ಚಾಮುಂಡಿ ಬೆಟ್ಟ ಹಸಿರೀಕರಣಕ್ಕೆ ನರೇಗಾ ಬಳಸಿಕೊಳ್ಳಿ; ಸಚಿವ ಎಸ್.ಟಿ. ಸೋಮಶೇಖರ್ ಸೂಚನೆ
ನರೇಗಾ ಜಾಬ್ ಕಾರ್ಡ್ ದಾರರಿಗೆ ಕೆಲಸ ಕೊಡಲು ಇರುವ ಅನುದಾನವನ್ನು ಚಾಮುಂಡಿ ಬೆಟ್ಟದಲ್ಲಿ ಗಿಡ ನೆಡಲು ಅವಕಾಶ ಮಾಡಿಕೊಳ್ಳಿ.
ಮೈಸೂರು: ಮೈಸೂರು ಹಸಿರೀಕರಣ ಆಗಬೇಕು. ಈ ನಿಟ್ಟಿನಲ್ಲಿ ಚಾಮುಂಡಿ ಬೆಟ್ಟದಲ್ಲಿ ಲಕ್ಷ ಗಿಡ ನೆಡಲು ಅರಣ್ಯ ಇಲಾಖೆ ಜೊತೆ ಗ್ರಾಮೀಣಾಭಿವೃದ್ಧಿ ಇಲಾಖೆಯ ನರೇಗಾ ಯೋಜನೆಯ ಅನುದಾನವನ್ನೂ ಬಳಿಸಿ ಕಾರ್ಯನಿರ್ವಹಣೆ ಮಾಡಿ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ. ಸೋಮಶೇಖರ್ (ST Somashekhar) ಅಧಿಕಾರಿಗಳಿಗೆ ಸೂಚನೆ ನೀಡಿದರು.
ಚಾಮುಂಡಿ ಬೆಟ್ಟದಲ್ಲಿ 1 ಲಕ್ಷ ಗಿಡ ನೆಡುವ ಹಾಗೂ 3 ವರ್ಷಗಳ ಕಾಲ ನಿರ್ವಹಣೆ ಮಾಡುವ ಬಗ್ಗೆ ಸಹಕಾರ ಮತ್ತು ಮೈಸೂರು (Mysore) ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಹಾಗೂ ಅರಣ್ಯ ಇಲಾಖೆ ಸಚಿವರಾದ ಆನಂದ್ ಸಿಂಗ್ ನೇತೃತ್ವದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ನರೇಗಾ (Narega) ಜಾಬ್ ಕಾರ್ಡ್ ದಾರರಿಗೆ ಕೆಲಸ ಕೊಡಲು ಇರುವ ಅನುದಾನವನ್ನು ಚಾಮುಂಡಿ ಬೆಟ್ಟ (Chamundi Hills) ದಲ್ಲಿ ಗಿಡ ನೆಡಲು ಅವಕಾಶ ಮಾಡಿಕೊಳ್ಳಿ. ಅವರನ್ನು ಬಳಸಿಕೊಂಡು ಗುಂಡಿಗಳನ್ನು ತೆಗೆಸುವಂತಹ ಕಾರ್ಯದಲ್ಲಿ ತೊಡಗಿಸಿಕೊಳ್ಳಿ. ಈ ಮೂಲಕ ಉದ್ಯೋಗದ ಜೊತೆ ಜೊತೆಗೆ ಹಸಿರೀಕರಣಕ್ಕೂ ಅನುಕೂಲವಾಗಲಿದೆ ಎಂದು ಸಚಿವ ಸೋಮಶೇಖರ್ ತಿಳಿಸಿದರು.
