ಬೆಂಗಳೂರು: ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ ವ್ಯಾಪ್ತಿಯಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು 1,777 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದ್ದು ಇದಕ್ಕೆ ರೈತರಿಂದ ಪ್ರತಿರೋಧ ಕಂಡುಬರುತ್ತಿದೆ. ಈ ಸಂಬಂಧವಾಗಿ ಅನುಕೂಲಕರ ತೀರ್ಮಾನಕ್ಕೆ ಬರಲು ಅ.25ರ ನಂತರ ಮತ್ತೊಂದು ಸಭೆ ಕರೆಯಲಾಗುವುದು ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಈ ಸಂಬಂಧವಾಗಿ ಚರ್ಚಿಸಲು ರೈತ ಮುಖಂಡರು ಮತ್ತು ಸರಕಾರದ ನಡುವೆ ಬುಧವಾರ ಖನಿಜ ಭವನದಲ್ಲಿ ನಡೆದ ಸುದೀರ್ಘ ಸಭೆಯಲ್ಲಿ ಅಂತಿಮ ತೀರ್ಮಾನ ಸಾಧ್ಯವಾಗಲಿಲ್ಲ.ಈ ಸಭೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ ಎಚ್ ಮುನಿಯಪ್ಪ ಕೂಡ ಭಾಗವಹಿಸಿ, ರೈತರನ್ನು‌ ಮನವೊಲಿಸುವ ಪ್ರಯತ್ನ‌ ಮಾಡಿದರು.


ಸಭೆಯಲ್ಲಿ ಪಾಲ್ಗೊಂಡಿದ್ದ ರೈತ ಮುಖಂಡರಾದ ಬೈಯಾರೆಡ್ಡಿ, ಚುಕ್ಕಿ ನಂಜುಂಡಸ್ವಾಮಿ ಮುಂತಾದವರು, `ಭೂಸ್ವಾಧೀನವನ್ನು ವಿರೋಧಿಸಿ ಸುಮಾರು ಒಂದೂವರೆ ವರ್ಷದಿಂದಲೂ ಹೋರಾಟ ನಡೆಯುತ್ತಿದೆ. ಆದ್ದರಿಂದ, ಭೂಸ್ವಾಧೀನಕ್ಕೆ ಸರಕಾರ ಹೊರಡಿಸಿರುವ ಪ್ರಾಥಮಿಕ ಅಧಿಸೂಚನೆಯನ್ನು ರದ್ದು ಮಾಡಬೇಕು. ಇದರಲ್ಲಿ ಹದಿಮೂರು ಹಳ್ಳಿಗಳ ನೂರಾರು ರೈತ ಕುಟುಂಬಗಳ ಬದುಕಿನ ಪ್ರಶ್ನೆ ಅಡಗಿದೆ’ ಎಂದು ಪ್ರತಿಪಾದಿಸಿದರು.


ಇದನ್ನೂ ಓದಿ: ಇಂದು ವಿಚಾರಣೆಗೆ ಹಾಜರಾಗಲಿರುವ ಅಂಬಿಕಾಪತಿ


ಇವರ ಅಹವಾಲುಗಳನ್ನು ಆಲಿಸಿದ ಸಚಿವ ಪಾಟೀಲರು, `ಇನ್ನು ಮೂರ್ನಾಲ್ಕು ದಿನಗಳಲ್ಲಿ ನೀವೆಲ್ಲರೂ ಮತ್ತೊಮ್ಮೆ ಸಭೆ ಸೇರಿ, ಒಮ್ಮತಕ್ಕೆ ಬನ್ನಿ. ಇದೇ 25ರ ನಂತರ ನಾವು ಇನ್ನೊಂದು ಸಭೆ ಏರ್ಪಡಿಸುತ್ತೇವೆ. ಅಲ್ಲಿ ನಿಮ್ಮ ಅಂತಿಮ ನಿರ್ಣಯ ತಿಳಿಸಿ. ಅಲ್ಲೂ ಬಗೆಹರಿಯದಿದ್ದರೆ ಮುಖ್ಯಮಂತ್ರಿಗಳ ಬಳಿಗೆ ಹೋಗೋಣ’ ಎಂದು ಹೇಳಿದರು.


