ಮೈಸೂರು: ಚಾಮರಾಜನಗರದ ಸುಳ್ವಾಡಿ ಗ್ರಾಮದ ಮಾರಮ್ಮನ ದೇಗುಲ ಪ್ರಸಾದ ವಿಷಪೂರಿತವಾಗಲು ಏನನ್ನು ಬಳಸಲಾಗಿತ್ತು ಎಂಬ ಪ್ರಶ್ನೆಗೆ ಕಡೆಗೂ ಉತ್ತರ ದೊರೆತಿದೆ. 


COMMERCIAL BREAK
SCROLL TO CONTINUE READING

ಈ ಬಗ್ಗೆ ಮಾಹಿತಿ ನೀಡಿರುವ ಮೈಸೂರು ದಕ್ಷಿಣ ಐಜಿಪಿ ಶರತ್ ಚಂದ್ರ ಅವರು, ಪ್ರಸಾದಕ್ಕೆ ಮೋನೋ ಕ್ರೋಟೋಪಸ್ ಕೀಟನಾಶಕ ಬೆರೆಸಲಾಗಿತ್ತು ಎಂಬುದು ವಿಧಿವಿಜ್ಞಾನ ಪ್ರಯೋಗಾಲಯದ ವರದಿಯಿಂದ ಬಹಿರಂಗವಾಗಿದ್ದು, ಈ ವಿಷ ಆರ್ಗೊನೋ ಫಾಸ್ಪರಸ್ ಗ್ರೂಪ್ ಗೆ ಸೇರುತ್ತದೆ. ಇದನ್ನು ರೋಗಪೀಡಿತ ಗಿಡ ಹಾಗೂ ಬೆಳೆಗಳಿಗೆ ಬಳಸಲಾಗುತ್ತದೆ. ಇದನ್ನು ನೀರಿನಲ್ಲಿ ಮಿಶ್ರಣ ಮಾಡಿ ಪ್ರಸಾದದಲ್ಲಿ ಬೆರೆಸಲಾಗಿದೆ. ಇದನ್ನು ಸೇವಿಸಿದರೆ ನೇರವಾಗಿ ನರಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದರಿಂದ ಜೀವಕ್ಕೇ ಅಪಾಯವಾಗಲಿದೆ ಎಂದು ವಿವರಿಸಿದ್ದಾರೆ. 


ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ 13 ಅಧಿಕಾರಿಗಳ ತಂಡ ತನಿಖೆ ಆರಂಭಿಸಿದೆ. 10-12 ಶಂಕಿತರನ್ನು ಬಂಧಿಸಲಾಗಿದೆ. ಪ್ರಕರಣ ವಿಚಾರಣೆ ಹಂತದಲ್ಲಿರುವುದರಿಂದ ತನಿಖೆ ಬಗ್ಗೆ ಈಗಲೇ ಹೇಳಲು ಸಾಧ್ಯವಿಲ್ಲ ಎಂದು ಐಜಿಪಿ ಶರತ್ ಚಂದ್ರ ಹೇಳಿದ್ದಾರೆ.


ವೈದ್ಯರು ಅಸ್ವಸ್ಥರ ಜೀವ ಉಳಿಸುವ ಪ್ರಯತ್ನಿಸುತ್ತಿದ್ದಾರೆ: ಜಿಟಿಡಿ
ಪ್ರಸಾದ ಸೇವಿಸಿ ಚಿಕಿತ್ಸೆ ಫಲಕಾರಿಯಾಗದೆ ಜೆಎಸ್ಎಸ್ ಆಸ್ಪತ್ರೆಯಲ್ಲಿ ಮೃತಪಟ್ಟ ಮೈಲಿ ಬಾಯಿ ಸಾವಿನ ವಿಚಾರ ತಿಳಿದು ಸ್ಥಳಕ್ಕಾಗಮಿಸಿದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರು, ಅಲ್ಲಿದ್ದವರ ಚಿಂತಾಜನಕ ಸ್ಥಿಟಿ ಕಂಡು ಭಾವುಕರಾದರು. 


ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರದದಲ್ಲಿ ಉದ್ದೇಶಪೂರ್ವಕವಾಗಿ ವಿಷ ಬೆರೆಸಲಾಗಿದೆ. ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ 14 ಮಂದಿ ಮೃತಪಟ್ಟಿದ್ದಾರೆ. ಉಳಿದಂತೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುವರ ಸ್ಥಿತಿಯೂ ಗಂಭೀರವಾಗಿದೆ. ಅಸ್ವಸ್ಥರನ್ನು ಉಳಿಸಲು ವೈದ್ಯರು ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ ಎಂದು ಜಿ.ಟಿ.ದೇವೇಗೌಡ ಹೇಳಿದರು.