ಸೆ.6 ಗೌರಿ ಹಬ್ಬದಂದು 7 ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಎತ್ತಿನಹೊಳೆ ಯೋಜನೆ ಏತ ಕಾಮಗಾರಿ ಉದ್ಘಾಟನೆ
ಬೆಂಗಳೂರು, ಸೆ.01 "ರಾಜ್ಯದ 7 ಜಿಲ್ಲೆಗಳಿಗೆ ಕುಡಿಯುವ ನೀರು ಹಾಗೂ ಕೆರೆ ತುಂಬಿಸುವ ಮಹತ್ವಾಕಾಂಕ್ಷಿ ಎತ್ತಿನಹೊಳೆ ಯೋಜನೆಯ ಏತ ಕಾಮಗಾರಿಗಳನ್ನು ಮುಖ್ಯಮಂತ್ರಿಗಳು ಸೆ.6 ಗೌರಿ ಹಬ್ಬದಂದು ಉದ್ಘಾಟನೆ ಮಾಡಲಿದ್ದಾರೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಸದಾಶಿವನಗರ ನಿವಾಸದ ಬಳಿ ಶಿವಕುಮಾರ್ ಅವರು ಮಾಧ್ಯಮಗಳಿಗೆ ಭಾನುವಾರ ಮಾಹಿತಿ ನೀಡಿದರು.
"ಈ ಯೋಜನೆಯಿಂದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ ಜಿಲ್ಲೆಗಳು ಈ ಯೋಜನೆಯನ್ನು ಎದುರುನೋಡುತ್ತಿವೆ. ಅನೇಕ ನಾಯಕರು ಈ ಯೋಜನೆಗೆ ಹೋರಾಟ ಮಾಡಿದ್ದು, ಅನೇಕ ಪಕ್ಷಗಳು ಇದಕ್ಕೆ ಸಹಕಾರ ನೀಡಿವೆ. ಕಳೆದ ಒಂದು ವರ್ಷದಿಂದ ಈ ಯೋಜನೆಯನ್ನು ಸವಾಲಾಗಿ ಸ್ವೀಕರಿಸಿದ್ದೆ. ಮೊನ್ನೆಯಷ್ಟೇ ಯೋಜನೆಯ ಕಾಮಗಾರಿಗಳ ಪರೀಕ್ಷಾರ್ಥ ಕಾರ್ಯಾಚರಣೆ ಮಾಡಿದ್ದೆ" ಎಂದು ತಿಳಿಸಿದರು.
"ಈ ಯೋಜನೆಗಳ ವಿಚಾರವಾಗಿ ಅನೇಕ ಟೀಕೆಗಳು ಬರುತ್ತಿದ್ದವು. ಟೀಕೆಗಳು ಬರಲಿ. ಈ ಯೋಜನೆಯಲ್ಲಿ ನೀರನ್ನು ಪಂಪ್ ಮಾಡುವ ಮೂಲಕ ಕಾಲುವೆಗಳಿಗೆ ಹರಿಸುತ್ತಿದ್ದೇವೆ. ಈ ಯೋಜನೆ ಮಾರ್ಗದ ಮಧ್ಯೆ ಅರಣ್ಯ ಇಲಾಖೆಗೆ ಸಂಬಂಧಿಸಿದ ಜಾಗಗಳಲ್ಲಿ ಸ್ವಲ್ಪ ಸಮಸ್ಯೆ ಇದ್ದು, ಅವುಗಳನ್ನು ಬಗೆಹರಿಸಿದ್ದೇವೆ. ಈ ಜಾಗ ಹಸ್ತಾಂತರವಾದ ಬಳಿಕ ಪ್ರಮುಖ ಕಾಲುವೆಗಳಿಗೆ ನೀರು ಹರಿಯಲಿವೆ.
ಈಗ ತಾತ್ಕಾಲಿಕವಾಗಿ ವಾಣಿ ವಿಲಾಸ ಅಣೆಕಟ್ಟಿಗೆ ನೀರು ಹರಿಸಲಾಗುತ್ತಿದೆ. ಯೋಜನೆಯ 7 ವಿಯರ್ ಗಳು ನೀರನ್ನು ಎತ್ತುತ್ತಿವೆ. ಈ ತಿಂಗಳ 6 ರಂದು ಉದ್ಘಾಟನೆಗೆ ಮುಖ್ಯಮಂತ್ರಿಗಳು ಒಪ್ಪಿದ್ದಾರೆ" ಎಂದು ತಿಳಿಸಿದರು.
