ಬೆಂಗಳೂರು: ಕಷ್ಟಕರ ವಾತಾವರಣ ಮತ್ತು ಕ್ಲಿಷ್ಟ ಪರಿಸ್ಥಿತಿಯಲ್ಲಿ ಜೀವದ ಹಂಗುತೊರೆದು ಕೆಲಸ ಮಾಡುವ ಪತ್ರಕರ್ತರನ್ನು ಕೇಂದ್ರ ಸರ್ಕಾರದ ವಿಮಾ ಯೋಜನಾ ವ್ಯಾಪ್ತಿಗೆ ಸೇರಿಸುವಂತೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮಾಡಿಕೊಂಡ ಮನವಿಗೆ ಸ್ಪಂದಿಸಿರುವ ಉಪ ಮುಖ್ಯಮಂತ್ರಿ ಸಿ.ಎನ್. ಅಶ್ವತ್ಥನಾರಾಯಣ (CN Ashwathnarayana) , ಈ ಬಗ್ಗೆ ರಾಜ್ಯ ಸರ್ಕಾರದ ವತಿಯಿಂದ ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂಬ ಭರವಸೆ ನೀಡಿದ್ದಾರೆ.
ಶುಕ್ರವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ಅಧ್ಯಕ್ಷ ಶಿವಾನಂದ ತಗಡೂರು ಅವರ ಮನವಿಗೆ ಸ್ಪಂದಿಸಿದ ಉಪ ಮುಖ್ಯಮಂತ್ರಿ ಡಾ. ಅಶ್ವಥ್ ನಾರಾಯಣ್, ಕೂಡಲೇ ಪತ್ರಕರ್ತರನ್ನು ಕೇಂದ್ರ ಸರ್ಕಾರದ ವಿಮಾ ಯೋಜನಾ ವ್ಯಾಪ್ತಿಗೆ ಸೇರಿಸುವಂತೆ ರಾಜ್ಯ ಸರ್ಕಾರದ ವತಿಯಿಂದ ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂಬ ಭರವಸೆ ನೀಡಿದರು.
ಇದೇ ವೇಳೆ ಕರೋನಾ ಸಂಕಷ್ಟದ ಸಮಯದಲ್ಲಿ ಅರಿವು ಮೂಡಿಸಲು ಯತ್ನಿಸುತ್ತಿರುವ ಜಿಲ್ಲಾ ಮಟ್ಟದ ಮತ್ತು ಪ್ರಾದೇಶಿಕ ಪತ್ರಿಕೆಗಳಿಗೂ ಜಾಹೀರಾತು ಬಿಡುಗಡೆ ಮಾಡಬೇಕೆಂಬ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮತ್ತೊಂದು ಬೇಡಿಕೆಗೂ ಸ್ಪಂದಿಸಿದ ಅಶ್ವಥ್ ನಾರಾಯಣ್, ಪತ್ರಕರ್ತರ ಸಂಘದ ಮನವಿಯನ್ನು ವಾರ್ತಾ ಇಲಾಖೆಯ ಅಧಿಕಾರಿಗಳಿಗೆ ಗಮನ ಸೆಳೆದು 'ಪತ್ರಿಕೆಗಳನ್ನು ನಡೆಸುವುದು ಕಷ್ಟವಿದೆ. ಈ ಕಷ್ಟದ ಹೊತ್ತಿನಲ್ಲಿ ಕರೊನಾ ಜಾಗೃತಿ ಮೂಡಿಸುವುದಕ್ಕೆ ಸಂಬಂಧಿಸಿದ ಮತ್ತು ಸರ್ಕಾರದ ಇತರೆ ಜಾಹೀರಾತುಗಳನ್ನು ಬಿಡುಗಡೆ ಮಾಡಲು ಕ್ರಮಕೈಗೊಳ್ಳಿ' ಎಂದು ಸ್ಥಳದಲ್ಲಿಯೇ ಇದ್ದ ವಾರ್ತಾ ಇಲಾಖೆಯ ಕಾರ್ಯದರ್ಶಿ ಕ್ಯಾಪ್ಟನ್ ಮಣಿವಣ್ಣನ್ ಮತ್ತು ವಾರ್ತಾ ಇಲಾಖೆಯ ಅಯುಕ್ತ ಸಿದ್ದರಾಮಪ್ಪ ಅವರಿಗೆ ಸೂಚಿಸಿದರು.