ಮೈಸೂರು: ಮನಿ ಡಬ್ಲಿಂಗ್​​ ದಂಧೆಯಲ್ಲಿ ತೊಡಗಿದ್ದ ಬಾಂಬೆ ಮೂಲದ ವ್ಯಕ್ತಿಗಳ ಮೇಲೆ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಓರ್ವ ಸಾವನ್ನಪ್ಪಿದ ಘಟನೆ ಗುರುವಾರ ಮೈಸೂರಿನಲ್ಲಿ ನಡೆದಿದೆ. 


COMMERCIAL BREAK
SCROLL TO CONTINUE READING

ಇಲ್ಲಿನ ಹೆಬ್ಬಾಳ್ ರಿಂಗ್ ರಸ್ತೆ ಬಳಿಯ ಅಪಾರ್ಟ್ಮೆಂಟ್ ಒಂದರಲ್ಲೂ ಹಣ ದ್ವಿಗುಣ ಮಾಡುವ ದಂಧೆ ನಡೆಸಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಇಂದು ಬೆಳಿಗ್ಗೆ ಸುಮಾರು 10 ಗಂಟೆಗೆ ಪೊಲೀಸರು ದಾಳಿ ನಡೆಸಿದ ಸಂದರ್ಭದಲ್ಲಿ ಆರೋಪಿಗಳು ಇನ್ಸ್‌ಪೆಕ್ಟರ್​​ಗೆ ಗನ್ ತೋರಿಸಿ ಪರಾರಿಯಾಗಲು ಪ್ರಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಓರ್ವ ಆರೋಪಿ ಮೃತಪಟ್ಟಿದ್ದು, ಮೂವರು ಪೊಲೀಸರು ಗಾಯಗೊಂಡಿದ್ದಾರೆ.


ಗಾಯಾಳುಗಳನ್ನು ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೃತಪಟ್ಟ ಆರೋಪಿಯ ಶವವನ್ನು ಕೆ.ಆರ್.ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ. 


ಘಟನೆ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಅವರು, ಇಂದು ಬೆಳಿಗ್ಗೆ ಸುಮಾರು 9.45ರ ಸಮಯದಲ್ಲಿ ಈ ಘಟನೆ ನಡೆದಿದೆ. ನೋಟು ಅಮಾನ್ಯೀಕರಣದ ಬಳಿಕ ನೋಟು ಬದಲು ಮಾಡಲು ಬಂದಿದ್ದ ಮುಂಬೈ ಮೂಲದ ಗ್ಯಾಂಗ್ ಬಗ್ಗೆ ಖಚಿತ ಮಾಹಿತಿ ದೊರೆತ ಬಳಿಕ ವಿಜಯನಗರ ಇನ್ಸ್ ಪೆಕ್ಟರ್ ಬಿ.ಜಿ.ಕುಮಾರ್ ನೇತೃತ್ವದ ತಂಡ ದಾಳಿ ನಡೆಸಿದ್ದರು. ಈ ವೇಳೆ ಸಿಬ್ಬಂದಿಗಳ ರಕ್ಷಣೆಗಾಗಿ ಇನ್ಸ್ ಪೆಕ್ಟರ್ ಫೈರ್ ಮಾಡಿದ ಸಂದರ್ಭದಲ್ಲಿ ಓರ್ವ ಆರೋಪಿಗೆ ಗುಂಡು ತಗುಲಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ ಎಂದಿದ್ದಾರೆ. 


ಸದ್ಯ ಸುಪ್ರೀಂಕೋರ್ಟ್ ಮಾರ್ಗಸೂಚಿ ಮತ್ತು ಪೊಲೀಸ್ ಕಾಯ್ದೆ ಪ್ರಕಾರ ಕ್ರಮ ಜರುಗಿಸುವುದಾಗಿ ಪೋಲಿಸ್ ಆಯುಕ್ತರು ತಿಳಿಸಿದ್ದಾರೆ.