ಇದನ್ನೂ ಓದಿ: ಅಣಬೆಯ ಸೇವನೆಯಿಂದ ತಟ್ಟನೆ ಇಳಿಕೆಯಾಗುವುದು ಶುಗರ್..ಒಮ್ಮೆ ಟ್ರೈ ಮಾಡಿ ಮಧುಮೇಹ ಚಿಂತೆಗೆ ಗುಡ್ ಬೈ ಹೇಳಿ
"ಈ ಯೋಜನೆಯ ಫಲಾನುಭವಿ ಜಿಲ್ಲೆಯ ಜನರು ನೀರನ್ನು ಎತ್ತುವ ದೃಶ್ಯ ಕಣ್ತುಂಬಿಕೊಳ್ಳಬಹುದು. ಅಲ್ಲಿ ಜಾಗ ಕಿರಿದಾಗಿದ್ದರು, ಪೊಲೀಸರಿಗೆ ಹೇಳಿ ವ್ಯವಸ್ಥೆ ಮಾಡಲಾಗಿದೆ. ಇನ್ನು ಉದ್ಘಾಟನಾ ಕಾರ್ಯಕ್ರಮಕ್ಕೆ ಪಕ್ಷಬೇಧ ಮರೆತು ಎಲ್ಲ ನಾಯಕರು, ರೈತರಿಗೆ ಆಹ್ವಾನಿಸಲಾಗುವುದು. ಎಲ್ಲಾ ಜಿಲ್ಲಾ ಉಸ್ತುವಾರಿ ಸಚಿವರಿಗೆ ಆಹ್ವಾನ ನೀಡುವಂತೆ ನನ್ನ ಕಚೇರಿ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಈ ಪವಿತ್ರವಾದ ಕಾರ್ಯಕ್ಕೆ ಬಂದು ಶುಭ ಗಳಿಗೆಗೆ ಸಾಕ್ಷಿಯಾಗಬೇಕು ಎಂದು ಮನವಿ ಮಾಡುತ್ತೇನೆ" ಎಂದು ತಿಳಿಸಿದರು.
ಸಿಎಂ ನಿವಾಸದಲ್ಲಿ ನಡೆದ ಭೋಜನ ಕೂಟದಲ್ಲಿ ಯಾವ ವಿಚಾರ ಚರ್ಚೆಯಾಯಿತು ಎಂದು ಕೇಳಿದಾಗ, "ಮಹಾತ್ಮಾ ಗಾಂಧೀಜಿ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ಬೆಳಗಾವಿಯಲ್ಲಿ ನಡೆದ ಎಐಸಿಸಿ ಅಧಿವೇಶನಕ್ಕೆ ನೂರು ವರ್ಷಗಳು ಪೂರ್ಣಗೊಂಡಿವೆ. ಈಗ ಆ ಸ್ಥಾನದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಕೂತಿದ್ದಾರೆ. ಗಾಂಧೀಜಿ ಅವರು ಹಾಕಿಕೊಟ್ಟಿರುವ ಮಾರ್ಗದರ್ಶನ ವಿಶ್ವವೇ ಗಮನಿಸಿದೆ. ಇದನ್ನು ಮುಂದಿನ ಪೀಳಿಗೆಗೆ ತಿಳಿಸಬೇಕಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ವತಿಯಿಂದ ಯಾವ ರೀತಿ ಕಾರ್ಯಕ್ರಮ ರೂಪಿಸಬೇಕು ಎಂಬುದರ ಬಗ್ಗೆ ಚರ್ಚೆ ಮಾಡಲಾಯಿತು. ಮುಂದಿನ ಒಂದುವಾರದಲ್ಲಿ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ವರದಿ ನೀಡುವಂತೆ ಸಚಿವರಿಗೆ ತಿಳಿಸಲಾಗಿದೆ. ಪಕ್ಷದ ವತಿಯಿಂದಲೂ ಕಾರ್ಯಕ್ರಮ ಮಾಡಲಾಗುತ್ತಿದ್ದು, ಆ ಬಗ್ಗೆ ಪಕ್ಷದ ಕಚೇರಿಯಲ್ಲಿ ಚರ್ಚೆ ಮಾಡಿದ್ದೆವು" ಎಂದು ತಿಳಿಸಿದರು.
