ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಂಡಿಸಿದ ಬಜೆಟ್ ನಲ್ಲಿ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ಅನ್ಯಾಯ ಆಗಿದೆ ಎಂದು ಆರೋಪಿಸಿರುವ ಆ ಭಾಗದ ಬಿಜೆಪಿ ಶಾಸಕರು ಇಂದು ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು.


COMMERCIAL BREAK
SCROLL TO CONTINUE READING

ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಮೊದಲ ಬಜೆಟ್ ನಲ್ಲಿ ಕರಾವಳಿ ಭಾಗವನ್ನು ಕಡೆಗಣಿಸಲಾಗಿದೆ. ಗುರುವಾರ ಮಂಡನೆಯಾದ ಬಜೆಟ್ ನಲ್ಲಿ ಉತ್ತರ ಕನ್ನಡದ ಕಾರವಾರದಲ್ಲಿ ಇಸ್ರೇಲ್‌ ಮಾದರಿ ನೀರಾವರಿ ಯೋಜನೆಯನ್ನು ಹೆಸರಿಸಿದ್ದು ಬಿಟ್ಟರೆ ಇಡೀ ಕರಾವಳಿ ಜಿಲ್ಲೆಗಳಿಗೆ ಯಾವುದೇ ಯೋಜನೆ ಘೋಷಿಸಿಲ್ಲ.  ಸಿಎಂ ಕುಮಾರಸ್ವಾಮಿ ಎಲ್ಲೂ ದಕ್ಷಿಣ ಕನ್ನಡ, ಉಡುಪಿ ಹೆಸರನ್ನೇ ಪ್ರಸ್ತಾಪಿಸಿಲ್ಲ. ಸರ್ಕಾರದ ಬಜೆಟ್ ನಲ್ಲಿ ಕರಾವಳಿ ಜಿಲ್ಲೆಗೆ ಯಾವುದೇ ಅನುದಾನ ಮತ್ತು ಘೋಷಣೆ ಮಾಡಿಲ್ಲ. ಹಲವು ಸಂಪನ್ಮೂಲ ಮತ್ತು ಪವಿತ್ರ ಕ್ಷೇತ್ರಗಳನ್ನು ಒಳಗೊಂಡಿರುವ, ರಾಜ್ಯಕ್ಕೆ ಆದಾಯ ತರುವ ಕರಾವಳಿ ಜಿಲ್ಲೆಯನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿರುವುದು ಈ ಸರ್ಕಾರದ ಧೋರಣೆಯನ್ನು ಎತ್ತಿ ತೋರಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಆ ಭಾಗದ ಬಿಜೆಪಿ ಶಾಸಕರು ಕಪ್ಪು ಪಟ್ಟಿ ಧರಿಸಿ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸಿದರಲ್ಲದೆ, ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.


ಪರಿಷತ್ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಶಾಸಕರಾದ ಸುನೀಲ್ ಕುಮಾರ್, ಹರೀಶ್ ಪೂಂಜಾ, ರಘುಪತಿ ಭಟ್, ಹಾಲಾಡಿ ಶ್ರೀನಿವಾಸ್ ಶೆಟ್ಟಿ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.