ರಾಜ್ಯದಲ್ಲಿ ಕೈಗಾರಿಕೆಗಳ ಸ್ಥಾಪನೆ ಕೂಡ ಅಗತ್ಯವಾಗಿದೆ. ಏಕೆಂದರೆ, ಇದರಲ್ಲಿ ಬಂಡವಾಳ ಹೂಡಿಕೆ ಮತ್ತು ಯುವಜನರಿಗೆ ಉದ್ಯೋಗಸೃಷ್ಟಿಯ ಪ್ರಶ್ನೆ ಇದೆ. ಹಾಗೆಂದ ಮಾತ್ರಕ್ಕೆ ಸರಕಾರವು ಕೃಷಿಕರಿಗೆ ವಿರುದ್ಧವಾಗಿಲ್ಲ. ಸ್ವಾಧೀನ ಪಡಿಸಿಕೊಳ್ಳುವ ಜಮೀನಿಗೆ ಒಳ್ಳೆಯ ಪರಿಹಾರ ಕೊಡಲಾಗುವುದು. ಇದು ಬೇಡದೆ ಹೋದರೆ, ಕೆಐಎಡಿಬಿ ವತಿಯಿಂದ ಅಭಿವೃದ್ಧಿಪಡಿಸಲಾಗುವ ಬಡಾವಣೆಯಲ್ಲಿ ಪ್ರತೀ ಒಂದು ಎಕರೆ ಸ್ವಾಧೀನಕ್ಕೆ10,800 ಚದುರ ಅಡಿ ಜಾಗವನ್ನು ಪರಿಹಾರದ ರೂಪದಲ್ಲಿ ನೀಡುವುದಕ್ಕೂ ಅವಕಾಶವಿದೆ. ಈ ಜಮೀನನ್ನು ರೈತರು ವಾಣಿಜ್ಯೋದ್ದೇಶಕ್ಕೆ ಉಪಯೋಗಿಸಿಕೊಳ್ಳಬಹುದು ಎಂದು ಅವರು ವಿವರಿಸಿದರು.


ಕೆಐಎಡಿಬಿ ಕೇವಲ ದೇವನಹಳ್ಳಿಯ ಸುತ್ತಮುತ್ತ ಮಾತ್ರ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳುತ್ತಿಲ್ಲ.ಉದ್ಯಮಗಳಿಗಾಗಿ ರಾಜ್ಯದ ಎಲ್ಲ ಕಡೆಗಳಲ್ಲೂ ಈ ಪ್ರಕ್ರಿಯೆ ನಡೆಯುತ್ತಿದೆ. ಏಕೆಂದರೆ, ರಾಜ್ಯದ ಎಲ್ಲ ಕಡೆಗಳಲ್ಲೂ ಕೈಗಾರಿಕೆಗಳು ನೆಲೆಯೂರುವಂತೆ ನೋಡಿಕೊಳ್ಳುವುದು ಸರಕಾರದ ಆದ್ಯತೆಗಳಲ್ಲಿ ಒಂದಾಗಿದೆ ಎಂದು ಅವರು ರೈತ ಮುಖಂಡರಿಗೆ ಮನವರಿಕೆ ಮಾಡಿಕೊಟ್ಟರು.


ಇದನ್ನೂ ಓದಿ: ಸಚಿವರ ಮೇಲೆ ಹಣದ ಸುರಿಮಳೆ..! ಕಾಂಗ್ರೆಸ್‌ ನಾಯಕರ ಕಾಲಡಿ ನೋಟುಗಳ ರಾಶಿ


ಸಭೆಯಲ್ಲಿ ಕೈಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷ ಸಿ.ನಾರಾಯಣಸ್ವಾಮಿ, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ.ಶಿವಶಂಕರ, ಕೆಐಎಡಿಬಿ ಸಿಇಒ ಡಾ.ಮಹೇಶ್ ಉಪಸ್ಥಿತರಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್