನುಭವವೇ ಇಲ್ಲದ ಹಾಗೂ ಅಸ್ತಿತ್ವವೇ ಇಲ್ಲದ ಸಂಸ್ಥೆಯಾದ ಆಗ್ರ್ಯಾ ಇನ್‌ಫ್ರಾಟೆಕ್ ಸಂಸ್ಥೆ ಒಂದು ಕ್ಯಾಬೀನ್‌ಗೆ 8 ಲಕ್ಷ ಎಂದು ದರ ನಿಗದಿ ಮಾಡಿ ಪೂರೈಸಲು ಮುಂದಾಗಿದೆ. ಇದರ ಹಿಂದಿನ ಹುನ್ನಾರ ಏನು ಎಂದು ಪ್ರಶ್ನಿಸಿದರು.


ಕೇವಲ ಬಾಯಿ ಮಾತಿನಲ್ಲಿ ಪೌರ ಕಾರ್ಮಿಕರ ಬಗ್ಗೆ ಉಪಚಾರ ತೋರಿಸಿ ಬೆನ್ನಿಗೆ ಚೂರಿ ಇರಿಯುವ ಕೆಲಸ ನಡೆಯುತ್ತಿದೆ‌. ಈ ಭ್ರಷ್ಟಾಚಾರದಲ್ಲಿ ತೊಡಗಿರುವ ಡಿಸಿಎಂ ಅಶ್ವಥ್ ನಾರಾಯಣ ಅವರೇ ಸ್ವತಃ ಮುಂದೆ ಬಂದು ರಾಜಿನಾಮೆ ನೀಡಬೇಕು ಎಂದು ಆಮ್ ಆದ್ಮಿ ಪಕ್ಷ ರಾಜ್ಯ ಕಾನೂನು ಘಟಕದ ಅಧ್ಯಕ್ಷರಾದ ನಂಜಪ್ಪ ಕಾಳೇಗೌಡ ಆಗ್ರಹಿಸಿದರು.