ಬೆಂಗಳೂರು: ಅನಾರೋಗ್ಯದಿಂದ ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದ ಸಚಿವ ಡಿ.ಕೆ. ಶಿವಕುಮಾರ್, ಗುರುವಾರ ಸಂಜೆ ಡಿಸ್ಚಾರ್ಜ್ ಆದ ಬಳಿಕ ನೇರವಾಗಿ ಸಿದ್ದರಾಮಯ್ಯ ಅವರ ಕಾವೇರಿ ನಿವಾಸಕ್ಕೆ ತೆರಳಿದ್ದರು. ಇವರಿಗೆ ಸಹೋದರ ಡಿ.ಕೆ. ಸುರೇಶ್ ಸಹ ಸಾತ್ ನೀಡಿದ್ದರು. ಇದು ರಾಜಕೀಯ ವಲಯದಲ್ಲಿ ಬಹಳ ಕುತೂಹಲ ಮೂಡಿಸಿತ್ತು.


COMMERCIAL BREAK
SCROLL TO CONTINUE READING

ಡಿ.ಕೆ. ಶಿವಕುಮಾರ್ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಜತೆ ತಮ್ಮ ಕಾವೇರಿ ನಿವಾಸದಲ್ಲಿ ಗುರುವಾರ ರಾತ್ರಿವರೆಗೂ ದಿಢೀರ್ ಸಭೆ ನಡೆಸಿದ್ದ ಸಿದ್ದರಾಮಯ್ಯ, ಮಾತುಕತೆ ಮುಗಿಯುತ್ತಿದ್ದಂತೆಯೇ ಬಿಜೆಪಿ ವಿರುದ್ಧ ಹರಿಹಾಯ್ದು ಟ್ವೀಟ್ ಮಾಡಿದ್ದಾರೆ.


ಸಿದ್ದಾಂತ ಮಾತನಾಡುವ ಬಿಜೆಪಿಯವರು ಅಧಿಕಾರಕ್ಕಾಗಿ ಹೀನ ಮಟ್ಟದ ರಾಜಕೀಯಕ್ಕೆ ಇಳಿದಿದ್ದಾರೆ. ಚುನಾವಣೆಯಲ್ಲಿ ಸೋತವರು ವಿರೋಧ ಪಕ್ಷವಾಗಿ ಕೆಲಸ ಮಾಡಬೇಕು ಅದನ್ನು ಬಿಟ್ಟು ಸರ್ಕಾರವನ್ನು ಅಸ್ಥಿರಗೊಳಿಸುವ ಅನೀತಿಯುತ ಪ್ರಯತ್ನ ಮಾಡಬಾರದು.



ರಾಜ್ಯದ ಜನ ಇದನ್ನು ಗಮನಿಸುತ್ತಾ ಇದ್ದಾರೆ, ಅವರೇ ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತಾರೆ ಎಂದು ಸಿದ್ದರಾಮಯ್ಯ ಒಂದು ಟ್ವೀಟ್‌ನಲ್ಲಿ ಹೇಳಿದ್ದಾರೆ. ಅಲ್ಲದೆ ಬಿಜೆಪಿ ಮತ್ತು ಅವರ ಸುಳ್ಳುಗಳು ಎಂಬ ಹ್ಯಾಷ್‌ಟ್ಯಾಗ್ ಬಳಿಸಿದ್ದಾರೆ.


ಕಾಂಗ್ರೆಸ್‌ನ ಯಾವೊಬ್ಬ ಶಾಸಕನೂ ಮುಂಬೈಗೆ ಹೋಗಿಲ್ಲ:
ಬಳಿಕ ಮಾಡಿರುವ ಮತ್ತೊಂದು ಟ್ವೀಟ್‌ನಲ್ಲಿ, ಕಾಂಗ್ರೆಸ್‌ನ ಯಾವೊಬ್ಬ ಶಾಸಕನೂ ಮುಂಬೈಗೆ ಹೋಗಿಲ್ಲ, ಸರ್ಕಾರ ಸುಭದ್ರವಾಗಿದೆ. ನರೇಂದ್ರ ಮೋದಿಯವರು ಜನರ ಅಕೌಂಟ್‌ಗೆ ಹಾಕುತ್ತೇನೆ ಎಂದು ಹೇಳಿದ್ದ ಮೊತ್ತದ ನೂರು ಪಟ್ಟು ಹೆಚ್ಚು ಹಣ ನೀಡುತ್ತೇವೆ ಎಂದು ನಮ್ಮ ಶಾಸಕರಿಗೆ ಬಿಜೆಪಿಯವರು ಆಮಿಷವೊಡ್ಡುತ್ತಿದ್ದಾರೆ‌, ಆದರೆ ನಮ್ಮ ಶಾಸಕರು ಆಮಿಷಗಳಿಗೆ ಬಲಿಯಾಗಿ ಕೋಮುವಾದಿಗಳೊಂದಿಗೆ ಕೈಜೋಡಿಸುವುದಿಲ್ಲ ಎಂದು ಅವರು ತಿಳಿಸಿದ್ದಾರೆ.