ದಕ್ಷಿಣ ಕನ್ನಡ ಎಂದಾಕ್ಷಣ ನೆನಪಾಗೋದು ಕರಾವಳಿಯ ಗಂಡುಕಲೆ ಯಕ್ಷಗಾನ. ಈ ಕಲೆಯಲ್ಲಿ ಮಿಂದೆದ್ದ ಅನೇಕ ಕಲಾವಿದರು ಇಂದಿಗೂ ದೇಶ ಮಾತ್ರವಲ್ಲದೆ ವಿದೇಶದಲ್ಲೂ ಸಾಧನೆ ಮಾಡುತ್ತಿದ್ದಾರೆ. ಜೊತೆಗೆ ಈ ಭಾಗದ ಜನರಿಗೆ ಯಕ್ಷಗಾನ ಕ್ಷೇತ್ರದಲ್ಲಿ ಎಲ್ಲಿಲ್ಲದ ಒಲವು. ಇದಕ್ಕೆ ಉದಾಹರಣೆ ಎಂಬಂತೆ ಇಲ್ಲೊಬ್ಬ ಬಾಲಕ ಯಕ್ಷಗಾನ ರಂಗದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾನೆ. 


COMMERCIAL BREAK
SCROLL TO CONTINUE READING

ಇದನ್ನು ಓದಿ: ಚಿತ್ರಗಳಿಗೆ ಕಲಾಕುಂಚದಲ್ಲಿ ಜೀವಕಳೆ ತುಂಬುವ ಅಪೂರ್ವ ʼಚೇತನʼ


ಕೇವಲ ಯಕ್ಷಗಾನ ಮಾತ್ರವಲ್ಲ. ಮುಮ್ಮೇಳ, ಹಿಮ್ಮೇಳ, ಚದುರಂಗ, ಲೀಫ್‌ ಆರ್ಟ್‌, ಕರಾಟೆ ಕ್ರೀಡೆ ಹೀಗೆ ಹಲವಾರು ಕ್ಷೇತ್ರದಲ್ಲಿ ಛಾಪು ಮೂಡಿಸಿರುವ ಈ ಬಾಲಕನ ಹೆಸರು ಮಂದಾರ. ಹೆಸರಿಗೆ ತಕ್ಕಂತೆ ಪ್ರತಿಭೆಗೆ ಮಂದಾರದಂತಿರುವ ಈತನ ಸಾಧನೆ ಎಂಥವರನ್ನೂ ಬೆರಗು ಮೂಡಿಸುತ್ತದೆ. ಸದ್ಯ ಮೂಡಬಿದಿರೆಯ ರೋಟರಿ ಪದವಿ ಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಮಂದಾರ, ಇಲ್ಲಿನ ಒಂಟಿಕಟ್ಟೆಯ ಸುಧಾಕರ ಪೂಜಾರಿ ಮತ್ತು ಮಾಯಾ ದಂಪತಿಯ ಪುತ್ರ. 


ತನ್ನ ಎಂಟನೇ ವಯಸ್ಸಿನಲ್ಲಿ ಯಕ್ಷಗಾನದತ್ತ ಒಲವು ತೋರಿಸಿರುವ ಮಂದಾರ, ಸುಮಾರು 700ಕ್ಕೂ ಹೆಚ್ಚು ಯಕ್ಷಗಾನ ಪ್ರದರ್ಶನ ನೀಡಿದ್ದಾರೆ. ಅಷ್ಟೇ ಅಲ್ಲದೆ, ಒಂದೇ ವೇದಿಕೆಯಲ್ಲಿ 100 ಧಿಗಿಣಗಳನ್ನು ಹಾಕುವ ಮೂಲಕ ನೈಪುಣ್ಯತೆ ಮೆರೆದಿದ್ದಾರೆ. ಇನ್ನೊಂದೆಡೆ ಯಕ್ಷಗಾನ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸತತವಾಗಿ ಮೂರು ಬಾರಿ ಪ್ರಥಮ ಸ್ಥಾನ ಪಡೆದ ಇವರು ಭಾಗವತಿಕೆ, ಚೆಂಡೆ, ಮದ್ದಳೆಯಂತಹ ರಂಗದಲ್ಲೂ ಮೆರೆದಿದ್ದಾರೆ. ಕರಾವಳಿಯಲ್ಲಿ ಯಕ್ಷಚೈತನ್ಯ ಎಂದೇ ಖ್ಯಾತಿ ಗಳಿಸಿರುವ ರಕ್ಷಿತ್‌ ಶೆಟ್ಟಿ ಪಡ್ರೆ ಮಂದಾರ ಅವರ ಯಕ್ಷ ಗುರುಗಳು. 


ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಈ ಬಾಲಕ ಕಾಲಿಡದ ರಂಗವಿಲ್ಲ ಎಂಬಂತಾಗಿದೆ. ಹತ್ತು ಹಲವಾರು ಸನ್ಮಾನ, ಗೌರವಗಳು, ಬಿರುದುಗಳಿಗೆ ಮಂದಾರ ಭಾಜನರಾಗಿದ್ದಾರೆ. ಇವರ ಮತ್ತೊಂದು ಪ್ರತಿಭೆಯೆಂದರೆ ಲೀಫ್‌ ಆರ್ಟ್‌. ಎಲೆಯಲ್ಲಿ ಚಿತ್ರ ಬರೆಯುವುದು ಸುಲಭದ ಮಾತಲ್ಲ. ಅದಕ್ಕೆ ಕಲೆಯ ಜೊತೆಗೆ ಬೇಕಾಗಿರುವುದು ತಾಳ್ಮೆ. ಇಂತಹ ಕಲೆಯಲ್ಲಿ ನೈಪುಣ್ಯತೆ ಹೊಂದಿರುವ ಇವರು ಅನೇಕ ಸಾಧಕರ ಚಿತ್ರವನ್ನು ಎಲೆಯಲ್ಲಿ ಬರೆದಿದ್ದಾರೆ. 



 


 


ಚಲನಚಿತ್ರ ನಟರಾದ ಟೈಗರ್‌ ಪ್ರಭಾಕರ್‌, ನಟ ಸಾರ್ವಭೌಮ ಡಾ. ರಾಜ್‌ಕುಮಾರ್‌ ಕುಟುಂಬ, ಕಿಚ್ಚ ಸುದೀಪ್‌, ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌, ಹಿನ್ನೆಲೆ ಗಾಯಕ ಸೋನು ನಿಗಮ್‌, ಯಕ್ಷಧ್ರುವ ಸತೀಶ್‌ ಪಟ್ಲ, ನಟ ರಾಜ್‌ ಬಿ ಶೆಟ್ಟಿ ಸೇರಿದಂತೆ ಅನೇಕ ಸಾಧಕರ ಚಿತ್ರಗಳನ್ನು ಎಲೆಯಲ್ಲಿ ಬರೆದು, ಬಳಿಕ ಅವರನ್ನು ಭೇಟಿಯಾಗಿ ಚಿತ್ರವನ್ನು ಹಸ್ತಾಂತರ ಮಾಡಿದ್ದಾರೆ. 


ಯಕ್ಷಗಾನ ಮಾತ್ರವಲ್ಲ, ಕರಾಟೆಯಲ್ಲೂ ರಾಜ್ಯ ಮತ್ತು ರಾಷ್ಟ್ರಮಟ್ಟವನ್ನು ಪ್ರತಿನಿಧಿಸಿ ಎರಡು ಚಿನ್ನ, ಎರಡು ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದಿರುವ ಇವರು ಅಸಾಧಾರಣ ಪ್ರತಿಭೆ ಎನ್ನಬಹುದು. 


ಇದನ್ನು ಓದಿ: Viral Video : ಮದುವೆ ಮಂಟಪದಲ್ಲಿ ವಧು ಮಾಡಿದ ಈ ತಪ್ಪಿಗೆ ವೇದಿಕೆ ಮೇಲೆಯೇ ಸೇಡು ತೀರಿಸಿಕೊಂಡ ವರ


50ಕ್ಕಿಂತಲೂ ಹೆಚ್ಚು ಪದಕ, 160ಕ್ಕಿಂತಲೂ ಹೆಚ್ಚು ಸ್ಮರಣಿಕೆ, 100ಕ್ಕೂ ಹೆಚ್ಚು ಪ್ರಶಸ್ತಿ ಪಡೆದಿದ್ದಾರೆ. ಅಷ್ಟೇ ಅಲ್ಲದೆ, "ಕರ್ನಾಟಕ ಪ್ರತಿಭಾ ರತ್ನ", "ಯಕ್ಷ ಕುವರ", "ಕೋಲ್ಮಿಂಚು" ಹೀಗೆ ಹಲವಾರು ಬಿರುದುಗಳನ್ನು ಪಡೆದ ಇವರು ಇನ್ನಷ್ಟು ಸಾಧನೆ ಮಾಡಲಿ ಎಂಬುದು ನಮ್ಮ ಆಶಯ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.