ಸಾಹಿತ್ಯದ `ಬದುಕು` ಕಟ್ಟಿದ ಹಿರಿಯ ಲೇಖಕಿ ಗೀತಾ ನಾಗಭೂಷಣ ಇನ್ನಿಲ್ಲ
ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ಸಾಹಿತಿ ಗೀತಾ ನಾಗಭೂಷಣ ಅವರು ತಮ್ಮ 78 ನೇ ವಯಸ್ಸಿನಲ್ಲಿ ಭಾನುವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ.
ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ಸಾಹಿತಿ ಗೀತಾ ನಾಗಭೂಷಣ ಅವರು ತಮ್ಮ 78 ನೇ ವಯಸ್ಸಿನಲ್ಲಿ ಭಾನುವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ.
ಗೀತಾ ನಾಗಭೂಷಣ ಅವರು ಕಲಬುರ್ಗಿ ಜಿಲ್ಲೆಯ ಸಾವಳಗಿ ಗ್ರಾಮದಲ್ಲಿ ಮಾರ್ಚ್ 25 ರಂದು ಜನಿಸಿದರು. ತಮ್ಮ ಸಾಹಿತ್ಯದ ವಿವಿಧ ಕೃತಿಗಳಲ್ಲಿಯೂ ಕೂಡ ತಮ್ಮ ಬದುಕಿನ ಬವಣೆಗಳನ್ನು ಸಾರಿದ ದಿಟ್ಟ ಮಹಿಳೆಯಾಗಿದ್ದರು. ಅವರ ಅವರ ಬದುಕು ಕಾದಂಬರಿಗೆ 2004ರ ವರ್ಷದ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರವನ್ನು ಪಡೆದಿದ್ದರು.
ಇಷ್ಟೇ ಅಲ್ಲದೆ ಅವರು ಗದುಗಿನಲ್ಲಿ ನಡೆದ 76ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆಯಾಗಿದ್ದರು, ಇದರ ಜೊತೆಗೆ ಅವರಿಗೆ ಗುಲ್ಬರ್ಗಾ ವಿಶ್ವವಿದ್ಯಾಲಯದ ಡಾಕ್ಟರೇಟ್,ಅತ್ತಿಮಬ್ಬೆ ಪ್ರಶಸ್ತಿ, ನಾಡೋಜ ಪ್ರಶಸ್ತಿ ಮುಂತಾದ ಹಲವಾರು ಗೌರವಗಳ ಜೊತೆಗೆ 2012ರ ವರ್ಷದಲ್ಲಿ ಡಾ. ಗೀತಾ ನಾಗಭೂಷಣರು ಕನ್ನಡಕ್ಕೆ ಮೊಟ್ಟಮೊದಲ ಭಾರತೀಯ ಭಾಷಾ ಪರಿಷತ್ ಪ್ರಶಸ್ತಿ ತಂದುಕೊಟ್ಟಿದ್ದಾರೆ.
ಗೀತಾ ನಾಗಭೂಷಣರ 'ಹಸಿಮಾಂಸ ಮತ್ತು ಹದ್ದುಗಳು' ಎನ್ನುವ ಕಾದಂಬರಿಯು ಚಲನಚಿತ್ರವಾಗಿದೆ. ಅಷ್ಟೇ ಅಲ್ಲದೆ ಅವರು ಒಟ್ಟು 27 ಸ್ವತಂತ್ರ ಕಾದಂಬರಿ, 50 ಸಣ್ಣ ಕಥೆಗಳು, ಎರಡು ಸಂಕಲನ, 12 ನಾಟಕಗಳು, ಒಂದು ಸಂಪಾದನಾ ಕೃತಿ, ಒಂದು ಸಂಶೋಧನಾ ಕೃತಿ ಹೀಗೆ, ಕನ್ನಡ ಸಾಹಿತ್ಯಕ್ಕೆ ಹಲವಾರು ರೀತಿಯಲ್ಲಿ ಕೊಡುಗೆಯನ್ನು ನೀಡಿದ ಹೀರಿಮೆ ಅವರದ್ದು ಎನ್ನಬಹುದು.