ಓಲಾ ಕ್ಯಾಬ್ ಚಾಲಕನಿಂದ ಯುವತಿಗೆ ಲೈಂಗಿಕ ಕಿರುಕುಳ
ಬೆಂಗಳೂರು : ರಾತ್ರಿ ನಿರ್ಜನ ಪ್ರದೇಶದಲ್ಲಿ ಕಾರಿನ ಚೈಲ್ಡ್ ಲಾಕ್ ಮಾಡಿ ಬಂಧನದಲ್ಲಿರಿಸಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಓಲಾ ಕ್ಯಾಬ್ ಚಾಲಕನ ಕಪಿಮುಷ್ಠಿಯಿಂದ ಯುವತಿಯೊಬ್ಬಳು ಪಾರಾಗಿದ್ದಾಳೆ.
ಯುವತಿಯು 23 ವರ್ಷದ ಫ್ಯಾಷನ್ ಡಿಸೈನರ್ ಆಗಿದ್ದು, ಕಳೆದ ಭಾನುವಾರ ಇಂದಿರಾ ನಗರದಿಂದ ಬಿಟಿಎಂ ಲೇಔಟ್ಗೆ ಕ್ಯಾಬ್ನಲ್ಲಿ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಕ್ಯಾಬ್ ರಿಂಗ್ ರಸ್ತೆಯ ನಿರ್ಜನ ಪ್ರದೇಶ ಪ್ರವೇಶಿಸುತ್ತಿದ್ದಂತೆ ಚಾಲಕ ರಸ್ತೆ ಬದಿ ಕಾರು ನಿಲ್ಲಿಸಿ, ಕಾರಿನ ಚೈಲ್ಡ್ ಲಾಕ್ ಮಾಡಿ ಯುವತಿ ಜತೆ ಅಸಭ್ಯವಾಗಿ ವರ್ತಿಸಲು ಮುಂದಾಗಿದ್ದಾನೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಯುವತಿ, ದಿಢೀರನೆ ಕ್ಯಾಬ್ ನಿಲ್ಲಿಸಿದಾಗ ಸುತ್ತ ಮುತ್ತ ಯಾರು ಇರಲಿಲ್ಲ. ತಕ್ಷಣ ಚಾಲಕ ಬಂದು ನನ್ನ ಕಾಲನ್ನು ಮುಟ್ಟಿದ. ಭಯದಿಂದಲೇ ನಾನು ಆತನಿಗೆ ಎಚ್ಚರಿಕೆ ನೀಡಿದೆ. ನಂತರ ಕಾರಿಗೆ ಹಾನಿ ಮಾಡಲು ಪ್ರಯತ್ನಿಸಿದಾಗ ಆತನೇ ಬಾಗಿಲು ತೆರೆದ. ನಂತರ ಅಲ್ಲಿಂದ 500 ಮೀಟರ್ ಓಡಿ ಆಟೋವನ್ನು ಹಿಡಿದೆ.
ನಂತರವೂ ಆತ ನನಗೆ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದ, ಆತನ ನಂಬರ್ ಅನ್ನು ಬ್ಲಾಕ್ ಮಾಡಿ ಠಾಣೆಗೆ ದೂರು ನೀಡಿದೆ ಎಂದು ತಿಳಿಸಿದ್ದಾಳೆ.