ಕೋವಿಡ್ ಸಮಯದಲ್ಲಿನ ಅಕ್ರಮದ ಬಗ್ಗೆ ನ್ಯಾ.ಕುನ್ಹಾ ಅವರ ಸಮಿತಿ ವರದಿ ಸಲ್ಲಿಕೆ ಹಾಗೂ ಮಾಜಿ ಸಚಿವ ಸುಧಾಕರ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, "ಕುನ್ಹಾ ಅವರ ವರದಿಯಲ್ಲಿ ಏನಿದೆ ಎಂದು ಗೊತ್ತಿಲ್ಲ. ಸುಧಾಕರ್ ಅವರ ಹೇಳಿಕೆಯ ಬಗ್ಗೆಯೂ ಮಾಹಿತಿ ಇಲ್ಲ. ಈ ವಿಚಾರವಾಗಿ ಸಂಪೂರ್ಣ ಮಾಹಿತಿ ಪಡೆದು ಮಾತನಾಡುತ್ತೇನೆ. ಈ ವಿಚಾರವಾಗಿ ಸರ್ಕಾರದ ವಕ್ತಾರರು ಪ್ರತಿಕ್ರಿಯೆ ನೀಡುತ್ತಾರೆ" ಎಂದು ತಿಳಿಸಿದರು.
ರಾಜಭವನದಲ್ಲಿ ವಿರೋಧ ಪಕ್ಷಗಳ ನಾಯಕರ ವಿರುದ್ಧ ಯಾವುದೇ ಅರ್ಜಿ ಇಲ್ಲ ಎಂದು ರಾಜ್ಯಪಾಲರು ಹೇಳಿದ್ದು, ಹಾಗಾದರೆ ಫೈಲ್ ಗಳು ಏನಾದವು ಎಂದು ಕೇಳಿದಾಗ, "ನಮಗೂ ಅದೇ ಯಕ್ಷಪ್ರಶ್ನೆಯಾಗಿದೆ. ನಾಳೆ ಈ ವಿಚಾರವಾಗಿ ಮಾಹಿತಿ ಪಡೆಯುತ್ತೇವೆ. ನಾವು ನಮಗೆ ಬಂದಿರುವ ಮಾಹಿತಿಗಳ ಮೇರೆಗೆ ನಮ್ಮ ಮನವಿ ಸಲ್ಲಿಸಿದ್ದೇವೆ" ಎಂದು ತಿಳಿಸಿದರು.
ಕಾಂಗ್ರೆಸ್ ನಾಯಕರ ವಿರುದ್ಧದ ಎರಡು ಅರ್ಜಿಗಳು ಮಾತ್ರ ರಾಜ್ಯಪಾಲರ ಬಳಿ ಉಳಿದುಕೊಂಡಿವೆಯಂತೆ ಎಂದು ಕೇಳಿದಾಗ, "ಆ ಬಗ್ಗೆ ನಮಗೆ ಮಾಹಿತಿ ಇಲ್ಲ. ನಮ್ಮ ವಿರುದ್ಧ ಕೆಲವರು ಅರ್ಜಿ ಕೊಡುತ್ತಿರುತ್ತಾರೆ. ಮತ್ತೆ ಕೆಲವರು ನನ್ನ ವಿರುದ್ಧ ದೂರು ನೀಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಅವರು ದೂರು ನೀಡಲಿ" ಎಂದು ತಿಳಿಸಿದರು.
ಕಾಲೇಜು ದಿನಗಳಲ್ಲಿ ಬಳಸಿದ್ದ ಬೈಕ್ ಮಾರುವಿನ್ಯಾಸ:
ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕಾಲೇಜು ದಿನಗಳಲ್ಲಿ ಬಳಸಿದ್ದ ಯಜ್ದಿ ಬೈಕ್ ಅನ್ನು ಮರುವಿನ್ಯಾಸಗೊಳಿಸಿ ಅವರಿಗೆ ನೀಡಿದರು. ಈ ಬಗ್ಗೆ ಮಾತನಾಡಿದ ಶಿವಕುಮಾರ್ ಅವರು, "ನಾನು ಕಾಲೇಜು ದಿನಗಳಲ್ಲಿ ಈ ಬೈಕ್ ಓಡಿಸುತ್ತಿದ್ದೆ. ಕನಕಪುರದ ನಿವಾಸದಲ್ಲಿತ್ತು. ನಮ್ಮ ಸ್ನೇಹಿತರು ಈಗ ಅದಕ್ಕೆ ಹೊಸ ರೂಪ ಕೊಟ್ಟು ತಂದಿದ್ದಾರೆ" ಎಂದು ತಿಳಿಸಿದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.