ಬೆಂಗಳೂರು: ಆದಾಯ ತೆರಿಗೆ ಪಾವತಿಸದೆ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಡಿ.ಕೆ.ಶಿವಕುಮಾರ್‌ ಸೇರಿ ಐವರಿಗೆ ಆರ್ಥಿಕ ಅಪರಾಧಗಳ ನ್ಯಾಯಾಲಯ ಗುರುವಾರ ಷರತ್ತು ಬದ್ಧ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. 


COMMERCIAL BREAK
SCROLL TO CONTINUE READING

ಆದಾಯ ತೆರಿಗೆ ವಂಚನೆ ಆರೋಪದಡಿ ಐಟಿ ಇಲಾಖೆ ಡಿಕೆಶಿ ವಿರುದ್ಧ  ಐಟಿ ಕಾಯ್ದೆ ಸೆಕ್ಷನ್ 277, 278, 193, 199 ಹಾಗೂ 120(ಬಿ) ಅಡಿ 4ನೇ ದೂರು ದಾಖಲಿಸಿತ್ತು. ಈ ಹಿನ್ನೆಲೆಯಲ್ಲಿ ಆರ್ಥಿಕ ಅಪರಾಧಗಳ ನ್ಯಾಯಾಧಿಕರಣ ಡಿಕೆಶಿಗೆ ಸಮನ್ಸ್ ನೀಡಿತ್ತು. ಈ ಹಿನ್ನೆಲೆಯಲ್ಲಿ ಇಂದು ನ್ಯಾಯಾಲಯಕ್ಕೆ ಹಾಜರಾದ ಡಿಕೆಶಿ ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಲಯ ಷರತ್ತುಬದ್ಧ ಮಧ್ಯಂತರ ಜಾಮೀನು ಮಂಜೂರು ಮಾಡಿ, ಬಳಿಕ ಸೆಪ್ಟಂಬರ್‌ 20 ಕ್ಕೆ ವಿಚಾರಣೆಯನ್ನು ಮುಂದೂಡಿದೆ. 


ಕಳೆದ ವರ್ಷ ಡಿ.ಕೆ.ಶಿವಕುಮಾರ್​ ಅವರ ಮನೆ, ಅವರ ಸ್ನೇಹಿತರು ಮತ್ತು ಅಪ್ತರ ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ದಾಖಲೆ ಇಲ್ಲದ ಬರೋಬ್ಬರಿ 8.59 ಕೋಟಿ ರೂ. ಪತ್ತೆಯಾಗಿತ್ತು. ಅದರಲ್ಲಿ ಡಿ.ಕೆ.ಶಿವಕುಮಾರ್ 41 ಲಕ್ಷ ರೂ. ಮಾತ್ರ ತಮ್ಮದು ಎಂದಿದ್ದರು. ಉಳಿದ ಹಣದ ಸಂಬಂಧ ಐಟಿ ತನಿಖೆ ನಡೆಸಿತ್ತು. ಈ ವೇಳೆ ಡಿ.ಕೆ.ಶಿವಕುಮಾರ್ ಅವರ ಕೆಲ ಅಪ್ತರ ಮನೆಯಲ್ಲಿ ಡೈರಿ ಹಾಗೂ ಕೆಲ ವಾಟ್ಸಪ್ ಮೇಸೆಜ್​​​ಗಳು ಪತ್ತೆಯಾಗಿದ್ದು, ಹವಾಲಾ ದಂಧೆಯಲ್ಲಿ ಡಿಕೆಶಿ ಭಾಗಿಯಾಗಿದ್ದಾರೆಂದು ಅರೋಪ ಮಾಡಲಾಗಿತ್ತು. ಅಲ್ಲದೇ ಅಕ್ರಮವಾಗಿ ಹಣ ಸಂಪಾದಿಸಿದ ಆರೋಪದ ವಿಚಾರಣೆಯ ವೇಳೆ ತನಿಖೆಯ ದಾರಿ ತಪ್ಪಿಸುವ ಪ್ರಯತ್ನದ ಆರೋಪ ಕೂಡ ಕೇಳಿಬಂದಿತ್ತು. ಈ ಹಿನ್ನಲೆಯಲ್ಲಿ ನಾಲ್ಕನೇ ಕೇಸ್ ದಾಖಲಾಗಿತ್ತು. ಅದರಂತೆ ಇಂದು ಖುದ್ದು ವಿಚಾರಣೆಗೆ ಹಾಜರಾಗುವಂತೆ ಡಿಕೆ ಶಿವಕುಮಾರ್ ಮತ್ತು ಅವರ ಅಪ್ತರಿಗೆ ಕೋರ್ಟ್ ಸೂಚಿಸಿತ್ತು.


ಜಲಸಂಪನ್ಮೂಲ ಹಾಗೂ ವೈದ್ಯಕೀಯ ಸಚಿವ ಡಿ.ಕೆ ಶಿವಕುಮಾರ್ ಸೇರಿದಂತೆ ಅವರ ಆಪ್ತ ಸಚಿನ್ ನಾರಾಯಣ್, ಉದ್ಯಮಿ ಸುನೀಲ್ ಕುಮಾರ್ ಶರ್ಮಾ, ಆಂಜನೇಯ ಹನುಮಂತಯ್ಯ ಮತ್ತು ಎನ್.ರಾಜೇಂದ್ರನ್ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಹಿಂದೆ ಇದೇ ರೀತಿ ದಾಖಲಾಗಿದ್ದ ಮೂರು ಪ್ರಕರಣಗಳಲ್ಲಿ ಈಗಾಗಲೇ ಡಿ.ಕೆ.ಶಿವಕುಮಾರ್ ಜಾಮೀನು ಪಡೆದುಕೊಂಡಿದ್ದಾರೆ.