ಮಲಪ್ರಭಾ ಯೋಜನಾ ವ್ಯಾಪ್ತಿಯ ಕಾಮಗಾರಿಗಳ ಪ್ರಗತಿ ಪರಿಶೀಲನೆ
ಭೂಸ್ವಾಧೀನ ಪ್ರಕರಣಗಳು ಹೊರತುಪಡಿಸಿ ಅವಶ್ಯಕವಾಗಿ ಕಾಮಗಾರಿ ವಿಳಂಬಗೊಳಿಸುವ ಗುತ್ತಿಗೆದಾರರ ಧೋರಣೆಯನ್ನು ಸಹಿಸುವುದಿಲ್ಲ.
ಬೆಂಗಳೂರು: ಮಲಪ್ರಭಾ ಯೋಜನಾ ವಲಯದಲ್ಲಿ ಚಾಲ್ತಿಯಲ್ಲಿ ಇರುವ ವಿವಿಧ ಕಾಮಗಾರಿಗಳು, ದುರಸ್ತಿ ಮತ್ತು ವಸತಿಗೃಹಗಳ ನವೀಕರಣಕ್ಕೆ ಸಾವಿರಾರು ಕೋಟಿ ರೂಪಾಯಿ ಅಗತ್ಯವಿದೆ. ಆದ್ದರಿಂದ ಈ ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ಮೂರು ವರ್ಷಗಳಲ್ಲಿ ಹಂತ ಹಂತವಾಗಿ ಕೈಗೊಳ್ಳಬೇಕು ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ (Ramesh Jarakiholi) ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸವದತ್ತಿ ತಾಲೂಕಿನ ನವಿಲುತೀರ್ಥ ಜಲಾಶಯದ ಬಳಿ ಮಲಪ್ರಭಾ ಯೋಜನಾ (Malaprabha Yojane) ವಲಯದ ಅಧೀಕ್ಷಕ ಎಂಜಿನಿಯರ್ ಕಚೇರಿಯಲ್ಲಿ ಮಂಗಳವಾರ ನಡೆದ ಮಲಪ್ರಭಾ ಯೋಜನಾ ವಲಯದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯ ಶಾಸಕರು ಶಿಫಾರಸ್ಸು ಮಾಡಿರುವ ಎಲ್ಲಾ ನೀರಾವರಿ ಯೋಜನೆ, ದುರಸ್ತಿ ಕೆಲಸ ಮತ್ತು ಚಾಲ್ತಿಯಲ್ಲಿರುವ ಕಾಮಗಾರಿಗಳನ್ನು ತಕ್ಷಣ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು. ಮಲಪ್ರಭಾ ಆಧುನೀಕರಣ ಯೋಜನೆ, ಕೆರೆಗೆ ನೀರು ತುಂಬುವ ಕಾಮಗಾರಿ ಸೇರಿದಂತೆ ವಿವಿಧ ಯೋಜನೆಗಳ ಬಗ್ಗೆ ಸಚಿವ ರಮೇಶ್ ಜಾರಕಿಹೊಳಿ ಅವರು ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದುಕೊಂಡರು.
ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ರೈತರಿಗೆ ನೀಡಬೇಕಾದ ಪರಿಹಾರದ ಮೊತ್ತವನ್ನು ಪಾವತಿಸಲು ಅನುಕೂಲವಾಗುವಂತೆ ಪ್ರತಿವರ್ಷದ ಅನುದಾನದಲ್ಲಿ ನಿರ್ದಿಷ್ಟ ಮೊತ್ತವನ್ನು ಮೀಸಲಿಡಲಾಗುವುದು ಎಂದು ಸಚಿವ ಜಾರಕಿಹೊಳಿ ತಿಳಿಸಿದರು.
ಕಾಮಗಾರಿ ವಿಳಂಬ-ಗುತ್ತಿಗೆದಾರರ ವಿರುದ್ಧ ಕ್ರಮ:
ಕಾಮಗಾರಿಯನ್ನು ವಿಳಂಬಗೊಳಿಸುವ ಗುತ್ತಿಗೆದಾರರಿಗೆ ನೋಟಿಸ್ ನೀಡುವಂತೆ ಸಚಿವ ಜಾರಕಿಹೊಳಿ ಸೂಚನೆ ನೀಡಿದರು. ನೋಟಿಸ್ ನೀಡಿದಾಗ್ಯೂ ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಭೂಸ್ವಾಧೀನ ಪ್ರಕರಣಗಳು ಹೊರತುಪಡಿಸಿ ಅವಶ್ಯಕವಾಗಿ ಕಾಮಗಾರಿ ವಿಳಂಬಗೊಳಿಸುವ ಗುತ್ತಿಗೆದಾರರ ಧೋರಣೆಯನ್ನು ಸಹಿಸುವುದಿಲ್ಲ. ಗುತ್ತಿಗೆದಾರರ ಮೇಲೆ ಕ್ರಮಕೈಗೊಳ್ಳುವುದರ ಜತೆಗೆ ತಾಂತ್ರಿಕ ಕಾರಣಗಳಿಂದ ಯಾವುದೇ ಯೋಜನೆ ಕುಂಠಿತಗೊಳ್ಳದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದು ನಿರ್ದೇಶನ ನೀಡಿದರು.
ರೈತರ (Farmers) ಪಾಲುದಾರಿಕೆಯೊಂದಿಗೆ ನೀರು ಸದ್ಬಳಕೆಗೆ ವಾಲ್ಮಿ ವತಿಯಿಂದ ವಿವಿಧ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರ ಎಲ್ಲ ರೀತಿಯ ನೆರವು ನೀಡಲಿದೆ. ರಾಜಸ್ತಾನ ಮತ್ತು ಮಹಾರಾಷ್ಟ್ರದ ಮಾದರಿಯಲ್ಲಿ ರೈತರ ಸಹಭಾಗಿತ್ವದಲ್ಲಿ ನೀರಾವರಿ ವ್ಯವಸ್ಥೆ ಅನುಷ್ಠಾನದ ಬಗ್ಗೆ ಅಧ್ಯಯನ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು.
ವಿವಿಧ ವಿಧಾನ ಸಭಾ ಕ್ಷೇತ್ರಗಳ ಶಾಸಕರ ಬೇಡಿಕೆಗಳನ್ನು ಆಲಿಸಿದ ಸಚಿವ *ರಮೇಶ್ ಜಾರಕಿಹೊಳಿ* ಅವರು, ಕೇಂದ್ರ ಜಲ ಆಯೋಗದಿಂದ ಅನುಮತಿ ಲಭಿಸಿದ ಎಲ್ಲ ಹೊಸ ಯೋಜನೆಗಳನ್ನು ಕೂಡಲೇ ಅನುಷ್ಠಾನಕ್ಕೆ ತರಲಾಗುತ್ತದೆ ಎಂದರು.
ಕರ್ನಾಟಕ ವಿಧಾನಸಭಾ ಉಪ ಸಭಾಪತಿ ಆನಂದ ಮಾಮನಿ, ಶಾಸಕರಾದ ಮಹಾಂತೇಶ ಕೌಜಲಗಿ, ಮಹಾಂತೇಶ ದೊಡ್ಡಗೌಡ್ರ, ಮಹಾದೇವಪ್ಪ ಯಾದವಾಡ, ಶಂಕರ ಪಾಟೀಲ ಮುನೇನಕೊಪ್ಪ ಅವರು ಪ್ರಗತಿ ಪರಿಶೀಲನಾ ಸಭೆಯಲ್ಲಿ ಉಪಸ್ಥಿತರಿದ್ದರು.