ಸ್ತ್ರೀಶಕ್ತಿ ಸಂಘಗಳ ಮಾದರಿಯಲ್ಲಿ ಆಶಾ ಕಾರ್ಯಕರ್ತೆಯರಿಗೆ ಸೊಸೈಟಿ ಘೋಷಿಸಿದ ಸಹಕಾರ ಸಚಿವ
ಅರಣ್ಯ ಇಲಾಖೆ ಸಚಿವರಾದ ಆನಂದ್ ಸಿಂಗ್ ಮಾತನಾಡಿ, ಚಾಮುಂಡೇಶ್ವರಿ ಬೆಟ್ಟದಲ್ಲಿರುವ 310 ಹೆಕ್ಟೇರ್ ಪ್ರದೇಶದಲ್ಲಿರುವ ನೀಲಿಗಿರಿ ಗಿಡಗಳನ್ನು ಸಂಪೂರ್ಣ ಕಿತ್ತುಹಾಕುವ ತೀರ್ಮಾನಕ್ಕೆ ಬರಲಾಗಿದ್ದು, ಆ ಜಾಗದಲ್ಲಿ ಹಣ್ಣಿನ ಗಿಡಗಳಾದ ಸೀತಾಫಲ ಸೇರಿದಂತೆ ಇನ್ನಿತರ ಜಾತಿಯ ಸಸಿಗಳನ್ನು ನೆಡುವ ತೀರ್ಮಾನಕ್ಕೆ ಬರಲಾಗಿದೆ ಎಂದು ತಿಳಿಸಿದರು.
ಹೀಗಾಗಿ ಸದ್ಯಕ್ಕೆ ಈ ಪ್ರದೇಶದಲ್ಲಿ ಸಾಂಕೇತಿಕವಾಗಿ ಸ್ವಲ್ಪ ಗಿಡಗಳನ್ನು ನೆಟ್ಟು, ಮುಂದಿನ ರೂಪುರೇಷೆಗಳನ್ನು ಸಿದ್ಧಪಡಿಸಿಕೊಂಡು ನರೇಗಾ ಯೋಜನೆಯಡಿ ಗುಂಡಿಗಳನ್ನು ತೆಗೆಯುವುದು ಸೇರಿದಂತೆ ನಿರ್ವಹಣೆ ಮಾಡುವ ಬಗ್ಗೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಶ್ರಮ ವ್ಯರ್ಥವಾಗದಿರಲಿ :
ಗಿಡಗಳನ್ನು ನೆಟ್ಟ ಮೇಲೆ ಅವುಗಳ ನಿರ್ವಹಣೆ ಸಮಸ್ಯೆಯಾಗಬಾರದು. ನೀರಿನ ವ್ಯವಸ್ಥೆಯನ್ನು ಹೇಗೆ ಮಾಡಿಕೊಳ್ಳಲಾಗುತ್ತದೆ ಎಂಬುದೇ ಬಹಳ ಮುಖ್ಯ. ಇದಾಗದಿದ್ದರೆ ನೀವು ಮಾಡಿದ ಶ್ರಮವೆಲ್ಲವೂ ವ್ಯರ್ಥವಾಗುತ್ತದೆ ಎಂದು ಸಚಿವರಾದ ಆನಂದ್ ಸಿಂಗ್ ಹೇಳಿದರು.
ಸಮತಟ್ಟು ಜಾಗದಲ್ಲಿ ಗಿಡ ನೆಡಿ
ಪ್ರಸಕ್ತ ವರ್ಷದಲ್ಲಿ ಹೆಚ್ಚಿನ ಸಿದ್ಧತೆ ಮಾಡಿಕೊಳ್ಳದಿದ್ದರಿಂದ ಸಮತಟ್ಟು ಪ್ರದೇಶ ಹಾಗೂ ಅವಕಾಶ ಇರುವ ಜಾಗದಲ್ಲಿ ಗಿಡ ನೆಡಬೇಕು. ಜೊತೆಗೆ ನೆಟ್ಟ ಗಿಡಗಳನ್ನು ಚೆನ್ನಾಗಿ ಬೆಳೆಸಲು ಬೇಕಾದ ನೀರಿನ ವ್ಯವಸ್ಥೆ ಸೇರಿದಂತೆ ಇನ್ನಿತರ ಸೌಲಭ್ಯಗಳತ್ತ ಗಮನಹರಿಸಬೇಕಾಗುತ್ತದೆ. ಸಭೆಯಲ್ಲಿ ಇನ್ನು ಮುಂದಿನ ವರ್ಷದಲ್ಲಿ ಸಂಪೂರ್ಣ ಯೋಜನೆಗಳೊಂದಿಗೆ ಹಾಗೂ ಸಿದ್ಧತೆಗಳೊಂದಿಗೆ ಗಿಡವನ್ನು ನೆಡಬೇಕಿದೆ ಎಂಬ ಅಭಿಪ್ರಾಯಕ್ಕೆ ಬರಲಾಯಿತು.
