ಹುಬ್ಬಳ್ಳಿ:  ಧಾರವಾಡ ಜಿಲ್ಲೆಯ ಕುಂದಗೋಳ ಕಾಂಗ್ರೆಸ್ ಶಾಸಕ ಹಾಗೂ ಪೌರಾಡಳಿತ ಸಚಿವ ಸಿ.ಎಸ್ ಶಿವಳ್ಳಿ ಅವರು ತೀವ್ರ ಹೃದಯಾಘಾತದಿಂದ ಶುಕ್ರವಾರ ವಿಧಿವಶರಾದರು.


COMMERCIAL BREAK
SCROLL TO CONTINUE READING

ಬೈಪಾಸ್ ಸರ್ಜರಿ ಮಾಡಿಸಿಕೊಂಡಿದ್ದ 58 ವರ್ಷದ ಸಚಿವ ಸಿ.ಎಸ್ ಶಿವಳ್ಳಿ, ಗುರುವಾರ ಮಧ್ಯರಾತ್ರಿಯವರೆಗೂ ಧಾರವಾಡದಲ್ಲಿ ನಡೆದ ಕಟ್ಟಡ ದುರಂತ ಸ್ಥಳದಲ್ಲಿ ಹಾಜರಿದ್ದು ಪರಿಹಾರ ಕಾರ್ಯದಲ್ಲಿ ಭಾಗಿಯಾಗಿದ್ದರು. ಈ ದುರ್ಘಟನೆ ಸಂಭವಿಸಿದ ದಿನದಿಂದ ಸತತವಾಗಿ ಅಲ್ಲಿಯೇ ಬೀಡು ಬಿಟ್ಟು ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದರು.


ಇಂದು ಬೆಳಿಗ್ಗೆ ಹೃದಯಾಘಾತದಿಂದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಪೌರಾಡಳಿತ ಸಚಿವ ಸಿ.ಎಸ್. ಶಿವಳ್ಳಿ(58) ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ. 


ತಮ್ಮ ನೆಚ್ಚಿನ ನಾಯಕ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪನವರ ಗರಡಿಯಲ್ಲಿ ಬೆಳೆದ ಶಿವಳ್ಳಿ, ಅವರಂತೆಯೇ ಚತುರ ರಾಜಕಾರಣಿ, ಅದ್ಭುತ ವಾಗ್ಮಿಯಾಗಿದ್ದರು. ಬಂಗಾರಪ್ಪನವರ ಸಲಹೆ ಮೇರೆಗೆ ರಾಜಕೀಯಕ್ಕೆ ಪದಾರ್ಪಣೆ ಮಾಡಿದ್ದ ಶಿವಳ್ಳಿ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು, ಮಾಜಿ ಸಿಎಂ ಸಿದ್ಧರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಶಿವಳ್ಳಿ ಇದೇ ಮೊದಲ ಬಾರಿಗೆ ಸಚಿವರಾಗಿದ್ದರು.


ಬಿ.ಎ. ಪದವೀಧರ ಸಿ.ಎಸ್. ಶಿವಳ್ಳಿ 1999ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಟಿಕೆಟ್ ಸಿಗದ ಕಾರಣ ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದರು. 2008ರಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ ಆರು ಸಾವಿರ ಮತಗಳ ಅಂತರದಿಂದ ಪರಾಜಯ ಗೊಂಡರು. ಆದರೆ 2013ರಲ್ಲಿ ಮತ್ತೆ ಟಿಕೆಟ್ ಪಡೆದು ಸ್ಪರ್ಧಿಸಿದ್ದ ಅವರು 25 ಸಾವಿರ ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದರು. 2018ರಲ್ಲಿ ನಡೆದ ಚುನಾವಣೆಯಲ್ಲಿಯೂ ಧಾರವಾಡ ಜಿಲ್ಲೆಯ ಕುಂದಗೋಳ ಕ್ಷೇತ್ರದಿಂದ ಸ್ಪರ್ದಿಸಿ ಜಯಗಳಿಸಿದ್ದ ಶಿವಳ್ಳಿ ಸಂಪುಟ ದರ್ಜೆಯ ಸಚಿವರಾಗಿ ಆಯ್ಕೆಯಾಗಿದ್ದರು.