ನೀರಿನ ಪುನರ್ ಬಳಕೆಯಾಗಲಿ:
ಈಗ ನೀರಿನ ಬಳಕೆ ಆದ ಮೇಲೆ ಅದನ್ನು ರೀಸೈಕಲ್ ಮಾಡುವುದು ಹಾಗೂ ಎಲ್ಲ ಗಿಡಗಳಿಗೆ ಡ್ರಿಪ್ ಮಾಡುವ ಬಗ್ಗೆ ಅಧಿಕಾರಿಗಳ ಬಳಿ ಮಾಹಿತಿಯನ್ನು ಇದೇ ಸಂದರ್ಭದಲ್ಲಿ ಕೇಳಿ ಪಡೆಯಲಾಯಿತು. ಇದಕ್ಕೆ ಪ್ರತಿಕ್ರಿಯೆ ನೀಡಿದ ಅಧಿಕಾರಿಗಳು, ಮೈಸೂರಿನ ಹೊರವಲಯದಲ್ಲಿ ಇನ್ಫೋಸಿಸ್ ಪ್ರತಿಷ್ಠಾನ ಕೈಗೊಂಡ ತ್ಯಾಜ್ಯ ನೀರು ಪುನರ್ ಬಳಕೆ ತಂತ್ರಜ್ಞಾನದ ಮಾದರಿಯಲ್ಲಿ ಚಾಮುಂಡಿ ಬೆಟ್ಟದಲ್ಲಿ ನಿರ್ವಹಣೆ ಮಾಡಬಹುದಾಗಿದೆ. ಈ ಮೂಲಕ ಹನಿ ನೀರಾವರಿ ವ್ಯವಸ್ಥೆ ಮಾಡಿದರೆ ಇಡೀ ಚಾಮುಂಡಿ ಬೆಟ್ಟದಲ್ಲಿ ನೆಡಲಾಗುವ ಗಿಡಗಳಿಗೆ ಯಾವುದೇ ಕಾರಣಕ್ಕೂ ಬೇಸಿಗೆಯಲ್ಲೂ ಸಹ ನೀರಿನ ಕೊರತೆಯಾಗದು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್ ಮಾತನಾಡಿ, ನೀರಾವರಿ, ಗಿಡ ನೆಡುವ ಸಂಬಂಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸರ್ವೇ ವಿಚಾರದಲ್ಲಿ ಮರು ಸರ್ವೇ ಆಗಬೇಕಿದ್ದು, ಹಳೇ ಮಹಜರು ತಾಳೆಯಾಗುತ್ತಿಲ್ಲ. ಜೊತೆಗೆ ಕೆಲವರು ಒತ್ತುವರಿ ಮಾಡಿಕೊಂಡಿದ್ದಾರೆ. ಈ ಎಲ್ಲ ಸಮಸ್ಯೆಗಳನ್ನು ಇತ್ಯರ್ಥ ಮಾಡಿಕೊಳ್ಳಬೇಕು ಎಂದು ಸಭೆಯ ಗಮನಕ್ಕೆ ತಂದರು.
ಚಾಮುಂಡೇಶ್ವರಿ ದೈವೀ ವನಕ್ಕೆ ಭೇಟಿ:
ಚಾಮುಂಡೇಶ್ವರಿ ಬೆಟ್ಟದ ತಪ್ಪಲಿನಲ್ಲಿ ಇರುವ ಶ್ರೀ ಚಾಮುಂಡೇಶ್ವರಿ ದೈವೀ ವನಕ್ಕೆ ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ. ಸೋಮಶೇಖರ್, ಅರಣ್ಯ ಇಲಾಖೆ ಸಚಿವರಾದ ಆನಂದ್ ಸಿಂಗ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್, ಶಾಸಕರಾದ ಎಸ್.ಎ. ರಾಮದಾಸ್ ಹಾಗೂ ನಾಗೇಂದ್ರ, ಅರಣ್ಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.